West Bengal Panchayat Polls
West Bengal Panchayat Polls 
ಸುದ್ದಿಗಳು

ನ್ಯಾಯಾಲಯದ ಆದೇಶ ಜಾರಿಗೊಳಿಸಲಾಗದಿದ್ದರೆ ಚುನಾವಣಾ ಆಯುಕ್ತರು ಹುದ್ದೆ ತ್ಯಜಿಸಲಿ: ಕಲ್ಕತ್ತಾ ಹೈಕೋರ್ಟ್ ಕೆಂಡಾಮಂಡಲ

Bar & Bench

ಮುಂಬರುವ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ನಿಯೋಜಿಸಲಾದ ಕೇಂದ್ರೀಯ ಅರೆಸೇನಾ ಪಡೆಗಳ ಉದ್ದೇಶಿತ ಸಂಖ್ಯೆಯನ್ನು 24 ಗಂಟೆಗಳ ಒಳಗೆ ಹೆಚ್ಚಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್‌ ಬುಧವಾರ ರಾಜ್ಯ ಚುನಾವಣಾ ಆಯೋಗಕ್ಕೆ ತಾಕೀತು ಮಾಡಿದೆ [ಸುವೆಂದು ಅಧಿಕಾರಿ ಮತ್ತು ರಾಜೀವ್ ಸಿನ್ಹಾ, ರಾಜ್ಯ ಚುನಾವಣಾ ಆಯೋಗ  ನಡುವಣ ಪ್ರಕರಣ].

ಸುಮಾರು 1,700 ಸೇನಾ ಸಿಬ್ಬಂದಿಯನ್ನು ಚುನಾವಣೆ ವೇಳೆ ನಿಯೋಜಿಸಲು ಉದ್ದೇಶಿಸಲಾಗಿದ್ದು ಈ ಸಂಖ್ಯೆ ಸಂಪೂರ್ಣ ಅಸಮರ್ಪಕ ಎಂದು ಗಮನಿಸಿದ  ನ್ಯಾಯಾಲಯ ಈ ಆದೇಶ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ  ಹಿಂದಿನ ಆದೇಶಗಳನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದರೂ ಸಹ ರಾಜ್ಯ ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿ ಅವುಗಳನ್ನು ಪಾಲಿಸಿಲ್ಲ ಎಂದು  ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಉದಯ್ ಕುಮಾರ್ ಅವರಿದ್ದ ಹೈಕೋರ್ಟ್‌ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.   

ಹೀಗಾಗಿ ನ್ಯಾಯಾಲಯದ ನಿರ್ದೇಶನ ಪಾಲಿಸಲು ಸಾಧ್ಯವಾಗದೇ ಇದ್ದಲ್ಲಿ ಚುನಾವಣಾ ಆಯುಕ್ತರು ತಮ್ಮ ಹುದ್ದೆ ತ್ಯಜಿಸಬಹುದು ಎಂದು ಪೀಠ ಕಿಡಿಕಾರಿದೆ.

“ನಾವು ಆಯೋಗದ (ರಾಜ್ಯ ಚುನಾವಣಾ ಆಯೋಗ) ಸ್ವಾತಂತ್ರ್ಯವನ್ನು ಅನುಮಾನಿಸಬೇಕೇ? ಹಾಗಾಗಬಾರದು... ನೀವು ಸುಪ್ರೀಂ ಕೋರ್ಟ್‌ಗೆ ಹೋಗಿದ್ದೀರಿ, ನ್ಯಾಯಾಲಯ ನಿರ್ದೇಶನಗಳನ್ನು ನೀಡಿದೆ.. ತೀರ್ಪನ್ನು ಸೂಕ್ತ ರೀತಿಯಲ್ಲಿ ಸ್ವೀಕರಿಸಿ. ಅಗತ್ಯವಿರುವುದನ್ನು ಮಾಡಿ, ನಾವು ಗೆರೆ ಹಾಕುವಂತೆ ಮಾಡದಿರಿ ... [ಚುನಾವಣಾ] ಆಯುಕ್ತರಿಗೆ ಆದೇಶಗಳನ್ನು ಸ್ವೀಕರಿಸುವುದು ತುಂಬಾ ಕಷ್ಟಕರವಾದರೆ, ಅವರು ಹುದ್ದೆಯಿಂದ ಕೆಳಗಿಳಿಯಬಹುದು. ರಾಜ್ಯಪಾಲರು ಬೇರೆಯವರನ್ನು ನೇಮಿಸಲಿ... ಏಕೆಂದರೆ ಅದು ಬಹಳ ಮುಖ್ಯವಾದ ಹುದ್ದೆ, ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ರಾಜ್ಯ ಚುನಾವಣಾ ಆಯೋಗ ತಟಸ್ಥ ಸಂಸ್ಥೆಯಾಗಿರಬೇಕು ಎಂದು ನಿರೀಕ್ಷಿಸಲಾಗಿದ್ದು  ಆಯೋಗವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ನಿರ್ಧಾರವನ್ನು ಏಕೆ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ತಾನು ವಿಫಲವಾಗಿರುವುದಾಗಿ ನ್ಯಾಯಾಲಯ ಮೌಖಿಕವಾಗಿ ಟೀಕಿಸಿತು.

"ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ನ್ಯಾಯಾಲಯ ಕಳೆದುಕೊಳ್ಳಬಾರದು . ಅಂತಿಮವಾಗಿ, ಜನರು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲು ಆರಂಭಿಸಿದರೆ, ಚುನಾವಣೆಗಳನ್ನು ನಡೆಸುವ ಉದ್ದೇಶವಾದರೂ ಏನು?" ಎಂದು ಮುಖ್ಯ ನ್ಯಾಯಮೂರ್ತಿ ತರಾಟೆಗೆ ತೆಗೆದುಕೊಂಡರು.

ಈಗ ರಾಜ್ಯದ ಜಿಲ್ಲೆಗಳ ಸಂಖ್ಯೆ  17ರಿಂದ 22ಕ್ಕೆ ಹೆಚ್ಚಿದೆ ಎಂಬುದನ್ನು ಪರಿಗಣಿಸಿ  2013ರ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದ ಕನಿಷ್ಠ 82,000 ಕೇಂದ್ರ ಸಿಬ್ಬಂದಿಗಿಂತಲೂ ಹೆಚ್ಚಿನ  ಸಿಬ್ಬಂದಿಯನ್ನು ನಿಯೋಜಿಸಬೇಕು. 2013 ಮತ್ತು 2023 ರ ನಡುವೆ ಮತದಾರರ ಸಂಖ್ಯೆಯೂ  ಹೆಚ್ಚಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ವಿವರಿಸಿದೆ.

ಸೇನಾಪಡೆಯನ್ನು ಮತದಾನ ನಿಗದಿಯಾದ ಜುಲೈ 8ಕ್ಕಿಂತ ಎರಡು ದಿನಗಳ ಮೊದಲು ನಿಯೋಜಿಸಲಾಗಿದ್ದು ಇದರಿಂದ ಪೊಲೀಸ್‌ ಅಧಿಕಾರಿಗಳಿಗೆ ಕಾರ್ಯ ನಿರ್ವಹಿಸಲು ಸಮಯಾವಕಾಶ ದೊರೆಯುವುದಿಲ್ಲ. ಸಂಪೂರ್ಣ ಚುನಾವಣಾ ಪ್ರಕ್ರಿಯೆಗೆ ಸೇನಾಪಡೆ ನಿಯೋಜನೆಯಾಗುವಂತೆ ರಾಜ್ಯ ಚುನಾವಣಾ ಆಯೋಗ ಕೋರಿಕೆ ಸಲ್ಲಿಸಬೇಕೆ ವಿನಾ ಕೇವಲ ಮತದಾನ ನಡೆಯುವ ದಿನಕ್ಕಾಗಿ ಅಲ್ಲ ಎಂದು ಬುದ್ಧಿಮಾತು ಹೇಳಿದ ನ್ಯಾಯಾಲಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.  

ಈ ಮಧ್ಯೆ ರಾಜ್ಯದಲ್ಲಿನ ಚುನಾವಣಾ ಪರಿಸ್ಥಿತಿ ಕುರಿತು ಮುಕ್ತ ಮತ್ತು ಪ್ರಾಮಾಣಿಕ ಪರಾಮರ್ಶೆ ನಡೆಯಬೇಕು ಎಂದು ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಆದೇಶಿಸಿದ್ದು ನಿರ್ದೇಶನ ಕಾರ್ಯ ಸಾಧ್ಯವಾಗದಂತೆ ಮಾಡಲು ಯತ್ನಿಸಿದರೆ ಪ್ರತಿಕೂಲ ಪರಿಣಾಮ ಎದುರಿಸಬೇಕಾದೀತು ಎಂದು ಕೂಡ ಎಚ್ಚರಿಕೆ ನೀಡಿದೆ.

ನ್ಯಾಯಾಲಯದ ತೀರ್ಪು ಪಾಲಿಸದೆ ಆಯೋಗ ವಂಚಿಸುತ್ತಿದೆ ಎಂದು ದೂರಿ ವಿರೋಧಪಕ್ಷದ ನಾಯಕ ಮತ್ತು ಬಿಜೆಪಿ ಧುರೀಣ ಸುವೆಂದು ಅಧಿಕಾರಿ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ಹಿನ್ನೆಲೆಯಲ್ಲಿ ಪೀಠ ಈ ಆದೇಶಗಳನ್ನು ರವಾನಿಸಿದೆ.