ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್ (ಎಎನ್‌ಐ) ಸುದ್ದಿಸಂಸ್ಥೆಯನ್ನು ಕೇಂದ್ರ ಸರ್ಕಾರದ "ಪ್ರಚಾರ ಸಾಧನ" ಎಂದು ಉಲ್ಲೇಖಿಸಿ ವಿಕಿಪೀಡಿಯಾ "ಅಭಿಪ್ರಾಯಪ್ರೇರಿತ" ಮತ್ತು "ತಟಸ್ಥವಲ್ಲದ" ಪುಟ ರೂಪಿಸಿದ್ದಕ್ಕಾಗಿ ದೆಹಲಿ ಹೈಕೋರ್ಟ್ ಮಂಗಳವಾರ ಟೀಕಿಸಿದೆ.
ವಿಕಿಪೀಡಿಯಾವನ್ನು ಒಂದು ವಿಶ್ವಕೋಶವೆಂದು ಗ್ರಹಿಸಲಾಗಿದ್ದು ಅದು ಆನ್ಲೈನ್ ಬ್ಲಾಗ್ ರೀತಿಯಲ್ಲದೆ ತಟಸ್ಥವಾಗಿರಬೇಕು ಎಂದು ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ನ್ಯಾಯಮೂರ್ತಿ ರಜನೀಶ್ ಕುಮಾರ್ ಗುಪ್ತಾ ಅವರಿದ್ದ ಪೀಠ ಕಿವಿಮಾತು ಹೇಳಿತು.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವೆಲ್ಲರೂ ವಿಕಿಪೀಡಿಯಾವನ್ನು ಉಲ್ಲೇಖಿಸುತ್ತೇವೆ. ಮಕ್ಕಳಿಗೂ ಅದರಿಂದ ಮಾಹಿತಿ ಪಡೆದು ಕಲಿಸಲಾಗುತ್ತದೆ. 'ಪೀಡಿಯಾ' ಎಂಬ ಪದ ವಿಶ್ವಕೋಶದಿಂದ ಬಂದಿದೆ. ವಿಶ್ವಕೋಶವು ತಟಸ್ಥವಾಗಿರಬೇಕು. ವಿಕಿಪೀಡಿಯಾ ಆ ನಿಟ್ಟಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು ಈ ರೀತಿ ಯಾರೊಬ್ಬರ ಪರ ನಿಲ್ಲಲಾರಂಭಿಸಿದರೆ ಅದು ಉಳಿದ ಬ್ಲಾಗ್‌ಗಳಂತೆಯೇ ಆಗುತ್ತದೆ ಎಂದು ನ್ಯಾಯಾಲಯ ಮೌಖಿಕವಾಗಿ ತಿಳಿಸಿತು.
ತಾನು 'ಮಧ್ಯಸ್ಥ ವೇದಿಕೆ' ಎಂದು ಹೇಳಿಕೊಳ್ಳುವ ವಿಕಿಪೀಡಿಯಾವು ಪ್ರಕರಣದ ಅರ್ಹತೆಯ ಕುರಿತಂತೆ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂತಲೂ ಪೀಠ ನುಡಿಯಿತು.
ಆದರೆ, ಎಎನ್‌ಐ ವಿರುದ್ಧದ ಮಾನನಷ್ಟ ವಸ್ತುವಿಷಯ ತೆಗೆದುಹಾಕುವಂತೆ ಮತ್ತು ಅಂತಹ ವಿಚಾರಗಳ ಪ್ರಕಟಣೆ ನಿಲ್ಲಿಸುವಂತೆ ವಿಕಿಪೀಡಿಯಾಕ್ಕೆ ಏಪ್ರಿಲ್ 2 ರಂದು ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ನ್ಯಾಯಾಲಯ ಸ್ವಲ್ಪ ಮಾರ್ಪಡಿಸಿತು.
ವಿಕಿಪೀಡಿಯಾ ಮಾನಹಾನಿಕರ ವಸ್ತುವನ್ನು ತೆಗೆದುಹಾಕಬೇಕು. ಅದೇ ರೀತಿಯ ವಸ್ತು ವಿಷಯ ಮತ್ತೆ ವಿಕಿಪೀಡಿಯಾದಲ್ಲಿ ಪ್ರಕಟವಾದರೆ ಆ ಕುರಿತು ಎಎನ್‌ಐ ಮಾಹಿತಿ ನೀಡಿದ ನಂತರ ವಿಕಿಪೀಡಿಯಾ ಕ್ರಮ ಕೈಗೊಳ್ಳಬೇಕು ಎಂದು ವಿಭಾಗೀಯ ಪೀಠ ತಿಳಿಸಿತು.