IAS Officers Gaurav Gupta, Naveen raj Singh, J Ravishankar, G Lakshmikanth Reddy and Karnataka HC 
ಸುದ್ದಿಗಳು

ನ್ಯಾಯಾಲಯ ಆದೇಶಿಸಿದಾಗ ಪೀಠದ ಮುಂದೆ ಹಾಜರಾಗುವಂತೆ ಅಧಿಕಾರಿಗಳಿಗೆ ಸುತ್ತೋಲೆ: ಹೈಕೋರ್ಟ್‌ ಅಂಥ ಆದೇಶ ಮಾಡಿದ್ದೇಕೆ?

ಹಿಂದೆ ಎರಡು ಬಾರಿ ಐಎಎಸ್‌ ಅಧಿಕಾರಿಗಳ ಖುದ್ದು ಹಾಜರಾತಿಗೆ ಆದೇಶಿಸಿದ್ದರೂ ಅವರು ನ್ಯಾಯಾಲಯದ ಆದೇಶ ಪಾಲಿಸದಿದ್ದರಿಂದ ಸಿಡಿಮಿಡಿಗೊಂಡಿದ್ದ ಹೈಕೋರ್ಟ್‌.

Siddesh M S

“ನ್ಯಾಯಾಲಯದ ಆದೇಶ ಪಾಲಿಸುವಂತೆ ಮಾಡುವುದು ನಮಗೆ ಚೆನ್ನಾಗಿ ತಿಳಿದಿದೆ. ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಅಧಿಕಾರಿಗಳನ್ನು ಬಂಧಿಸಿ ಪೀಠದ ಮುಂದೆ ಹಾಜರುಪಡಿಸುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸುವ ಮೂಲಕ ಸರ್ಕಾರಕ್ಕೆ ಅಪಥ್ಯವಾದ ಆದೇಶವನ್ನು ಹೊರಡಿಸುವಂತೆ ನಮ್ಮನ್ನು ಮಾಡಬೇಡಿ. ಹೈಕೋರ್ಟ್‌ ಅನ್ನು ಲಘುವಾಗಿ ಪರಿಗಣಿಸಬೇಡಿ” ಎಂದು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ಆದೇಶಿಸಿದ್ದರೂ ಗೈರಾಗಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳನ್ನು ಕುರಿತು ಕರ್ನಾಟಕ ಹೈಕೋರ್ಟ್‌ ಸೋಮವಾರ ಕಟುವಾಗಿ ನುಡಿದಿತ್ತು.

ಸಾರ್ವಜನಿಕ ಹಿತಾಸಕ್ತಿ ಮನವಿಗಳ (ಪಿಐಎಲ್‌) ವಿಚಾರಣೆಯ ಸಂದರ್ಭದಲ್ಲಿ ಈ ರೀತಿಯ ಕಟುವಾದ ಅಭಿಪ್ರಾಯವನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ಹೊರಡಿಸಲು ಹಿಂದಿನ ಎರಡು ಘಟನೆಗಳು ಕಾರಣವಾಗಿದ್ದವು. ಇದನ್ನು ಖುದ್ದು ಪೀಠವು ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ.

ಮೊದಲನೆಯದಾಗಿ, ಬೆಂಗಳೂರಿನಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಲಾಗಿರುವ ಕಟ್ಟಡಗಳ ನೆಲಸಮಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪಿಐಎಲ್‌ ವಿಚಾರಣೆ ಸಂದರ್ಭದಲ್ಲಿ ಅಕ್ಟೋಬರ್‌ 27ರಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಅವರ ಖುದ್ದು ಹಾಜರಾತಿಗೆ ನ್ಯಾಯಾಲಯ ಆದೇಶಿಸಿತ್ತು.

