Kerala High Court and CCTV camera  
ಸುದ್ದಿಗಳು

ನೆರೆಯ ಸಿಸಿಟಿವಿ ಕ್ಯಾಮೆರಾ ತೆಗೆಯುವಂತೆ ದಂಪತಿ ಸಲ್ಲಿಸಿದ್ದ ಮನವಿ ತಿರಸ್ಕರಿಸದ್ದೇಕೆ ಕೇರಳ ಹೈಕೋರ್ಟ್?

ಖಾಸಗಿತನದ ಹಕ್ಕಿಗೆ ಸಾಂವಿಧಾನಿಕ ರಕ್ಷಣೆ ಇದ್ದೂ ಮತ್ತೊಬ್ಬ ವ್ಯಕ್ತಿಯ ಜೀವ ಮತ್ತು ಸುರಕ್ಷತೆ ಕೂಡ ಅಷ್ಟೇ ಮುಖ್ಯ ಎಂದು ನ್ಯಾಯಾಲಯ ನುಡಿಯಿತು.

Bar & Bench

ಗಂಭೀರ ಕ್ರಿಮಿನಲ್ ಬೆದರಿಕೆಗೆ ತುತ್ತಾಗಿದ್ದ ವೃದ್ಧ ಮಹಿಳೆಯ ರಕ್ಷಣೆಗಾಗಿ ಸ್ಥಾಪಿಸಲಾದ ಕಣ್ಗಾವಲು ವ್ಯವಸ್ಥೆ ಕುರಿತು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದಿರುವ ಕೇರಳ ಹೈಕೋರ್ಟ್‌ ತಮ್ಮ ಮನೆಯತ್ತ ಗುರಿ ಮಾಡಿ ಅಳವಡಿಸಲಾದ ಸಿಸಿಟಿವಿ ತೆಗೆಯುವಂತೆ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು‌ ಕೇರಳ ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ [ಶಿವಶಂಕರನ್ @ ಶಂಕನ್ ಕುಟ್ಟಿ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ]

ಖಾಸಗಿತನದ ಹಕ್ಕಿಗೆ ಸಾಂವಿಧಾನಿಕ ರಕ್ಷಣೆ ಇದ್ದೂ ಮತ್ತೊಬ್ಬ ವ್ಯಕ್ತಿಯ ಜೀವ ಮತ್ತು ಸುರಕ್ಷತೆ ಕೂಡ ಅಷ್ಟೇ ಮುಖ್ಯ ಎಂದು ನ್ಯಾಯಮೂರ್ತಿ ಎನ್ ನಾಗರೇಶ್ ತಿಳಿಸಿದರು.

ಕೆ ಎಸ್‌‌ ಪುಟ್ಟಸ್ವಾಮಿ ಮತ್ತಿತರರು ಹಾಗೂ ಭಾರತ ಒಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ‌ ತೀರ್ಪನ್ನು ಅವಲಂಬಿಸಿದ ನ್ಯಾಯಾಲಯ ಹಕ್ಕುಗಳು ಪ್ರತ್ಯೇಕವಾಗಿರದೆ ಅನುಪಾತದ ಚೌಕಟ್ಟಿನೊಳಗೆ ಕೆಲಸ ಮಾಡುತ್ತವೆ ಎಂದು ಅವರು ಹೇಳಿದರು.

ಒಬ್ಬರ ಗೌಪ್ಯತೆಯ ಹಕ್ಕು ಮತ್ತು ಇನ್ನೊಬ್ಬರ ಬದುಕುವ ಹಕ್ಕು ಪರಸ್ಪರ ಸಂಘರ್ಷದಲ್ಲಿರುವಾಗ ಎರಡೂ ಸಂಗತಿಗಳನ್ನು ಸೂಕ್ಷ್ಮವಾಗಿ ಸಮತೋಲನಗೊಳಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ತಮ್ಮ ಮನೆಯ ಪ್ರಮುಖ ಭಾಗದ ದೃಶ್ಯಾವಳಿಗಳನ್ನು ಸೆರೆ ಹಿಡಿಯಬಲ್ಲಂತಹ ಸಿಸಿಟಿವಿ ಕ್ಯಾಮೆರಾವನ್ನು ನೆರೆಮನೆಯ ವೃದ್ಧೆ ತಮ್ಮ‌ ಮನೆಯಲ್ಲಿ ಅಳವಡಿಸಿಕೊಂಡಿದ್ದಾರೆ.  ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲವಾದ್ದರಿಂದ ನ್ಯಾಯಾಲಯದ ಮೊರೆ ಹೋಗುವಂತಾಗಿದೆ. ಈ ಬಗೆಯಲ್ಲಿ ಕ್ಯಾಮೆರಾ ಅಳವಡಿಸಿರುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದ್ದು ತಮ್ಮ ಗೌಪ್ಯತೆಗೆ ಅಡ್ಡಿ ಉಂಟಾಗಿದೆ ಎಂದು ಮನವಿದಾರರು ಕೋರಿದ್ದರು.

