ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಮಾರ್ಚ್ 1ರಂದು ಬಾಂಬ್ ಇರಿಸಿದವರಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿದೆ ಎಂದು ಸಾರ್ವಜನಿಕವಾಗಿ ಹೇಳಿದ್ದೇಕೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಮದ್ರಾಸ್ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ.
ತಮ್ಮ ಹೇಳಿಕೆ ಪ್ರಶ್ನಿಸಿ ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮಧುರೈ ನಗರ ಸೈಬರ್ ಕ್ರೈಂ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಶೋಭಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರು ಈ ಪ್ರಶ್ನೆ ಕೇಳಿದರು.
“ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಚೆನ್ನೈನಲ್ಲಿ ಶೋಧ ನಡೆಸುವ ಮುನ್ನವೇ ನೀವು (ಸಚಿವೆ ಶೋಭಾ) ಈ ಹೇಳಿಕೆ ನೀಡಿದ್ದೀರಿ. ಇದರರ್ಥ ನಿಮಗೆ ಸತ್ಯ ತಿಳಿದಿದೆ ಎಂದಾಯಿತು; ತರಬೇತಿ ಪಡೆದ ವ್ಯಕ್ತಿಗಳು ಯಾರು, ಅವರಿಗೆ ತರಬೇತಿ ನೀಡಿದವರು ಯಾರು ಮತ್ತು ಅವರು ಏನು ಮಾಡಿದ್ದಾರೆಂದು ನಿಮಗೆ ತಿಳಿದಿದೆ ಎಂದಾಯಿತು. ಅಪರಾಧದ ಬಗ್ಗೆ ನಿಮಗೆ ಮಾಹಿತಿ ಸಿಕ್ಕಿದ್ದರೆ, ನೀವು ಅದನ್ನು ಪೊಲೀಸರಿಗೆ ಬಹಿರಂಗಪಡಿಸಬೇಕಿತ್ತು. ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ಸಚಿವೆ ಅದನ್ನು ಮಾಡಿಲ್ಲ" ಎಂದು ನ್ಯಾಯಮೂರ್ತಿ ಜಯಚಂದ್ರ ಹೇಳಿದರು.
ಪ್ರಕರಣ ರಾಜಕೀಯ ಪ್ರೇರಿತ ಎಂದು ಆರೋಪಿಸಿದ ಕರಂದ್ಲಾಜೆ ಪರ ವಕೀಲರು ಪೊಲೀಸರು ತನಿಖೆ ಕೈಗೊಳ್ಳದಂತೆ ಮಧ್ಯಂತರ ನಿರ್ಬಂಧಕಾಜ್ಞೆ ನೀಡಬೇಕು ಎಂದು ಕೋರಿದ ವೇಳೆ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೆ, ಮಧ್ಯಂತರ ಮನವಿಗೆ ವಿರೋಧ ವ್ಯಕ್ತಪಡಿಸಿದ ಸರ್ಕಾರಿ ವಕೀಲ ಕೆಎಂಡಿ ಮುಹಿಲನ್, ಕರಂದ್ಲಾಜೆ ಅವರು ನೀಡಿರುವ ಸಂದರ್ಶನದ ವಿಡಿಯೋ ತುಣುಕು ವೀಕ್ಷಿಸುವಂತೆ ನ್ಯಾಯಾಲಯವನ್ನು ಕೋರಿದರು.
ತಮಿಳುನಾಡು ಭಾಗಿಯಾದ ಬಗ್ಗೆ ಎನ್‌ಐಎ ಈವರೆಗೆ ಏನನ್ನೂ ಹೇಳಿಲ್ಲ, ಆದರೆ ಯಾವುದೇ ಆಧಾರವಿಲ್ಲದೆ ಸಚಿವೆ ಸಾರ್ವಜನಿಕವಾಗಿ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಮುಹಿಲನ್ ದೂರಿದರು.
ಪ್ರಕರಣದ ಮುಂದಿನ ವಿಚಾರಣೆ ಜುಲೈ 12ರ ಶುಕ್ರವಾರ ನಡೆಯಲಿದೆ.