Siddique and Supreme Court  
ಸುದ್ದಿಗಳು

'ದೂರು ದಾಖಲಿಸಲು 8 ವರ್ಷ ಏಕೆ ಬೇಕಾಯಿತು?' ಸಿದ್ದಿಕ್ ಮೇಲಿನ ಅತ್ಯಾಚಾರ ಪ್ರಕರಣ ಕುರಿತು ಸುಪ್ರೀಂ ಪ್ರಶ್ನೆ

ಸಿದ್ದಿಕ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಈ ಪ್ರಶ್ನೆ ಹಾಕಿತು.

Bar & Bench

ಮಲಯಾಳಂ ನಟ ಸಿದ್ದಿಕ್‌ ವಿರುದ್ಧ ಅತ್ಯಾಚಾರ ಸಂತ್ರಸ್ತೆ ದೂರು ದಾಖಲಿಸಲು ಎಂಟು ವರ್ಷಗಳು ಏಕೆ ಬೇಕಾಯಿತು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕೇಳಿದೆ .

ಸಿದ್ದಿಕ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಈ ಪ್ರಶ್ನೆ ಕೇಳಿತು.

ನ್ಯಾಯಮೂರ್ತಿ ತ್ರಿವೇದಿ  ಅವರು "8 ವರ್ಷಗಳ ನಂತರ ದೂರು ದಾಖಲಾಗಿದೆಯೇ?" ಎಂದು ಕೇಳಿದರು.

ಕೇರಳ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ರಂಜಿತ್ ಕುಮಾರ್ ಅವರು, ಸಂತ್ರಸ್ತೆ ಬಹುಹಿಂದೆಯೇ ಘಟನೆಯ ಕುರಿತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಪೊಲೀಸ್‌ ದೂರು ದಾಖಲಿಸಲು ಸಂತ್ರಸ್ತೆ ಧೈರ್ಯ ಒಗ್ಗೂಡಿಸುವುದಕ್ಕಾಗಿ ಸಮಯ ಹಿಡಿಯುತ್ತದೆ ಎಂದರು. ಸಂತ್ರಸ್ತೆಯ ಪರ ವಾದ ಮಂಡಿಸಿದ ಅಡ್ವೊಕೇಟ್ ವೃಂದಾ ಗ್ರೋವರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ವಾದ ಮುಂದುವರೆಸಿದ ಕುಮಾರ್‌ ಅವರು, ಸಿದ್ದಿಕ್ ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ಸಾಕ್ಷ್ಯ ನಾಶಪಡಿಸುತ್ತಿದ್ದಾರೆ ಎಂದರು.

ಸಿದ್ದಿಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ ಗಿರಿ, ನಟ ಸಾಕ್ಷ್ಯ ನಾಶಪಡಿಸುತ್ತಿದ್ದಾರೆ ಎಂಬ ಆರೋಪ ಸಂಪೂರ್ಣ ಅಸಮರ್ಥನೀಯ ಎಂದರು. ಮರು ಅಫಿಡವಿಟ್ ಸಲ್ಲಿಸಲು ಸಮಯಾವಕಾಶವನ್ನೂ ಕೋರಿದರು.

ಕುತೂಹಲಕಾರಿಯಾಗಿ, ಹಿರಿಯ ವಕೀಲ ಮುಕುಲ್ ರೋಹಟ್ಗಿ ಕೂಡ ಸಿದ್ದಿಕ್ ಪರವಾಗಿ ವಾದಿಸಲು ಮುಂದಾದರು. ಆದರೆ ಪೀಠವು ಇಬ್ಬರು ಹಿರಿಯ ವಕೀಲರು ವಾದಿಸಲಾಗದು ಎಂದು ಸಮಯ ನೀಡಲು ನಿರಾಕರಿಸಿತು.

ಅಂತಿಮವಾಗಿ ನ್ಯಾಯಾಲಯ ಸಿದ್ದಿಕ್ ಪ್ರತ್ಯುತ್ತರ ಅರ್ಜಿ ಸಲ್ಲಿಸಲು ಅನುವಾಗುವಂತೆ ಎರಡು ವಾರಗಳ ಕಾಲ ಪ್ರಕರಣ  ಮುಂದೂಡಿತು. ಸೆಪ್ಟೆಂಬರ್ 30 ರಂದು ನಟನಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಪ್ರಕರಣದ ಮುಂದಿನ ವಿಚಾರಣೆಯವರೆಗೆ ವಿಸ್ತರಿಸಲಾಯಿತು.

ಜಾಮೀನು ತಿರಸ್ಕರಿಸಿ ಕೇರಳ ಹೈಕೋರ್ಟ್ ಸೆಪ್ಟೆಂಬರ್ 24ರಂದು ನೀಡಿದ್ದ ಆದೇಶದ ವಿರುದ್ಧ ಸಿದ್ದಿಕ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ನ್ಯಾ. ಹೇಮಾ ಅವರ ವರದಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ, ಪಾತ್ರಕ್ಕಾಗಿ ಪಲ್ಲಂಗಕ್ಕೆ ಕರೆಯುವಿಕೆ ಹಾಗೂ ಲಿಂಗತಾರತಮ್ಯದ ಮೇಲೆ ಬೆಳಕು ಚೆಲ್ಲಿತ್ತು. ವರದಿ ಪ್ರಕಟಣೆಯ ಹಿನ್ನೆಲೆಯಲ್ಲಿ ಅನೇಕ ನಟರು, ನಿರ್ದೇಶಕರು ಹಾಗೂ ಚಿತ್ರಕರ್ಮಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದ್ದವು.