ಗರ್ಭಪಾತ ಕೋರಿ ಅತ್ಯಾಚಾರ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯ ಕುರಿತು ತಾನು ನಡೆಸಿದ್ದ ವಿಶೇಷ ವಿಚಾರಣೆಗೆ ಪ್ರತಿಕ್ರಿಯೆಯಾಗಿ ಗುಜರಾತ್ ಹೈಕೋರ್ಟ್ ನೀಡಿರುವ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಇದೊಂದು ʼತಿರುಗೇಟಿನʼ ಆದೇಶ ಎಂದು ಕಿಡಿಕಾರಿದೆ [ಗುರುತು ಮುಚ್ಚಿಡಲಾದ ಮಹಿಳೆ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣ] .
ಗರ್ಭಪಾತ ಪ್ರಕ್ರಿಯೆಗೆ ಸಂತ್ರಸ್ತೆ ವೈದ್ಯಕೀಯವಾಗಿ ಅರ್ಹರಿದ್ದಾರೆ ಎಂದು ವರದಿ ಸೂಚಿಸಿದ ಬಳಿಕ ನ್ಯಾ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠ ಸಂತ್ರಸ್ತೆಯ ಅರ್ಜಿಯನ್ನು ಪುರಸ್ಕರಿಸಿತು.
ಗುಜರಾತ್ ಹೈಕೋರ್ಟ್‌ನ ಏಕಸದಸ್ಯ ಪೀಠ ಆಗಸ್ಟ್ 17ರಂದು ಸಂತ್ರಸ್ತೆಯ ಮನವಿ ತಿರಸ್ಕರಿಸಿದ್ದರಿಂದ ಆಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಳು. ಶನಿವಾರ ಈ ಸಂಬಂಧ ವಿಶೇಷ ಕಲಾಪ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯ ಅರ್ಜಿಯನ್ನು ತುರ್ತಾಗಿ ಆಲಿಸಿತ್ತು. ಆ ಸಂದರ್ಭದಲ್ಲಿ ಭಾನುವಾರ (ನಿನ್ನೆ) ಸಂಜೆಯೊಳಗೆ ವೈದ್ಯಕೀಯ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಆದರೆ ಶನಿವಾರ ಹೈಕೋರ್ಟ್ ಕೂಡ ಕಾರ್ಯ ನಿರ್ವಹಿಸಿ ಆದೇಶ ಹೊರಡಿಸಿದೆ ಎಂಬ ಅಂಶವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಲಾಯಿತು. ತನ್ನ ಆದೇಶದಲ್ಲಿ ಹೈಕೋರ್ಟ್ ಗರ್ಭಪಾತದ ಕಾರಣಗಳಿಗೆ ಈ ಹಿಂದಿನ ಕಾರಣವನ್ನೇ ನೀಡಿ ತಿರಸ್ಕರಿಸಿತು. ಇದನ್ನು ಸುಪ್ರೀಂ ಕೋರ್ಟ್ ಮೌಖಿಕವಾಗಿ ಕಟುಪದಗಳಲ್ಲಿ ಟೀಕಿಸಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ನಮ್ಮ ಆದೇಶಕ್ಕೆ ಪ್ರತಿಯಾಗಿ ಹೈಕೋರ್ಟ್ ಆದೇಶ ನೀಡಿರುವುದು ಮೆಚ್ಚುವಂತದ್ದಲ್ಲ.
ಗುಜರಾತ್ ಹೈಕೋರ್ಟ್‌ನಲ್ಲಿ ಏನು ನಡೆಯುತ್ತಿದೆ?
ವಿಲೇವಾರಿ ಮಾಡಿದ್ದ ಪ್ರಕರಣದಲ್ಲಿ ಹೈಕೋರ್ಟ್ ಮತ್ತೆ ತೀರ್ಪು ನೀಡಿದೆಯೇ? ಹೇಗೆ?
ಮತ್ತೊಂದು ಕಡೆಗೆ ನೋಟಿಸ್ ನೀಡದೆಯೇ ಭಾರತದ ಯಾವುದೇ ನ್ಯಾಯಾಲಯ ಉನ್ನತ ನ್ಯಾಯಾಲಯದ ಆದೇಶದ ವಿರುದ್ಧ ಈ ರೀತಿಯ ಆದೇಶ ನೀಡುವಂತಿಲ್ಲ.
