[ಮೆಟ್ರೊ ಕಾಮಗಾರಿ] ಕಸ್ತೂರಿ ನಗರ-ಕೆಂಪಾಪುರ ಮಾರ್ಗದಲ್ಲಿ 1,334 ಮರ ಕಡಿಯಲು ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್‌ ಅನುಮತಿ

ಮರಗಳ ತಜ್ಞರ ಸಮಿತಿಯ ವರದಿಯಲ್ಲಿ ಸಮಸ್ಯೆಯಿದ್ದರೆ ಒಪ್ಪಿಕೊಳ್ಳಬಹುದು. ಆದರೆ, ಅರ್ಜಿದಾರರ ಈ ರೀತಿಯ ಆಕ್ಷೇಪಗಳು ಅವರ ನಡತೆಯನ್ನು ತೋರಿಸುತ್ತದೆ ಎಂದು ಬೇಸರಿಸಿದ ಸರ್ಕಾರದ ವಕೀಲ ವಿಜಯ್‌ಕುಮಾರ್‌ ಪಾಟೀಲ್.‌
BMRCL and Karnataka HC
BMRCL and Karnataka HC
Published on

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಕಸ್ತೂರಿ ನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ಹಾಗೂ ವೆಲ್ಲಾರ ಜಂಕ್ಷನ್‌ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ನಮ್ಮ ಮೆಟ್ರೊ ರೈಲು ಮಾರ್ಗದಲ್ಲಿ ಕಾಮಗಾರಿ ನಡೆಸಲು ಒಟ್ಟು 1,342 ಮರಗಳನ್ನು ಕಡಿಯಲು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ಗೆ (ಬಿಎಂಆರ್‌ಸಿಎಲ್‌) ಬುಧವಾರ ಕರ್ನಾಟಕ ಹೈಕೋರ್ಟ್‌ ಅನುಮತಿಸಿದೆ. ಕಸ್ತೂರಿ ನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ಮೆಟ್ರೊ ಮಾರ್ಗದಲ್ಲಿ ಭರ್ತಿ 1,334 ಮರಗಳನ್ನು ಕಡಿಯಲು ನ್ಯಾಯಾಲಯ ಸಮ್ಮತಿಸಿದೆ.

ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬೆಂಗಳೂರು ಪರಿಸರ ಟ್ರಸ್ಟ್ ಮತ್ತು ಪರಿಸರವಾದಿ ಟಿ ದತ್ತಾತ್ರೇಯ ದೇವರೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು “ಮೆಟ್ರೊ ಮಾರ್ಗದ ಕಾಮಗಾರಿ ನಡೆಸಲು ನೀವು ಎರಡು ಮಧ್ಯಪ್ರವೇಶ ಮನವಿಗಳನ್ನು ಸಲ್ಲಿಸಿದ್ದೀರಿ. ಹಿಂದೆ ಮರ ಕಡಿಯಲು ನೀಡಿರುವ ಅನುಮತಿಯ ಭಾಗವಾಗಿ ಕಾಮಗಾರಿ ನಡೆದಿದೆಯೇ?” ಎಂದು ಬಿಎಂಆರ್‌ಸಿಎಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರನ್ನು ಪ್ರಶ್ನಿಸಿತು. ಆಗ ಹೊಳ್ಳ ಅವರು “ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ” ಎಂದು ಉತ್ತರಿಸಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪ್ರದೀಪ್‌ ನಾಯಕ್‌ ಅವರು “ಅಧಿಕೃತ ಒಪ್ಪಿಗೆ (ಅಫಿಶಿಯಲ್‌ ಮೆಮೊರಂಡಂ) ನೀಡಿರುವ ಅಧಿಕಾರಿಯು ಮರಗಳ ಸಮಿತಿಯಲ್ಲೂ ಸ್ಥಾನ ಪಡೆದಿದ್ದಾರೆ. ಮರ ಅಧಿಕಾರಿಯ (ಟ್ರೀ ಆಫೀಸರ್‌) ಕಾರ್ಯಗಳ ಮೇಲೆ ನಿಗಾ ಇಡುವಂತೆ ಮರಗಳ ತಜ್ಞರ ಸಮಿತಿಗೆ ನ್ಯಾಯಾಲಯ ಹಿಂದೆ ಆದೇಶ ಮಾಡಿದೆ. ಹೀಗಾಗಿ, ಮರಗಳ ಅಧಿಕಾರಿಯು ತಜ್ಞರ ಸಮಿತಿಯ ಭಾಗವಾಗಿರಬಾರದು. ಆದ್ದರಿಂದ, ಅಧಿಕಾರಿ ಭಾಗವಾಗಿರುವ ಮರಗಳ ತಜ್ಞರ ಸಮಿತಿ ಹಾಗೂ ಮರ ಅಧಿಕಾರಿ ನೀಡುವ ಅಧಿಕೃತ ಒಪ್ಪಿಗೆಯನ್ನು ಆಧರಿಸಿ ಮರ ತೆರವು ಅಥವಾ ಸ್ಥಳಾಂತರ ಮಾಡಲು ಅನುಮತಿ ಕೋರಬಾರದು” ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ವಿಜಯ್‌ಕುಮಾರ್‌ ಪಾಟೀಲ್‌ ಅವರು “ಮರಗಳ ತಜ್ಞರ ಸಮಿತಿಯ ವರದಿಯಲ್ಲಿ ಸಮಸ್ಯೆಯಿದ್ದರೆ ಒಪ್ಪಿಕೊಳ್ಳಬಹುದು. ಆದರೆ, ಅರ್ಜಿದಾರರ ಈ ರೀತಿಯ ಆಕ್ಷೇಪಗಳು ಅವರ ನಡತೆಯನ್ನು ತೋರಿಸುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

