ಪುಸ್ತಕ ಅಥವಾ ಕಲಾಕೃತಿಯಲ್ಲಿ ಗ್ರಹಿಸಲಾದ ಅಶ್ಲೀಲತೆಯು ನೋಡುಗರಿಂದ ಆರೋಪಿತವಾಗಿರುತ್ತದೆ: ನ್ಯಾ. ಎಸ್‌ ಕೆ ಕೌಲ್

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ತತ್ವಗಳು ಕಲಾವಿದನ ಪರವಾಗಿ ದೊಡ್ಡ ಪ್ರಮಾಣದಲ್ಲಿ ನಿಂತಿದ್ದು ಅವುಗಳಿಗೆ ಧಕ್ಕೆ ಒದಗಬಾರದು ಎಂದು ತಿಳಿಸಿದ ನ್ಯಾಯಮೂರ್ತಿಗಳು.
Justice SK Kaul
Justice SK Kaul

ಪುಸ್ತಕ ಅಥವಾ ಕಲಾಕೃತಿಯಲ್ಲಿ ಗ್ರಹಿಸಲಾದ ಅಶ್ಲೀಲತೆಯು ನೋಡುಗರಿಂದ ಆರೋಪಿತವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅಭಿಪ್ರಾಯಪಟ್ಟರು.

ಆಂಗ್ಲ ದಿನಪತ್ರಿಕೆ ದ ಹಿಂದೂ ಚೆನ್ನೈನಲ್ಲಿ ಆಯೋಜಿಸಿದ್ದ ಎರಡು ದಿನಗಳ 'ಲಿಟ್‌ ಫಾರ್‌ ಲೈಫ್‌' ಸಾಹಿತ್ಯೋತ್ಸವದ ಅಂತಿಮ ದಿನವಾದ ಶನಿವಾರ ಆನ್‌ಲೈನ್‌ ಮೂಲಕ ಅವರು ಮಾತನಾಡಿದರು. 2016ರಲ್ಲಿ ಸಾಹಿತಿ ಪೆರುಮಾಳ್‌ ಮುರುಗನ್‌ ಅವರ ಕೃತಿ ʼಮಾಧೋರ್‌ಬಾಗಣ್ʼ‌ ಕೃತಿಯ ಪರವಾಗಿ ತೀರ್ಪು ನೀಡಿದ್ದನ್ನುಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಕಥೆಯು ಅಶ್ಲೀಲತೆಯಿಂದ ಕೂಡಿದ್ದು ವಿಶೇಷವಾಗಿ ಗೌಂಡರ್ ಜಾತಿಯನ್ನು ಪ್ರಸ್ತಾಪಿಸುತ್ತದೆ ಎಂದು ಆರೋಪಿಸಿ, ಕೃತಿ ಹಾಗೂ ಕೃತಿಕಾರ ಪೆರುಮಾಳ್‌ ಅವರ ಮೇಲೆ ಜಾತಿವಾದಿ ಗುಂಪುಗಳು ವಾಗ್ದಾಳಿ ನಡೆಸಿದ್ದವು.  ಆಗ ಮದ್ರಾಸ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೌಲ್‌ ಅವರು ಪೆರುಮಾಳ್‌ ಅವರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದು, “ಓದುಗರಿಗೆ ಪುಸ್ತಕ ಇಷ್ಟವಾಗದಿದ್ದರೆ ಅದನ್ನು ಬಿಸಾಡಿ. ಆ ಪುಸ್ತಕ ಓದಲೇಬೆಕೆಂಬ ಕಡ್ಡಾಯವೇನಿಲ್ಲ” ಎಂದು ಹೇಳಿ ಗಮನ ಸೆಳೆದಿದ್ದರು.