ಅಕ್ಟೋಬರ್‌ 4ರಂದು ನ್ಯಾಯಾಲಯದ ಆದೇಶವನ್ನು ಪಾಲಿಸದೇ ಇರುವುದರಿಂದ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಗುಪ್ತಾ ಅವರು ಖುದ್ದು ಪೀಠದ ಮುಂದೆ ಹಾಜರಾಗಬೇಕು ಎಂದು ಪೀಠ ಆದೇಶ ಮಾಡಿತ್ತು. ಇದರ ಅನ್ವಯ ವರ್ಚುವಲ್‌ ವಿಧಾನದ ಮೂಲಕ ಗೌರವ್‌ ಗುಪ್ತಾ ಹಾಜರಾಗಿದ್ದರು. ಇದರಿಂದ ಅಸಮಾಧಾನಗೊಂಡ ನ್ಯಾಯಾಲಯವು ಖುದ್ದು ಹಾಜರಾತಿಗೆ ಸೂಚಿಸಿದ್ದರೂ ಹೇಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿದ್ದೀರಿ? ಎಂದು ಸಿಡಿಮಿಡಿಗೊಂಡು, ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿ, ಪ್ರಕರಣವನ್ನು ಮುಂದೂಡಿತ್ತು. ಈ ಮಧ್ಯೆ, ಬಿಬಿಎಂಪಿ ಪರ ವಕೀಲರು ತಾವೇ ವರ್ಚುವಲ್‌ ವಿಧಾನದ ಮೂಲಕ ಹಾಜರಾಗುತ್ತಿರುವುದರಿಂದ ಆಯುಕ್ತರು ಭೌತಿಕವಾಗಿ ಹಾಜರಿರುವ ಬದಲು ವರ್ಚುವಲ್‌ ವಿಧಾನದ ಮೂಲಕವೇ ಭಾಗಿಯಾಗುವಂತೆ ಸಲಹೆ ನೀಡಿದ್ದಾಗಿ ಪೀಠಕ್ಕೆ ವಿವರಿಸಿದರು. ಇದರಿಂದ ನ್ಯಾಯಾಲಯ ಸಂತುಷ್ಟವಾಗಲಿಲ್ಲ. ಅಂತಿಮವಾಗಿ ಗುಪ್ತಾ ಅವರನ್ನು ಮಧ್ಯಾಹ್ನ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ಪೀಠ ಆದೇಶಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಗುಪ್ತಾ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ಈ ಘಟನೆಯ ಬಳಿಕ, ಅಕ್ಟೋಬರ್‌ 27ರಂದು ಮೈಸೂರಿನಲ್ಲಿ ಸಾರ್ವಜನಿಕ ರಸ್ತೆಯ ಒತ್ತುವರಿ ಪ್ರಕರಣದಲ್ಲಿ ಜಾಮೀನುಸಹಿತ ವಾರಂಟ್ ಜಾರಿಗೊಳಿಸಿದ್ದರೂ ವಿಚಾರಣೆಗೆ ಹಾಜರಾಗದೆ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್‌ ರೆಡ್ಡಿ ಹಾಗೂ ಮೈಸೂರು ವಲಯ ಆಯುಕ್ತರು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರು ಮತ್ತು ವಲಯ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಒತ್ತುವರಿ ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ 2021ರ ಜೂನ್ 25ರಂದು ನ್ಯಾಯಾಲಯ ಆದೇಶಿಸಿತ್ತು. ಇದಾದ ಬಳಿಕ ಆಯುಕ್ತರು ಮತ್ತು ವಲಯ ಆಯುಕ್ತರ ಪರ ವಕೀಲರು ಮೂರ್ನಾಲ್ಕು ಬಾರಿ ಕಾಲಾವಕಾಶ ಪಡೆದುಕೊಂಡಿದ್ದರು. ಅನೇಕ ಬಾರಿ ಕಾಲಾವಕಾಶ ಪಡೆದು ವರದಿ ಸಲ್ಲಿಸದೇ ಇರುವ ಮತ್ತು ಕೋರ್ಟ್ ವಿಚಾರಣೆಗೂ ಹಾಜರಾಗದ ಆಯುಕ್ತರು ಹಾಗೂ ವಲಯ-7ರ ವಲಯ ಆಯುಕ್ತರ ವಿರುದ್ಧ ತಲಾ 25 ಸಾವಿರ ರೂಪಾಯಿ ಮೊತ್ತದ ಜಾಮೀನು ಸಹಿತ ವಾರಂಟ್ ಹೊರಡಿಸಿ ಅಕ್ಟೋಬರ್‌ 26ರಂದು ಖುದ್ದು ಹಾಜರಾಗುವಂತೆ ಪೀಠ ಅಕ್ಟೋಬರ್‌ 4ರಂದು ಆದೇಶಿಸಿತ್ತು.