ಬಿಎಂಆರ್‌ಸಿಎಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “2022ರ ಮಾರ್ಚ್‌ 8ರ ಮರ ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಕಸ್ತೂರಿ ನಗರ ಮತ್ತು ಕೆಂಪಾಪುರದ ಹೊರವರ್ತುಲ ರಸ್ತೆಯಲ್ಲಿನ ಮೆಟ್ರೊ ಮಾರ್ಗದಲ್ಲಿ ಬರುವ ಮರಗಳ ಸ್ಥಳಾಂತರ ಮತ್ತು ತೆರವಿಗೆ ಸಂಬಂಧಿಸಿದಂತೆ 2022ರ ಮಾರ್ಚ್‌ 10ರಂದು ಮರಗಳ ಅಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ಮರಗಳ ಸ್ಥಳಾಂತರಕ್ಕೆ ಅನುಮತಿಸಿದ್ದಾರೆ. 2020ರ ಫೆಬ್ರವರಿ 9 ಮತ್ತು ಆನಂತರ 2021ರಲ್ಲಿ ಮರಗಳ ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಮೆಟ್ರೊ ಮಾರ್ಗ ರೂಪಿಸಲು ಮರಗಳ ಸ್ಥಳಾಂತರ ಮತ್ತು ತೆರವಿಗೆ ನ್ಯಾಯಾಲಯ ಆದೇಶಿಸಿದೆ” ಎಂದರು.

Also Read
ನಮ್ಮ ಮೆಟ್ರೊ ರೈಲು ಹಳಿ ನಿರ್ಮಾಣ: 138 ಮರ ಕತ್ತರಿಸಲು ಬಿಎಂಆರ್‌ಸಿಎಲ್‌ಗೆ ಅನುಮತಿಸಿದ ಹೈಕೋರ್ಟ್‌