ಏಕಸದಸ್ಯ ಪೀಠ ಶನಿವಾರ ನೀಡಿದ ಆದೇಶ ಸುಪ್ರೀಂ ಕೋರ್ಟ್‌ನ ಇತ್ಯರ್ಥಗೊಂಡ ತೀರ್ಪುಗಳಿಗೆ ಸಂಪೂರ್ಣ ವಿರುದ್ಧವಾಗಿದೆ.
ಹೈಕೋರ್ಟ್ ತನ್ನ ನಡೆಯನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಇದು ಸಂವಿಧಾನದ ತತ್ವಕ್ಕೆ ವಿರುದ್ಧವಾಗಿದೆ. ಸಂತ್ರಸ್ತೆಗೆ ಆದ ಅನ್ಯಾಯವನ್ನು ಶಾಶ್ವತಗೊಳಿಸಬಹುದೇ?
"ತಪ್ಪು ತಿಳಿವಳಿಕೆಯಿಂದಾಗಿ ಹೈಕೋರ್ಟ್ ಹೀಗೆ ನಡೆದುಕೊಂಡಿದೆ. ಇದು ಕಾರಣ ವಿವರಿಸುವ ಆದೇಶವಾಗಿತ್ತು" ಎಂಬ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಮನವಿಗೆ ನ್ಯಾಯಾಲಯ ಸೊಪ್ಪು ಹಾಕಲಿಲ್ಲ. ಬದಲಿಗೆ ಆ ಆದೇಶವನ್ನು ಶನಿವಾರವೇ ನೀಡಬೇಕಿತ್ತೆ ಎಂದು ಅದು ಪ್ರಶ್ನಿಸಿತು. ಆಗ ಮೆಹ್ತಾ ಅವರು ಹೈಕೋರ್ಟ್ ಆದೇಶ ಹಿಂಡೆದಿರುವಂತೆ ಪರಿಗಣಿಸಿ ಎಂದರು. ಆಗ ಪೀಠ "ಹೈಕೋರ್ಟ್ ಆದೇಶವನ್ನು ನಾವು ಹೇಗೆ ಹಿಂಪಡೆಯಲು ಸಾಧ್ಯ/" ಎಂದು ಮತ್ತೆ ಪ್ರಶ್ನೆ ಕೇಳಿತು.
“ಯಾವುದೇ ನ್ಯಾಯಾಧೀಶರು ನಮ್ಮ ಆದೇಶಕ್ಕೆ ಪ್ರತಿ ಆದೇಶ ನೀಡುವಂತಿಲ್ಲ. ಇದು ಹಾಗೆ ಇರುವಂತೆ ತೋರುತ್ತಿದೆ” ಎಂದು ನ್ಯಾಯಾಲಯ ಗುಡುಗಿತು.
ಎಸ್‌ಜಿ ಅವರು ಹೈಕೋರ್ಟ್ ವಿರುದ್ಧ ಪ್ರತಿಕೂಲ ಕ್ರಮ ಕೈಗೊಳ್ಳದಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ಆಗ ನ್ಯಾಯಾಲಯ ಇದು ಯಾವುದೇ ತಮ್ಮ ಪ್ರತಿಕ್ರಿಯೆ ಯಾವುದೇ ನಿರ್ದಿಷ್ಟ ನ್ಯಾಯಾಧೀಶರ ವಿರುದ್ಧವಲ್ಲ ಎಂದಿತು.
ಈ ಮಧ್ಯೆ ಅತ್ಯಾಚಾರ ಸಂತ್ರಸ್ತೆ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಪಾರಿಖ್, ಗುಜರಾತ್ ಹೈಕೋರ್ಟ್ ತನ್ನ ವಿಚಾರಣೆಯನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಿರುವುದರಿಂದ ಹೈಕೋರ್ಟ್ ವಿಚಾರಣೆ ಸಾರ್ವಜನಿಕರಿಗೆ ತಲುಪಿರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಆದರೂ, ನ್ಯಾಯಾಲಯವು ಅಂತಿಮವಾಗಿ ಗರ್ಭಪಾತದ ಮನವಿಯನ್ನು ಪುರಸ್ಕರಿಸುವ ತನ್ನ ಆದೇಶದಲ್ಲಿ ಹೈಕೋರ್ಟ್ ವಿರುದ್ಧ ಯಾವುದೇ ಪ್ರತಿಕೂಲ ಅವಲೋಕನ ದಾಖಲಿಸುವುದಿಲ್ಲ ಎಂದಿತು.