ನಿರ್ದೇಶನ ನೀಡಿದ ಹೊರತಾಗಿಯೂ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಾಗಲಿಲ್ಲ. ಮತ್ತೊಂದೆಡೆ ಪೀಠದ ಆದೇಶವನ್ನು ಪಾಲಿಸಿಲ್ಲ. ಸರ್ಕಾರಿ ಅಧಿಕಾರಿಗಳು ನಡೆದುಕೊಳ್ಳುವ ರೀತಿ ಇದೇನಾ? ಅದರಲ್ಲೂ ಜಾಮೀನುಸಹಿತ ವಾರಂಟ್ ಜಾರಿಗೊಳಿಸಿದ್ದು, ಅದರ ಅರಿವು ಇದ್ದರೂ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ ಎಂದರೆ ಹೇಗೆ? ಸರ್ಕಾರಿ ಅಧಿಕಾರಿಗಳ ಇಂತಹ ನಡವಳಿಕೆ ನ್ಯಾಯಾಲಯ ಸಹಿಸುವುದಿಲ್ಲ” ಎಂದಿತು.

“ನ್ಯಾಯಾಲಯದ ಆದೇಶಗಳಿಗೆ ಬೆಲೆ ಹಾಗೂ ಗೌರವ ಇಲ್ಲವೇ? ಆದೇಶ ಪಾಲನೆ ಮಾಡದಿದ್ದರೆ ಅಧಿಕಾರಿಗಳಿಂದ ಆದೇಶವನ್ನು ಪಾಲನೆ ಮಾಡಿಸುವುದು ಹೇಗೆ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿದ್ದರೂ ಅಧಿಕಾರಿಗಳು ಬರಲಿಲ್ಲ. ಹಾಗಾಗಿ, ಅವರನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದರೆ ಸರಿ ಹೋಗುತ್ತದೆ” ಎಂದು ಪೀಠ ಖಾರವಾಗಿ ಹೇಳಿತ್ತು.

ಅಕ್ಟೋಬರ್‌ 29ರಂದು ಖುದ್ದು ಹಾಜರಾಗಿ ಪೀಠದ ಕ್ಷಮೆ ಕೋರಿದ್ದ ಅಧಿಕಾರಿಗಳನ್ನು ಕುರಿತು ನ್ಯಾಯಾಲಯವು “ಜಾಮೀನು ಸಹಿತ ವಾರಂಟ್ ಜಾರಿಗೊಳಿಸಿದ್ದರೂ ನ್ಯಾಯಾಲಯಕ್ಕೆ ಏಕೆ ಹಾಜರಾಗಲಿಲ್ಲ, ಸರ್ಕಾರಿ ಸೇವೆಯಲ್ಲಿರಲು ನಿಮಗೆ ಇಷ್ಟವಿಲ್ಲವೇ? ನ್ಯಾಯಾಲಯದ ಆದೇಶ ಉಲ್ಲಂಘಿಸಿರುವ ನಿಮ್ಮನ್ನು ಬಂಧಿಸಿ ಜೈಲಿಗೆ ಕಳಿಸಬಹುದು. ಈ ಕ್ಷಣದಿಂದಲೇ ಸೇವೆಯಿಂದ ಅಮಾನತುಗೊಳಿಸಬಹುದು ಎನ್ನುವುದು ನಿಮಗೆ ತಿಳಿದಿದೆಯಲ್ಲವೇ? ಐಎಎಸ್ ಅಧಿಕಾರಿಯೊಬ್ಬರಿಗೆ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಿರುವುದು ಒಳ್ಳೆಯ ವಿಚಾರ ಎಂದೆನಿಸುತ್ತದೆಯೇ? ಎಂದು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

