ಸುದ್ದಿಗಳು

ಭಾರತೀಯ ವಕೀಲರು ಇಂಗ್ಲೆಂಡ್‌ನಲ್ಲಿ ಪ್ರಾಕ್ಟೀಸ್ ಮಾಡಲು ಇರುವ ಷರತ್ತುಗಳೇನು? ಇಲ್ಲಿದೆ ಒಡಂಬಡಿಕೆಯ ವಿವರ

ಕೆಲ ಚಟುವಟಿಕೆಗಳನ್ನು ಹೊರತುಪಡಿಸಿ, ಯುಕೆಗೆ ಸೇರಿದ ದೇಶಗಳಲ್ಲಿ ಇಂಗ್ಲಿಷ್ ಮತ್ತು ವೇಲ್ಸ್ ಸೇರಿದಂತೆ ಯಾವುದೇ ರೀತಿಯ ಕಾನೂನು ಪ್ರಾಕ್ಟೀಸ್ ಮಾಡಲು ಭಾರತೀಯ ವಕೀಲರು ಸ್ವತಂತ್ರರಾಗಿರುತ್ತಾರೆ.

Bar & Bench

ಇಂಗ್ಲೆಂಡ್‌ ಮತ್ತು ವೇಲ್ಸ್‌ನ ಕಾನೂನು ಸೇವಾ ಮಾರುಕಟ್ಟೆ ಕೆಲ ನಿರ್ಬಂಧಗಳಿಗೆ ಒಳಪಟ್ಟು ಭಾರತೀಯ ವಕೀಲರು ಮತ್ತು ಕಾನೂನು ಸಂಸ್ಥೆಗಳಿಗೆ ಮುಕ್ತವಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿರುವ ತನ್ನ ಸಹವರ್ತಿಗಳೊಂದಿಗೆ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಮಾಡಿಕೊಂಡಿರುವ ಒಡಂಬಡಿಕೆ ಸ್ಪಷ್ಟಪಡಿಸಿದೆ.

ಪರಸ್ಪರ ಅನುವು ಮಾಡಿಕೊಡುವ ಆಧಾರದಲ್ಲಿ ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆ ಗಳು ಭಾರತದಲ್ಲಿ ಪ್ರಾಕ್ಟೀಸ್‌ ಮಾಡಲು ಇಂಗ್ಲೆಂಡ್ ಮತ್ತು ವೇಲ್ಸ್‌ನ ವಕೀಲರ ಪರಿಷತ್ತು ಹಾಗೂ ಇಂಗ್ಲೆಂಡ್‌ ಮತ್ತು ವೇಲ್ಸ್‌ನ ಕಾನೂನು ಸೊಸೈಟಿಯೊಂದಿಗೆ ಬಿಸಿಐ ಜೂನ್ 5 ರಂದು ಮಾಡಿಕೊಂಡಿರುವ ಒಪ್ಪಂದ ಅವಕಾಶ ನೀಡುತ್ತದೆ.

ಭಾರತೀಯ ವಕೀಲರು ಯುಕೆಯಲ್ಲಿ ಪ್ರಾಕ್ಟೀಸ್‌ ಮಾಡಲು ಇರುವ ಷರತ್ತುಗಳನ್ನು ಒಪ್ಪಂದದಲ್ಲಿ ಸ್ಪಷ್ಟಪಡಿಸಲಾಗಿದೆ.  

ಅಂತರರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆ ಮತ್ತು ವ್ಯಾಜ್ಯವಲ್ಲದ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರ  ಭಾರತದಲ್ಲಿ ಇಂಗ್ಲೆಂಡ್‌ ಕಾನೂನು ಪ್ರಾಕ್ಟೀಸ್‌ ಮಾಡಲು ಇಂಗ್ಲೆಂಡ್‌ ಮತ್ತು ವೇಲ್ಸ್‌ನ ವಕೀಲರಿಗೆ ಅನುಮತಿ ನೀಡುವ ಬಿಸಿಐ ನಿಯಮಗಳನ್ನು ಬೆಂಬಲಿಸಲು ದ ಲಾ ಸೊಸೈಟಿ ಹಾಗೂ ಇಂಗ್ಲೆಂಡ್‌ ಮತ್ತು ವೇಲ್ಸ್‌ನ ವಕೀಲರ ಪರಿಷತ್ತುಗಳು ಒಪ್ಪಿಕೊಂಡಿವೆ.

