BMRCL and Karnataka HC
BMRCL and Karnataka HC 
ಸುದ್ದಿಗಳು

ಮೆಟ್ರೊ ಕಾಮಗಾರಿ: 'ಭಾರಿ ಮಳೆಗೆ ಸಸಿಗಳು ಕೊಚ್ಚಿ ಹೋಗಿಲ್ಲವೆಂದು ಹೇಗೆ ಗೊತ್ತು?' ಹೈಕೋರ್ಟ್‌ ಪ್ರಶ್ನೆ; ವರದಿಗೆ ಸೂಚನೆ

Bar & Bench

ನಮ್ಮ ಮೆಟ್ರೊ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ನಗರದಲ್ಲಿ ಕತ್ತರಿಸಿರುವ ಮರಗಳಿಗೆ ಪರ್ಯಾಯವಾಗಿ ಸಸಿಗಳನ್ನು ನೆಟ್ಟಿರುವ ಕುರಿತು ಸಮರ್ಪಕ ಮಾಹಿತಿ ನೀಡದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಕರ್ನಾಟಕ ಹೈಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಬೆಂಗಳೂರು ಪರಿಸರ ಟ್ರಸ್ಟ್‌ ಮತ್ತು ಪರಿಸರ ತಜ್ಞ ದತ್ತಾತ್ರೇಯ ಟಿ ದೇವರು ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಎಷ್ಟು ಸಸಿಗಳನ್ನು ನೆಡಲಾಗಿದೆ? ಅವುಗಳಲ್ಲಿ ಎಷ್ಟು ಉಳಿದಿವೆ? ಭಾನುವಾರ ಸುರಿದ ಭಾರೀ ಮಳೆಗೆ ಎಷ್ಟು ಸಸಿಗಳು ಕೊಚ್ಚಿ ಹೋಗಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಸಸಿಗಳನ್ನು ನೆಟ್ಟಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅವುಗಳ ಸ್ಥಿತಿಗತಿಯ ಕುರಿತು ಎರಡು ವಾರದಲ್ಲಿ ವರದಿ ಸಲ್ಲಿಸಬೇಕು” ಎಂದು ಬಿಬಿಎಂಪಿ ಮರ ಅಧಿಕಾರಿ ಮತ್ತು ಬೆಂಗಳೂರು ನಗರ ಅರಣ್ಯ ಉಪ ಸಂರಕ್ಷಣಾಧಿಕಾರಿಗೆ ನ್ಯಾಯಾಲಯ ನಿರ್ದೇಶಿಸಿತು.

ಇದಕ್ಕೂ ಮುನ್ನ, ಮೆಟ್ರೊ ನಿಗಮದ ಪರ ವಕೀಲರು ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕಾಗಿ 382 ಮರಗಳನ್ನು ಕತ್ತರಿಸಲು ಹಾಗೂ 29 ಮರಗಳನ್ನು ಸ್ಥಳಾಂತರಿಸಲು ಅನುಮತಿ ನೀಡುವಂತೆ ಕೋರಿದರು.

ಅರ್ಜಿದಾರರ ಪರ ವಕೀಲರು, ಈ ಹಿಂದೆ ಮರಗಳನ್ನು ಕತ್ತರಿಸಲು ಅನುಮತಿ ನೀಡಿದ್ದ ವೇಳೆ ಪರ್ಯಾಯವಾಗಿ ಸಸಿಗಳನ್ನು ನೆಡಲು ಮತ್ತು ಅರಣ್ಯೀಕರಣ ಮಾಡಲು ಸೂಚಿಸಿ ಹೈಕೋರ್ಟ್ ಹೊರಡಿಸಿರುವ ನಿರ್ದೇಶನಗಳನ್ನು ಬಿಎಂಆರ್‌ಸಿಎಲ್ ಪಾಲಿಸಿಲ್ಲ. ಸಸಿಗಳನ್ನು ನೆಟ್ಟಿರುವ ಬಗ್ಗೆ ನ್ಯಾಯಾಲಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಪೀಠದ ಗಮನ ಸೆಳೆದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಕತ್ತರಿಸಿದ ಮರಗಳಿಗೆ ಪರ್ಯಾಯವಾಗಿ ಸಸಿಗಳನ್ನು ನೆಡುವ ಮೂಲಕ ಅರಣ್ಯೀಕರಣ ಮಾಡಲಾಗಿದೆಯೇ? ಈವರೆಗೂ ಎಷ್ಟು ಸಸಿಗಳನ್ನು ನೆಡಲಾಗಿದೆ? ಅವುಗಳಲ್ಲಿ ಎಷ್ಟು ಉಳಿದಿವೆ? ಎಷ್ಟು ನಾಶವಾಗಿವೆ? ಎಂದು ಬಿಬಿಎಂಪಿ ಹಾಗೂ ಸರ್ಕಾರಿ ವಕೀಲರನ್ನು ಪ್ರಶ್ನಿಸಿತು.