ಈ ಘಟನೆಗಳ ಹಿನ್ನೆಲೆಯಲ್ಲಿ ಸೋಮವಾರವೂ ಇಂತಹದ್ದೇ ಪ್ರಸಂಗ ಮರುಕಳಿಸಿದ್ದು ಪೀಠವನ್ನು ಮತ್ತಷ್ಟು ಕೆರಳಿಸಿತ್ತು. ಇದರಿಂದಾಗಿ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಖುದ್ದು ಹಾಜರಾತಿಗೆ ಪೀಠ ಆದೇಶಿಸಿತು. ಎಜಿ ಅವರು ಪೀಠದ ಕ್ಷಮೆಯಾಚಿಸಿ ಇಂತಹ ಘಟನೆಗಳು ಮರುಕಳಿಸದಂತೆ ಭರವಸೆ ನೀಡಿದರು. ಆನಂತರ ಪೀಠವು “ಅಧಿಕಾರಿಗಳ ಖುದ್ದು ಹಾಜರಾತಿಗೆ ಸಂಬಂಧಿಸಿದಂತೆ ಮುಂದೆ ನ್ಯಾಯಾಲಯದ ಆದೇಶಗಳನ್ನು ಪಾಲಿಸುವ ಖಾತರಿಯನ್ನು ಅಡ್ವೊಕೇಟ್‌ ಜನರಲ್‌ (ಎಜಿ) ನೀಡಿದ್ದಾರೆ. ಈ ಸಂಬಂಧ ಅಗತ್ಯ ಸುತ್ತೋಲೆ ಹೊರಡಿಸಲು ಸರ್ಕಾರಕ್ಕೆ ಎಜಿ ಸಲಹೆ ಮಾಡಲಿದ್ದು, ನ್ಯಾಯಾಲಯಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಿತು. ಬೆಳವಣಿಗೆಗಳ ಬಗ್ಗೆ ಕ್ಷಮೆಯಾಚಿಸಿದ್ದ ನಾವದಗಿ ಅವರು ಇಂದೇ ಅಂಥ ಸಲಹೆಯನ್ನು ಮುಖ್ಯ ಕಾರ್ಯದರ್ಶಿ ಅವರಿಗೆ ನೀಡುತ್ತೇನೆ. ಸುತ್ತೋಲೆ ಹೊರಡಿಸಲು ಕೋರುತ್ತೇನೆ” ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

“ಸಚಿವ ಸಂಪುಟ ಸಭೆ ಅಥವಾ ಇನ್ಯಾವುದೇ ಸಭೆ, ಅಧಿಕಾರಿಗೆ ಎಷ್ಟೇ ತುರ್ತಿದ್ದರೂ ಅದು ನ್ಯಾಯಾಲಯದ ಆದೇಶಕ್ಕಿಂತ ಮಿಗಿಲಲ್ಲ. ಪ್ರಧಾನ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ನ್ಯಾಯಾಲಯವನ್ನು ಇಷ್ಟು ಲಘುವಾಗಿ ಪರಿಗಣಿಸುತ್ತಾರೆ ಎಂದರೆ ಹೇಗೆ? ನನ್ನ ಜೀವನದಲ್ಲಿ ಇಂಥ ಘಟನೆಯನ್ನು ಮೊದಲ ಬಾರಿಗೆ ಕಾಣುತ್ತಿದ್ದೇನೆ. ಹದಿಮೂರು ವರ್ಷಕ್ಕೂ ಹೆಚ್ಚು ಕಾಲದಿಂದ ನ್ಯಾಯಮೂರ್ತಿಯಾಗಿದ್ದೇನೆ. 22 ವರ್ಷಗಳ ಕಾಲ ವಕೀಲನಾಗಿ ಕೆಲಸ ಮಾಡಿದ್ದೇನೆ. ಇಂಥ ಘಟನೆ ನನ್ನ ಬದುಕಿನಲ್ಲಿ ಒಮ್ಮೆಯೂ ನಡೆದಿಲ್ಲ. ಇಂಥ ಪರಿಸ್ಥಿತಿಯನ್ನು ನನ್ನ ಜೀವನದಲ್ಲೇ ನೋಡಿಲ್ಲ. ಕರ್ನಾಟಕ ಸರ್ಕಾರ ಏನು ಮಾಡುತ್ತಿದೆ? ಹೈಕೋರ್ಟ್‌ ಅನ್ನು ಅಷ್ಟು ಹಗುರವಾಗಿ ಪರಿಗಣಿಸಲು ಹೇಗೆ ಸಾಧ್ಯ? ಇದು ಅತ್ಯಂತ ಕೆಟ್ಟ ಪರಿಸ್ಥಿತಿ” ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು ಎಜಿ ಅವರನ್ನು ಉದ್ದೇಶಿಸಿ ರಾಜ್ಯ ಸರ್ಕಾರ ಹಾಗೂ ಅದರ ಅಧಿಕಾರಿಗಳ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.