ಯುಕೆಯಲ್ಲಿ ವಿದೇಶಿ ವಕೀಲರ ಪ್ರಾಕ್ಟೀಸ್‌ಗೆ ಸಂಬಂಧಿಸಿದ ಷರತ್ತು ಮತ್ತು ನಿರ್ಬಂದಗಳನ್ನು ಒಡಂಬಡಿಕೆಯ ಶೆಡ್ಯೂಲ್ ಎ ಒಳಗೊಂಡಿದೆ. ಕೆಳಗಿನ ಕೆಲ ಚಟುವಟಿಕೆಗಳನ್ನು ಹೊರತುಪಡಿಸಿ, ಯುಕೆಗೆ ಸೇರಿದ ದೇಶಗಳಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ನ ಯಾವುದೇ ರೀತಿಯ ಕಾನೂನು ಪ್ರಾಕ್ಟೀಸ್‌ ಮಾಡಲು ಭಾರತೀಯರು ಸೇರಿದಂತೆ ವಿದೇಶಿ ವಕೀಲರು ಸ್ವತಂತ್ರರಾಗಿರುತ್ತಾರೆ. ಈ ಕೆಳಗಿನ ನಿರ್ಬಂಧಗಳನ್ನು ಹೊರತುಪಡಿಸಿ ಅಲ್ಲಿ ಪ್ರಾಕ್ಟೀಸ್‌ ಮಾಡಲು ಬೇರೆ ಅರ್ಹತೆಯ ಅಗತ್ಯ ಇರುವುದಿಲ್ಲ:

  • ನ್ಯಾಯಾಲಯಗಳು ಮತ್ತು ಕೆಲವು ನ್ಯಾಯಮಂಡಳಿಗಳಲ್ಲಿ ಕಲಾಪದಲ್ಲಿ ಭಾಗಿಯಾಗುವ ಪ್ರೇಕ್ಷಕರಿಗೆಂದು ಇರುವ ಹಕ್ಕನ್ನು ಚಲಾಯಿಸುವುದು.

  • ದಾವೆ ನಡೆಸುವುದು

  • ರಿಸರ್ವ್ಡ್ ಇನ್‌ಸ್ಟ್ರುಮೆಂಟ್‌ ಚಟುವಟಿಕೆಗಳು

  • ಪ್ರೊಬೇಟ್ ಚಟುವಟಿಕೆಗಳು

  • ನೋಟರಿ ಚಟುವಟಿಕೆಗಳು

  • ಪ್ರಮಾಣ ವಚನ ಬೋಧನೆ

ವಿದೇಶಿ ವಕೀಲರು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಹೀಗೆ ಪ್ರಾಕ್ಟೀಸ್‌ ಮಾಡಬಹುದು: ಎ) ಏಕ ವಕೀಲರಾಗಿ ಬಿ) ವಿದೇಶಿ ವಕೀಲರ ಸಹಭಾಗಿತ್ವದಲ್ಲಿ ಸಿ) ವಿದೇಶಿ ವಕೀಲಿಕೆ ಸಂಸ್ಥೆಯ ಸಹಾಯಕ ಅಥವಾ ಸಲಹೆಗಾರನಾಗಿ, ಡಿ) ವಕೀಲರ ಪಾಲುದಾರಿಕೆಯಲ್ಲಿ , ಇ) ಸಾಲಿಸಿಟರ್‌ ಅವರ ಉದ್ಯೋಗಿಯಾಗಿ ಮತ್ತು ಎಫ್‌) ಸ್ಥಾನಿಕ ವಕೀಲರಾಗಿ.

ಅದೇ ರೀತಿ, ವಿದೇಶಿ ವಕೀಲರು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಕಾನೂನು ಪ್ರಾಕ್ಟೀಸ್‌ ನಿಯಂತ್ರಿಸುವ ಅಧಿಕಾರ ಬಿಸಿಐಗೆ ಇದೆ ಎಂದು ಆ ಸಂಸ್ಥೆಗಳು ಒಪ್ಪಿಕೊಂಡಿವೆ. 2022ರ ಬಿಸಿಐ ನಿಯಮಗಳು ಈ ನಿಟ್ಟಿನಲ್ಲಿ ಒಡಂಬಡಿಕೆ ಮೇಲೆ ಅತಿಕ್ರಮಣ ಪರಿಣಾಮ ಬೀರುತ್ತವೆ.

ಗಮನಾರ್ಹವಾಗಿ, ಬಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಾನು ಇತ್ತೀಚೆಗೆ ಜಾರಿಗೆ ತಂದಿರುವ ನಿಯಮಾವಳಿಗಳಲ್ಲಿ ವಿದೇಶಿ ಕಾನೂನು ಸಂಸ್ಥೆಗಳನ್ನು ಪರಸ್ಪರ ಅನುವು ಮಾಡುವ ಆಧಾರದ ಮೇಲೆ ಪ್ರವೇಶಿಸಲು ಅನುಮತಿಸುವ ನಿಟ್ಟಿನಲ್ಲಿ ಕೆಲ ನಿರ್ಣಾಯಕ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಹೇಳಿತ್ತು.

ಅಂತಹ ಬದಲಾವಣೆ ಮಾಡುವ ಮುನ್ನ ಭಾರತೀಯ ಕಾನೂನು ಸಂಸ್ಥೆಗಳು ಮತ್ತು ಭಾರತೀಯ ವಕೀಲರ ಒಂದು ವರ್ಗದ ಅಭಿಪ್ರಾಯ ಮತ್ತು ವಿದೇಶಿ ಸಂಸ್ಥೆಗಳ ಅಭಿಪ್ರಾಯಗಳನ್ನು ಪರಿಗಣಿಸುವುದಾಗಿ ಅದು ಹೇಳಿತ್ತು.