ಮುಂದುವರಿದು, “ಬಿಬಿಎಂಪಿಯ ಮರ ಅಧಿಕಾರಿಯಲ್ಲದೇ ಇತರೆ ಸದಸ್ಯರು ಮರ ತಜ್ಞರ ಸಮಿತಿಯಲ್ಲಿ ಇದ್ದಾರೆ. ಹೀಗಾಗಿ, ಸದಸ್ಯ ಕಾರ್ಯದರ್ಶಿಯಾಗಿ ಮರಗಳ ಅಧಿಕಾರಿ ಸಮಿತಿಯಲ್ಲಿದ್ದಾರೆ ಎಂಬ ಅರ್ಜಿದಾರರ ವಾದವನ್ನು ಒಪ್ಪಲಾಗದು. ಸಮಿತಿಯ ಎಲ್ಲಾ ಸದಸ್ಯರೂ ಸರ್ವಸಮ್ಮತವಾಗಿ ತೀರ್ಮಾನ ಕೈಗೊಂಡಿದ್ದು, ಅಧಿಕೃತ ಒಪ್ಪಂದವನ್ನು ತಿರಸ್ಕರಿಸಲಾಗದು. ವಿಸ್ತೃತ ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಮೆಟ್ರೊಗಾಗಿ ಈ ಹಿಂದೆಯೂ ನ್ಯಾಯಾಲಯ ಇಂಥ ಆದೇಶ ಮಾಡಿದೆ. ಸದ್ಯ, ಅಂಥದ್ದೇ ಆದೇಶ ಮಾಡುವ ಅಗತ್ಯವಿದೆ” ಎಂದು ನ್ಯಾಯಾಲಯಕ್ಕೆ ಕೋರಿದರು.

ಎಲ್ಲರ ವಾದವನ್ನು ಆಲಿಸಿದ ಪೀಠವು ಬಿಎಂಆರ್‌ಸಿಎಲ್‌ಗೆ ಮೆಟ್ರೊ ಮಾರ್ಗದಲ್ಲಿ ಮರ ತೆರವು ಮತ್ತು ಸ್ಥಳಾಂತರಕ್ಕೆ ಅನುಮತಿಸಿತು. ಅಲ್ಲದೇ, ಮೆಟ್ರೊ ಕಾಮಗಾರಿಗೆ ಅಡೆತಡೆಯಿಂದಾಗಿ ಬಿಎಂಆರ್‌ಸಿಎಲ್‌ಗೆ ಪ್ರತಿ ದಿನ ನಾಲ್ಕು ಕೋಟಿ ನಷ್ಟವಾಗುತ್ತಿದೆ ಎಂಬ ವಿಚಾರವನ್ನು ಆದೇಶದಲ್ಲಿ ದಾಖಲಿಸಿ, ವಿಚಾರಣೆಯನ್ನು ಬೇಸಿಗೆ ರಜೆ ನಂತರ ನಡೆಸುವುದಾಗಿ ಮುಂದೂಡಿತು.

1,342 ಮರಗಳಿಗೆ ಕೊಡಲಿ, 163 ಮರಗಳ ಸ್ಥಳಾಂತರ

ಕಸ್ತೂರಿ ನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ನಡುವೆ ಎರಡನೇ ಹಂತದ ನಮ್ಮ ಮೆಟ್ರೊ ಕಾಮಗಾರಿಗಾಗಿ 1,334 ಮರಗಳನ್ನು ಕಡಿಯಲು, 160 ಸ್ಥಳಾಂತರಿಸಲು, 26 ಮರಗಳನ್ನು ಉಳಿಸಿಕೊಳ್ಳಲು ನ್ಯಾಯಾಲಯ ಒಪ್ಪಿದೆ. ಹಾಗೆಯೇ, ವೆಲ್ಲಾರ ಜಂಕ್ಷನ್‌ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ಅಂಡರ್‌ಗ್ರೌಂಡ್‌ನ ನಮ್ಮ ಮೆಟ್ರೊ ರೈಲು ಕಾಮಗಾರಿಗಾಗಿ 8 ಮರಗಳನ್ನು ಕಡಿಯಲು ಹಾಗೂ 2 ಮರಗಳನ್ನು ಹಾಗೆ ಉಳಿಸಿಕೊಳ್ಳಲು ಅಸ್ತು ಎಂದಿದೆ. ಒಟ್ಟಾರೆ 1,342 ಮರಗಳನ್ನು ಕಡಿಯಲು, 163 ಮರಗಳ ಸ್ಥಳಾಂತರ ಮತ್ತು 28 ಮರಗಳನ್ನು ಹಾಗೆ ಉಳಿಸಿಕೊಳ್ಳಲು ಕೋರಿ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಸಲ್ಲಿಸಿದ್ದ ಎರಡು ಮಧ್ಯಂತರ ಮನವಿಗಳಿಗೆ ಹೈಕೋರ್ಟ್‌ ಅನುಮತಿಸಿದೆ.

Kannada Bar & Bench
kannada.barandbench.com