ವಕ್ಫ್ (ತಿದ್ದುಪಡಿ) ಕಾಯಿದೆ- 2025ನ್ನು ಪ್ರಶ್ನಿಸುವ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಕಾಯಿದೆ ಪ್ರಶ್ನಿಸಿರುವ ಅರ್ಜಿದಾರರಲ್ಲಿ ಒಂದು ಸಂಸ್ಥೆಯಾದ ಜಮಿಯತ್ ಉಲಮಾ-ಇ-ಹಿಂದ್ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠದೆದುರು ಪ್ರಕರಣ ಪ್ರಸ್ತಾಪಿಸಿದರು.
"ನಾವು ವಕ್ಫ್ (ತಿದ್ದುಪಡಿ) ಕಾಯಿದೆಯನ್ನು ಪ್ರಶ್ನಿಸುತ್ತಿದ್ದೇವೆ" ಎಂದ ಅವರು ಪ್ರಕರಣವನ್ನು ತುರ್ತಾಗಿ ಆಲಿಸುವಂತೆ ಕೋರಿದರು.
"ನಾನು ಮಧ್ಯಾಹ್ನ ಉಲ್ಲೇಖ ಪತ್ರ ಓದಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಾವು ಅದನ್ನು (ಪ್ರಕರಣ) ಪಟ್ಟಿ ಮಾಡುತ್ತೇವೆ" ಎಂದು ಸಿಜೆಐ ಸಂಜೀವ್ ಖನ್ನಾ ಉತ್ತರಿಸಿದರು.
ಹಿರಿಯ ವಕೀಲರಾದ ಎ ಎಂ ಸಿಂಘ್ವಿ, ವಕೀಲ ನಿಜಾಮ್ ಪಾಷಾ ಕೂಡ ವಿವಿಧ ಅರ್ಜಿದಾರರ ಪರವಾಗಿ ವಾದ ಮಂಡಿಸಿದರು.
ತಿದ್ದುಪಡಿ ಕಾಯಿದೆಯನ್ನು ಪ್ರಶ್ನಿಸಿ ಬೇರೆ ಬೇರೆ ವ್ಯಕ್ತಿಗಳು, ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್‌ನಲ್ಲಿ ಕನಿಷ್ಠ ಏಳು ಅರ್ಜಿ ಸಲ್ಲಿಸಿವೆ.
ವಕ್ಫ್ (ತಿದ್ದುಪಡಿ) ಮಸೂದೆ- 2025 ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಕಿತ ಹಾಕಿದ್ದರು. ಲೋಕಸಭೆ ಮತ್ತು ರಾಜ್ಯಸಭೆ ಕ್ರಮವಾಗಿ ಏಪ್ರಿಲ್ 3 ಮತ್ತು 4ರಂದು ಮಸೂದೆ ಅಂಗೀಕರಿಸಿದ್ದವು.