Supreme Court, West Bengal 
ಸುದ್ದಿಗಳು

ಪ.ಬಂಗಾಳ ಎಸ್‌ಐಆರ್‌ಗೆ ವೇಗ: ಸಿವಿಲ್‌ ನ್ಯಾಯಾಧೀಶರು, ಹೊರ ರಾಜ್ಯಗಳ ನ್ಯಾಯಾಂಗ ಅಧಿಕಾರಿಗಳ ನೇಮಕಕ್ಕೆ ಸುಪ್ರೀಂ ಸೂಚನೆ

ಎಸ್‌ಐಆರ್‌ ಪ್ರಕ್ರಿಯೆ ಸುಗುಮವಾಗಿ ನಡೆಯುವ ನಿಟ್ಟಿನಲ್ಲಿ ಹಾಲಿ ಹಾಗೂ ನಿವೃತ್ತ ನ್ಯಾಯಾಧೀಶರನ್ನು ನಿಯೋಜಿಸುವಂತೆ ಸುಪ್ರೀಂ ಕೋರ್ಟ್‌ ಫೆಬ್ರವರಿ 20ರಂದು ಆದೇಶಿಸಿತ್ತು.

Bar & Bench

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಆಮೂಲಾಗ್ರ ಪರಿಷ್ಕರಣೆ ಪ್ರಕ್ರಿಯೆ ತ್ವರಿತಗೊಳಿಸುವುದಕ್ಕಾಗಿ ಕನಿಷ್ಠ ಮೂರು ವರ್ಷ ಸೇವಾನುಭವ ಇರುವ ಸಿವಿಲ್‌ ನ್ಯಾಯಾಧೀಶರನ್ನೂ ನೇಮಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಕಲ್ಕತ್ತಾ ಹೈಕೋರ್ಟ್‌ಗೆ ಅನುಮತಿಸಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗದ (ಇಸಿಐ) ನಡುವೆ ಸಹಕಾರದ ಕೊರತೆ ಇರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಈಚೆಗೆ ತಿಳಿಸಿದ್ದ ಸುಪ್ರೀಂ ಕೋರ್ಟ್‌ ಅಪರೂಪದ ಬೆಳವಣಿಗೆ ಎಂಬಂತೆ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ನಿವೃತ್ತ ನ್ಯಾಯಾಧೀಶರು ಸೇರಿದಂತೆ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸುವಂತೆ ಆದೇಶಿಸಿತ್ತು.

ಆದರೆ ಎಸ್‌ಐಆರ್‌ ಪ್ರಕ್ರಿಯೆಯ ಅಗಾಧತೆಯನ್ನು ಸುಪ್ರೀಂ ಕೋರ್ಟ್‌ಗೆ ಅರುಹಿರುವ ಕಲ್ಕತ್ತಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರು ಹೆಸರು, ಅಕ್ಷರ ದೋಷ  ಮತ್ತು ಅವರ್ಗೀಕೃತ ವಿಭಾಗದಡಿ ಬರುವ ಸುಮಾರು 50 ಲಕ್ಷ ಮತದಾರರ ಪ್ರಕರಣಗಳನ್ನು ಪರಿಶೀಲಿಸುವ ಹೊಣೆಯನ್ನು ಸುಮಾರು 250 ನ್ಯಾಯಾಂಗ ಅಧಿಕಾರಿಗಳಿಗೆ ನೀಡಲಾಗಿದೆ. ಒಬ್ಬ ನ್ಯಾಯಾಧೀಶರು ದಿನಕ್ಕೆ 250 ಪ್ರಕರಣಗಳನ್ನು ತೀರ್ಮಾನಿಸಿದರೂ, ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 80 ದಿನಗಳು ಬೇಕಾಗಬಹುದು ಎಂದು ತಿಳಿಸಿದ್ದರು.

ಸಮರೋಪಾದಿಯಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕಾಗಿ  ಕನಿಷ್ಠ ಮೂರು ವರ್ಷದ ಅನುಭವ ಹೊಂದಿರುವ ಸಿವಿಲ್ ನ್ಯಾಯಾಧೀಶರನ್ನೂ ನಿಯೋಜಿಸಲು ಸಿಜೆಐ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್‌ ಪಂಚೋಲಿ ಅವರಿದ್ದ ಪೀಠ ಇಂದು ಅನುಮತಿ ನೀಡಿತು.

ಅಗತ್ಯವಿದ್ದರೆ ಒರಿಸ್ಸಾ ಹೈಕೋರ್ಟ್‌, ಜಾರ್ಖಂಡ್‌ ಹೈಕೋರ್ಟ್‌ಗಳ್ಲಲಿನ ಹಾಲಿ ಅಥವಾ ನಿವೃತ್ತ ನ್ಯಾಯಾಂಗ ಅಧಿಕಾರಿಗಳನ್ನೂ ಕರೆಸಿಕೊಳ್ಳಬೇಕು. ಅವರಿಗೆ ತಗಲುವ ವೆಚ್ಚವನ್ನು ಭಾರತೀಯ ಚುನಾವಣಾ ಆಯೋಗ ಭರಿಸಬೇಕು ಎಂದು ಸೂಚಿಸಿತು.

ಫೆಬ್ರವರಿ 14, 2026ರೊಳಗೆ ಎಲೆಕ್ಟ್ರಾನಿಕ್ ಅಥವಾ ಭೌತಿಕವಾಗಿ ಸಲ್ಲಿಸಲಾದ ಮಾನ್ಯ ದಾಖಲೆಗಳನ್ನು ಪರಿಗಣಿಸಬೇಕು ಎಂದು ಪೀಠ ಸ್ಪಷ್ಟಪಡಿಸಿದೆ. ಫೆಬ್ರವರಿ 28ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಬೇಕು. ನಂತರದ ಪೂರಕಪಟ್ಟಿಯಲ್ಲಿರುವ ಮತದಾರರನ್ನೂ ಅಂತಿಮ ಪಟ್ಟಿಯ ಭಾಗವೆಂದು ಸಂವಿಧಾನದ 142ನೇ ವಿಧಿಯಡಿ ಘೊಷಿಸಬೇಕು ಎಂದು ಅದು ತಿಳಿಸಿದೆ.