Also Read
ಜನರಿಗೆ ವಾಕ್‌ ಸ್ವಾತಂತ್ರ್ಯದ ಹಕ್ಕಿದೆ, ದ್ವೇಷ ಭಾಷೆಯದ್ದಲ್ಲ: ನ್ಯಾಯಾಲಯದಲ್ಲಿ ಕಂಗನಾ ವಿರುದ್ಧ ದೂರು

“ತೀರ್ಪು ಸಹಜವಾಗಿ ಅಂತಹ ಆರೋಪಗಳನ್ನು ತಿರಸ್ಕರಿಸಿತ್ತು. ಅಸ್ತಿತ್ವಲ್ಲಿರಬಹುದಾದ ಅಥವಾ ಇಲ್ಲದೇ ಇರಬಹುದಾದ ಅಶ್ಲೀಲತೆ ಎಂಬುದು ಕಾದಂಬರಿಯ ಮುಖ್ಯ ತಿರುಳಲ್ಲ. ಪುಸ್ತಕ ಅಥವಾ ಕಲಾಕೃತಿಯ ಗ್ರಹಿಸಲಾದ ಅಶ್ಲೀಲತೆಯು ನೋಡುಗರಿಂದ ಆರೋಪಿಸಲಾದುದಾಗಿದ್ದು, ಅವರೇ ತಂದಿರುವುದಾಗಿರುತ್ತದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ತತ್ವಗಳು ಕಲಾವಿದನ ಪರವಾಗಿ ಗಟ್ಟಿಯಾಗಿ ನಿಂತಿದ್ದು ಅವುಗಳಿಗೆ ಧಕ್ಕೆ ಒದಗಬಾರದು” ಎಂದು ತಿಳಿಸಿದರು.

ಪೆರುಮಾಳ್‌ ಅವರ ಕೃತಿಗೆ ಸಂಬಂಧಿಸಿದಂತೆ ತಾವು ನೀಡಿದ ತೀರ್ಪು ಹಾಗೂ ಖ್ಯಾತ ಪತ್ರಕರ್ತ, ಲೇಖಕ ಖುಷ್ವಂತ್‌ ಸಿಂಗ್‌ ಮತ್ತು ವರ್ಣಚಿತ್ರ ಲೋಕದ ದಂತಕತೆ ಎಂ ಎಫ್‌ ಹುಸೇನ್‌ ಅವರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು ತಾನು  ತೀರ್ಪು ನೀಡಿದ ಸಂದರ್ಭಗಳು ತಮಗೆ ಲೇಖಕರು ಅಥವಾ ಕಲಾವಿದರು ಯಾಕೆ ಯಥಾಸ್ಥಿತಿಯನ್ನು ಪ್ರಶ್ನಿಸುತ್ತಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲು ಕಾರಣ ಒದಗಿಸಿದವು ಎಂದು ಅವರು ಹೇಳಿದರು.

ಸಾಹಿತ್ಯ ಕ್ರಿಯೆ ಎಂಬುದು ವೈರುಧ್ಯಗಳಿಂದ ಕೂಡಿದ ಮತ್ತು ಸದಾ ಗತಿಶೀಲವಾಗಿರುವ ಬೌದ್ಧಿಕ ಮತ್ತು ಸಾಂಸ್ಕೃತಿಕ ಲೋಕದಿಂದ ಹೊರಹೊಮ್ಮಿದೆ ಎಂದು ತಾವು ನಂಬಿರುವುದಾಗಿ ತಿಳಿಸಿದ ಅವರು ʼಸಮಾಜದ ಸ್ವರೂಪ ಬದಲಿಸುವ, ಅಸ್ತಿತ್ವದಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನು ಇಂಚಿಂಚೇ ಬದಲಿಸುವ ನಿಟ್ಟಿನಲ್ಲಿ ಮಣ್ಣಿನಿಂದ ಮಾನವೀಯತೆಯನ್ನು ಮೂರ್ತಗೊಳಿಸುವ ಸಾಮರ್ಥ್ಯ ಮುರುಗನ್ ಅವರಂತಹ ಬರಹಗಾರರಿಗೆ ಇದೆʼ ಎಂದು ಶ್ಲಾಘಿಸಿದರು.

Related Stories

No stories found.
Kannada Bar & Bench
kannada.barandbench.com