ಸರ್ಕಾರಿ ವಕೀಲರಾಗಲಿ ಅಥವಾ ಬಿಬಿಎಂಪಿ ಪರ ವಕೀಲರಾಗಲಿ ಸೂಕ್ತ ಮಾಹಿತಿ ನೀಡದಕ್ಕೆ ಅಸಮಾಧಾನಗೊಂಡ ಪೀಠವು ನ್ಯಾಯಾಲಯದ ಎಲ್ಲಾ ನಿರ್ದೇಶನಗಳನ್ನು ಪಾಲಿಸಲಾಗಿದೆ ಎಂಬುದಾಗಿ ಬಿಎಂಆರ್‌ಎಸಿಎಲ್ ಹೇಳುತ್ತದೆ. ಆದರೆ, ಭಾನುವಾರ ಸುರಿದ ಮಳೆಗೆ ಎಷ್ಟು ಸಸಿಗಳು ಕೊಚ್ಚಿ ಹೋಗಿವೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಹೀಗಾಗಿ, ಸಸಿಗಳ ಸ್ಥಿತಿಗತಿ ಕುರಿತು ವರದಿ ಸಲ್ಲಿಸಬೇಕು ಎಂದಿತು.

ಅಲ್ಲದೆ, ಪರ್ಯಾಯವಾಗಿ ನೆಟ್ಟಿರುವ ಸಸಿಗಳು ಸುರಕ್ಷತೆಯಿಂದ ಇರುವುದನ್ನು ಬಿಬಿಎಂಪಿ ಮರ ಅಧಿಕಾರಿ ನ್ಯಾಯಾಲಯಕ್ಕೆ ಖಾತರಿಪಡಿಸಬೇಕು. ಎಷ್ಟು ಅರಣ್ಯೀಕರಣ ಮಾಡಲಾಗಿದೆ, ಎಷ್ಟು ಸಸಿಗಳನ್ನು ನೆಡಲಾಗಿದೆ, ಎಷ್ಟು ಸಸಿಗಳು ಉಳಿದುಕೊಂಡಿವೆ ಎಂಬ ಬಗ್ಗೆ ಖಚಿತ ಮಾಹಿತಿ ನೀಡಬೇಕು. ಹಾಗೆಯೇ, ಬೇರು ಸಹಿತ ಸ್ಥಳಾಂತರಿಸಿದ ಮರಗಳ ಪರಿಸ್ಥಿತಿ ಏನಾಗಿದೆ ಎಂಬುದರ ಕುರಿತು ಸಹ ವಿವರಿಸಬೇಕು ಎಂದು ಹೇಳಿತು.

ಈ ವೇಳೆ ಬಿಎಂಆರ್‌ಸಿಎಲ್ ಪರ ವಕೀಲರು, ಮರಗಳನ್ನು ಕತ್ತರಿಸಲು ಅನುಮತಿ ನೀಡುವಂತೆ ಕೋರಿದಾಗ ಪ್ರತಿಕ್ರಿಯಿಸಿದ ಪೀಠವು ಮರಗಳನ್ನು ಕತ್ತರಿಸಲು ಅವರಸವೇನಿಲ್ಲ. ಈ ಹಿಂದೆ ಮರಗಳನ್ನು ಕತ್ತರಿಸಲು ನ್ಯಾಯಾಲಯವು ಅನುಮತಿ ನೀಡಿದೆ. ಈಗಲೂ ಮರಗಳನ್ನು ಕತ್ತರಿಸಲು ನೀವು ಅನುಮತಿ ಕೇಳುತ್ತೀದ್ದೀರಿ. ಇದು ಅಂತ್ಯವಿಲ್ಲದ ಪ್ರಕ್ರಿಯೆ. ಪ್ರತಿ ಬಾರಿಯೂ 300 ಅಥವಾ 400 ಮರಗಳನ್ನು ಕತ್ತರಿಸಲು ಅನುಮತಿ ಕೇಳುವುದು ಸಾಮಾನ್ಯ. ಆದರೆ, ಈಗ ಕತ್ತರಿಸುವ ಹಳೆಯ ಮರಗಳಿಗೆ ಹೊಸದಾಗಿ ನೆಡುವ ಸಸಿಗಳು ಪರ್ಯಾಯ ಅಲ್ಲವೇ ಅಲ್ಲ. ಏಕೆಂದರೆ ಆ ಸಸಿಗಳು ಮತ್ತೆ ಬೆಳೆದು ಮರವಾಗಲು ಎಷ್ಟು ವರ್ಷಗಳು ಬೇಕು ಎಂಬುದು ನಮಗೂ ಗೊತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮರಗಳು ಕತ್ತರಿಸುವುದು ಗಂಭೀರ ವಿಚಾರವಾಗಿದ್ದು, ಪ್ರಜ್ಞಾಪೂರ್ವಕವಾಗಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ನುಡಿಯಿತು.

ಜತೆಗೆ, ಮರಗಳನ್ನು ಕತ್ತರಿಸುವುದಕ್ಕೆ ಅನುಮತಿ ಕೇಳುವ ವಿಚಾರವನ್ನು ಮರೆತುಬಿಡಿ. ಹಲವು ವರ್ಷಗಳಿಂದ ಇರುವ ಮರಗಳನ್ನು ಕತ್ತರಿಸಿ, ಸಸಿಗಳನ್ನು ನೆಡಲಾಗುತ್ತಿದೆ. ಸಸಿಗಳ ಸ್ಥಿತಿಗತಿ ಕುರಿತು ವರದಿ ಬರುವರೆಗೂ ಮರಗಳನ್ನು ಕತ್ತರಿಸಲು ಹೊಸದಾಗಿ ಅನುಮತಿ ನೀಡಲಾಗದು ಎಂದು ಕಟುವಾಗಿ ನುಡಿಯಿತು.