ತನ್ನ ವಿರುದ್ಧ ಐವರು ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣ ರದ್ದುಗೊಳಿಸುವಂತೆ ಕೋರಿ ಬಿಜೆಪಿ ಮಾಜಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣವನ್ನು ಸಂಪೂರ್ಣ ರದ್ದುಗೊಳಿಸುವಂತೆ ಸಿಂಗ್ ಮಾಡಿರುವ ಮನವಿ ಸುತ್ತಿಬಳಸಿದಂತಿದೆ ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಗುರುವಾರ ಹೇಳಿದರು.
ತಮ್ಮ ವಿರುದ್ಧದ ಆರೋಪ ನಿಗದಿ ಆದೇಶ ಹಾಗೂ ವಿಚಾರಣಾ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಏಕೆ ಸಿಂಗ್ ಅವರು ಒಂದೇ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ನ್ಯಾಯಾಲಯ ಪ್ರಶ್ನಿಸಿತು.
"ಪ್ರತಿಯೊಂದಕ್ಕೂ ಬಹುವಿಷಯಗಳನ್ನು ಒಳಗೊಳ್ಳುವ ಆದೇಶ (ಆಮ್ನಿಬಸ್ ಆದೇಶ) ಇರುವಂತಿಲ್ಲ. ಆರೋಪಕ್ಕೆ ಸಂಬಂಧಿಸಿದ ಆದೇಶ ರದ್ದುಗೊಳಿಸಲು ಬಯಸಿ ನೀವು ನ್ಯಾಯಾಲಯದ ಕದ ತಟ್ಟಬಹುದಿತ್ತು. ಒಮ್ಮೆ ವಿಚಾರಣೆ ಪ್ರಾರಂಭವಾದ ನಂತರ, ನೀವು ಸಲ್ಲಿಸಿರುವ ಈ ಅರ್ಜಿಯು ಸುತ್ತಿಬಳಸಿದಂತಿದೆ" ಎಂದು ಹೈಕೋರ್ಟ್ ಟೀಕಿಸಿದೆ.
ವಿಚಾರಣೆ ವೇಳೆ ಸಿಂಗ್ ಪರ ವಾದ ಮಂಡಿಸಿದ ವಕೀಲ ರಾಜೀವ್ ಮೋಹನ್ ಅವರು ಭಾರತೀಯ ಕುಸ್ತಿ ಒಕ್ಕೂಟದಿಂದ ಸಿಂಗ್ ಅವರನ್ನು ತೆಗೆದು ಹಾಕುವ ರಹಸ್ಯ ಅಜೆಂಡಾ ಕುಸ್ತಿಪಟುಗಳ ಆರೋಪದ ಹಿಂದಿದೆ ಎಂದು ದೂರಿದರು.
ಸಿಂಗ್ ಸಲ್ಲಿಸಿರುವ ಅರ್ಜಿ ನಿರ್ವಹಣಾರ್ಹತೆ ಪಡೆದಿಲ್ಲ ಎಂದು ದೆಹಲಿ ಪೊಲೀಸರು ಮತ್ತು ದೂರುದಾರ ಕುಸ್ತಿಪಟುಗಳು ವಾದಿಸಿದರು.
ವಾದ ಆಲಿಸಿದ ನ್ಯಾಯಾಲಯ ಎರಡು ವಾರಗಳಲ್ಲಿ ಕಿರು ಟಿಪ್ಪಣಿ ಸಿದ್ಧಪಡಿಸುವಂತೆ ಸಿಂಗ್ ಪರ ವಕೀಲರಿಗೆ ಸೂಚಿಸಿ ಸೆಪ್ಟೆಂಬರ್ 26ಕ್ಕೆ ಪ್ರಕರಣ ಮುಂದೂಡಿತು.