Justice Sanjay Kishan Kaul
Justice Sanjay Kishan Kaul 
ಸುದ್ದಿಗಳು

ಮದ್ರಾಸ್ ಹೈಕೋರ್ಟ್‌ಗೆ ವರ್ಗ ಮಾಡಿದ್ದು ಶಿಕ್ಷೆಯೆಂದೇ ಭಾವಿಸಿದ್ದೆ ಆದರೆ ಚೆನ್ನೈ ನನ್ನ ಮನೆಯಾಯಿತು: ನ್ಯಾ. ಕೌಲ್

Bar & Bench

ತಾವು ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯನ್ನು ನೆನೆದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ಚೆನ್ನೈ ತಮ್ಮ ಮನೆಯಾಯಿತು ಎಂದರು.

ಕ್ಯಾನ್ಸರ್ ಜಾಗೃತಿಗಾಗಿ ತಮಿಳುನಾಡು ಹಿರಿಯ ನ್ಯಾಯವಾದಿಗಳ ವೇದಿಕೆ  ಚೆನ್ನೈನಲ್ಲಿ ಆಯೋಜಿಸಿದ್ದ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಕೌಲ್ ಮಾತನಾಡಿದರು.

ಮದ್ರಾಸ್ ಹೈಕೋರ್ಟ್‌ಗೆ ವರ್ಗಾವಣೆಯಾದಾಗ ನ್ಯಾ. ಕೌಲ್‌  ತಮಿಳುನಾಡಿಗೆ ತೆರಳಲು ಹಿಂಜರಿದಿದ್ದರು. ಆದರೆ ಮದ್ರಾಸ್‌ ಹೈಕೋರ್ಟ್‌ನಲ್ಲಿ 2.5 ವರ್ಷ ಕಳೆದ ಬಳಿಕ ಆ ಹಿಂಜರಿಕೆಯೆಲ್ಲಾ ಇಲ್ಲವಾಯಿತು ಎಂದು ಅವರು ನುಡಿದರು.

“ಮದ್ರಾಸ್‌ ಹೈಕೋರ್ಟ್‌ಗೆ (2014 ರಲ್ಲಿ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ) ನನ್ನನ್ನು ಕಳಿಸಿದಾಗ ನನಗೆ ಶಿಕ್ಷೆ ನೀಡಲಾಗುತ್ತಿದೆ ಎಂದೇ ಭಾವಿಸಿದ್ದೆ. ಆದರೆ ಇಲ್ಲಿ ಕಳೆದ ಎರಡೂವರೆ ವರ್ಷ ಅವಧಿಯಲ್ಲಿ ಚೆನ್ನೈ ಬಗ್ಗೆ ಮತ್ತು ದೇಶದ ಈ ಭಾಗದ ಬಗ್ಗೆ ಹೆಚ್ಚು ಅರಿತೆ. ಬಳಿಕ ಚೆನ್ನೈ ನನ್ನ ಮನೆಯಾಯಿತು” ಎಂದರು.

ಮದ್ರಾಸ್ ಹೈಕೋರ್ಟ್‌ನ ಚುಕ್ಕಾಣಿ ಹಿಡಿದಾಗ, ಚೆನ್ನೈ, ತಮಿಳುನಾಡು ಮತ್ತು ಇಡೀ ದಕ್ಷಿಣ ಭಾರತದ ಸಂಸ್ಕೃತಿ ಮತ್ತು ವಿಷಯಗಳ ಬಗ್ಗೆ ಕಲಿತಿದ್ದೇನೆ ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಹಾಲಿ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.