ಆದರೆ ವಯೋವೃದ್ಧೆಯಾಧ ತಾನು ಅರ್ಜಿದಾರನ ಮೃತ ಸಹೋದರನ ಪತ್ನಿ. ತನಗೆ ಕ್ರಿಮಿನಲ್‌ ಬೆದರಿಕೆ, ಅತ್ಯಾಚಾರ ಯತ್ನ, ಮಾನಭಂಗ ಎಸಗುವ ಸಾಧ್ಯತೆ ಇದ್ದು ಈ ಎಲ್ಾ ಕಥತ್ಯಗಳ ಆರೋಪಿ ಅರ್ಜಿದಾರನೇ ಆಗಿದ್ದಾರೆ. ಅರ್ಜಿದಾರ ತೊಂದರೆ ಕೊಡುವ ಸಾಧ್ಯತೆ ಇರುವುದರಿಂದ ಸಿಸಿಟಿವಿ ಅಳವಡಿಸಲಾಗಿದೆ ಎಂದು ಪ್ರತಿವಾದಿ ವೃದ್ಧೆ ಹಾಗೂ ಅವರ ಮಕ್ಕಳು ವಾದಿಸಿದ್ದರು.

ವಾದ ಆಲಿಸಿದ ನ್ಯಾಯಾಲಯ ಪ್ರತಿವಾದಿಗಳು ಅರ್ಜಿದಾರರ ಮನೆ ಮೇಲೆ ನಿಗಾ ಇರಿಸಿದ್ದರು ಎನ್ನುವುದಕ್ಕೆ ಪುರಾವೆ ದೊರೆತಿಲ್ಲ.‌ ಮತ್ತೊಂದೆಡೆ ಗಂಭೀರ ಕೃತ್ಯಗಳಿಗೆ ತುತ್ತಾದ ವಯೋವೃದ್ಧೆಯ ಭದ್ರತೆಯೂ ಮಹತ್ವದ್ದು. ಹೀಗಾಗಿ ಸಮಂಜಸತೆಯ ಸಮತೋಲನ  ಆಕೆಯ ಪರವಾಗಿ ತೂಗುತ್ತದೆ ಎಂದು ನ್ಯಾಯಾಲಯ ನುಡಿಯಿತು.

ಅಲ್ಲದೆ ಪ್ರತಿವಾದಿಗಳಿಗೆ ಸುರಕ್ಷಿತವಾಗಿ ಜೀವನ ನಡೆಸುವ ಹಕ್ಕು ಇದ್ದು ಅವರ ಭದ್ರತೆಗಾಗಿ ಅವರು ಸಿಸಿಟಿವಿ ಅಳವಡಿಸಿಕೊಂಡಿದ್ದಾರೆ. ಅರ್ಜಿದಾರರ ಗೌಪ್ಯತೆ ಉಲ್ಲಂಘನೆಯಾಗಿದೆ ಎಂಬ ಸ್ಪಷ್ಟ ಸಾಕ್ಷಿ ಇಲ್ಲದಿರುವಾಗ ಸಿಸಿಟಿವಿ ತೆಗೆದು ಹಾಕುವ ಆದೇಶ ನೀಡಲಾಗದು ಎಂದ ಅದು ಅರ್ಜಿದಾರರ ರಿಟ್‌ ಮನವಿ ತಿರಸ್ಕರಿಸಿತು.  

[ತೀರ್ಪಿನ ಪ್ರತಿ]

Sivasankaran___Sankarankutty_vs_State_of_Kerala___ors.pdf
Preview