ಪಶ್ಚಿಮ ಬಂಗಾಳದಲ್ಲಿ ಮುಂಬರುವ ಪಂಚಾಯತ್ ಚುನಾವಣೆಗೆ ಕೇಂದ್ರದ ಸೇನಾಪಡೆಗಳನ್ನು ನಿಯೋಜಿಸುವಂತೆ ನಿರ್ದೇಶಿಸಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಮತಾ ಬ್ಯಾನರ್ಜಿ ಸರ್ಕಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಸುಪ್ರೀಂ ಕೋರ್ಟ್ ಮೊರೆ ಹೋಗಿವೆ.
ರಾಜ್ಯ ಚುನಾವಣಾ ಆಯೋಗ ತಕ್ಷಣವೇ ಕೇಂದ್ರೀಯ ಪಡೆಗಳನ್ನು ನಿಯೋಜಿಸಲು ಕೋರಿಕೆ ಸಲ್ಲಿಸಬೇಕು ಅದರಲ್ಲಿಯೂ ಆಯೋಗ ಸೂಕ್ಷ್ಮ ಎಂದು ಘೋಷಿಸಿರುವ ಕ್ಷೇತ್ರಗಳಲ್ಲಿ ಆ ಪಡೆಗಳನ್ನು ನಿಯೋಜಿಸಬೇಕು ಎಂದು ಹೈಕೋರ್ಟ್ ಜೂನ್ 13ರಂದು ನಿರ್ದೇಶಿಸಿತ್ತು.
ಆದರೆ ಕೇಂದ್ರ ಸರ್ಕಾರ ಅರೆ ಸೇನಾಪಡೆಗಳನ್ನು ನಿಯೋಜಿಸುವಂತೆ ವಿನಂತಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಜೂನ್ 15ರಂದು, ಹೈಕೋರ್ಟ್ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತ್ತು. ಜೊತೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ತಕ್ಷಣವೇ ಅರೆ ಸೇನಾಪಡೆ ನಿಯೋಜಿಸುವಂತೆ ತಾನು ನೀಡಿದ ನಿರ್ದೇಶನವನ್ನು 48 ಗಂಟೆಗಳ ಒಳಗೆ ಜಾರಿಗೆ ತರಬೇಕು ಎಂದು ಜೂನ್ 15ರಂದು ಅದು ತಾಕೀತು ಮಾಡಿತು.
ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ರಾಜ್ಯ ಚುನಾವಣಾ ಆಯೋಗದ ಪರವಾಗಿ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು ಸೋಮವಾರ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎಂ ಎಂ ಸುಂದರೇಶ್ ಅವರಿದ್ದ ಪೀಠೆದೆದುರು ಪ್ರಕರಣವನ್ನು ಪ್ರಸ್ತಾಪಿಸಿದರು. ಮಂಗಳವಾರ ಅರ್ಜಿ ಆಲಿಸಲು ನ್ಯಾಯಾಲಯ ಸಮ್ಮತಿ ಸೂಚಿಸಿತು.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ್ದ ಮನವಿಯ ಮೇರೆಗೆ ಹೈಕೋರ್ಟ್ ಈ ಆದೇಶ ನೀಡಿತ್ತು. ಮುಂಬರುವ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಗಡುವು ವಿಸ್ತರಿಸುವಂತೆ ನಿರ್ದೇಶನ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಆದರೆ ಕೇಂದ್ರೀಯ ಪಡೆಗಳ ನಿಯೋಜನೆಗೆ ಸಂಬಂಧಿಸಿದ ಮನವಿಯನ್ನು ಅದು ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಗಳು ಅರ್ಜಿ ಸಲ್ಲಿಸಿವೆ.