ಪ. ಬಂಗಾಳ ಎಸ್‌ಐಆರ್‌: ನ್ಯಾಯಾಧೀಶರುಗಳ ರಜೆ ರದ್ದು, ಬೇರೆ ನ್ಯಾಯಾಲಯಗಳಿಗೆ ತುರ್ತು ಪ್ರಕರಣಗಳ ವರ್ಗಾಯಿಸಲು ಆದೇಶ

ಫೆಬ್ರವರಿ 21ರಿಂದ ಮಾರ್ಚ್ 09ರವರೆಗೆ ನ್ಯಾಯಾಂಗ ಅಧಿಕಾರಿಗಳು ಯಾವುದೇ ರಜೆ ತೆಗೆದುಕೊಳ್ಳಬಾರದೆಂದು ಸೂಚಿಸಲಾಗಿದೆ.
West Bengal and Election Commission
West Bengal and Election Commission
Published on

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಆಮೂಲಾಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳಿಸಲು ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸುವಂತೆ ಸುಪ್ರೀಂ ಕೋರ್ಟ್‌ ಕೆಲ ದಿನಗಳ ಹಿಂದಷ್ಟೇ ಆದೇಶಿಸಿದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಮುಗಿಯುವವರೆಗೆ ಎಲ್ಲಾ ನ್ಯಾಯಾಂಗ ಅಧಿಕಾರಿಗಳ ರಜೆ ರದ್ದುಗೊಳಿಸಲು ಕಲ್ಕತ್ತಾ ಹೈಕೋರ್ಟ್‌ ನಿರ್ಧರಿಸಿದೆ.

ಫೆಬ್ರವರಿ 21ರಿಂದ ಮಾರ್ಚ್ 9ರವರೆಗೆ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಯಾವುದೇ ರಜೆ ಪಡೆಯಬಾರದೆಂದು ಹೈಕೋರ್ಟ್ ಸೂಚಿಸಿದೆ. ಇದೇ ವೇಳೆ, ಪಶ್ಚಿಮ ಬಂಗಾಳ ನ್ಯಾಯಾಂಗ ಅಕಾಡೆಮಿಯಲ್ಲಿ ನಿಗದಿಯಾಗಿದ್ದ ತರಬೇತಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.

Also Read
ಪ. ಬಂಗಾಳ ಸರ್ಕಾರ, ಇಸಿಐ ಕೆಸರೆರಚಾಟ: ಎಸ್‌ಐಆರ್‌ ಪ್ರಕ್ರಿಯೆಗಾಗಿ ನ್ಯಾಯಾಂಗ ಅಧಿಕಾರಿಗಳ ನಿಯೋಜನೆಗೆ ಸುಪ್ರೀಂ ಆದೇಶ

“ಮೇಲ್ಕಂಡ ಹುದ್ದೆಯ ಎಲ್ಲಾ ನ್ಯಾಯಾಂಗ ಅಧಿಕಾರಿಗಳು (ಮುಂಚಿತವಾಗಿ ಅನುಮೋದಿತ ಅಥವಾ ಇತರ ರೀತಿಯ ರಜೆಯಲ್ಲಿದ್ದರೂ) 23.02.2026 (ಪೂರ್ವಾಹ್ನ)ರೊಳಗೆ ತಮ್ಮ ತಮ್ಮ ನ್ಯಾಯಾಲಯಗಳು ಮತ್ತು ಕಚೇರಿಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. 09.03.2026ರವರೆಗೆ (ವೈದ್ಯಕೀಯ ತುರ್ತು ಪರಿಸ್ಥಿತಿ ಹೊರತುಪಡಿಸಿ) ಮಂಜೂರಾದ ಎಲ್ಲಾ ರಜೆಗಳು, ಮಾನ್ಯ ನ್ಯಾಯಾಲಯದಿಂದ ಅನುಮೋದಿತವಾಗಿದ್ದರೂ ಸಹ, ಈ ಮೂಲಕ ರದ್ದುಗೊಳ್ಳುತ್ತವೆ” ಎಂದು ಹೈಕೋರ್ಟ್ ಪ್ರಕಟಣೆ ತಿಳಿಸಿದೆ.

Also Read
ಎಸ್‌ಐಆರ್‌ಗೆ ಅಡ್ಡಿ ಸಲ್ಲದು: ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗದ (ಇಸಿಐ) ನಡುವೆ ಸಹಕಾರದ ಕೊರತೆ ಇರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಈಚೆಗೆ ತಿಳಿಸಿದ್ದ ಸುಪ್ರೀಂ ಕೋರ್ಟ್‌ ಅಪರೂಪದ ಬೆಳವಣಿಗೆ ಎಂಬಂತೆ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ನಿವೃತ್ತ ನ್ಯಾಯಾಧೀಶರು ಸೇರಿದಂತೆ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸುವಂತೆ ಆದೇಶಿಸಿತ್ತು.

ಪ್ರತಿ ಜಿಲ್ಲೆಯಲ್ಲಿ ಸೇವೆಯಲ್ಲಿರುವ ಹಾಗೂ ನಿವೃತ್ತ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಿ ಬಾಕಿ ಇರುವ ಅರ್ಜಿಗಳನ್ನು ಮರುಪರಿಶೀಲಿಸುವಂತೆ ಸೂಚಿಸಿತ್ತು. ತುರ್ತು ಮತ್ತು ಮಧ್ಯಂತರ ಪರಿಹಾರ ಸಂಬಂಧಿತ ಪ್ರಕರಣಗಳನ್ನು ತಾತ್ಕಾಲಿಕವಾಗಿ ಪರ್ಯಾಯ ನ್ಯಾಯಾಲಯಗಳಿಗೆ ವರ್ಗಾಯಿಸಲು ಸಮಿತಿ ರಚಿಸಬೇಕು. ನ್ಯಾಯಾಂಗ ಅಧಿಕಾರಿಗಳು ನೀಡುವ ಆದೇಶಗಳನ್ನು ನ್ಯಾಯಾಲಯದ ಆದೇಶಗಳೆಂದು ಪರಿಗಣಿಸಿ, ರಾಜ್ಯ ಸರ್ಕಾರ ಅವುಗಳನ್ನು ಕೂಡಲೇ ಜಾರಿಗೆ ತರಬೇಕೆಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತ್ತು.

Kannada Bar & Bench
kannada.barandbench.com