ramesh sogemane
ಸುದ್ದಿಗಳು

ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಟ್ವೀಟ್‌: ಕ್ರಮ ಏಕಿಲ್ಲ ಎಂದು ಟ್ವಿಟರ್‌ಗೆ ದೆಹಲಿ ಹೈಕೋರ್ಟ್ ಪ್ರಶ್ನೆ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಹ್ಯಾಂಡಲನ್ನೇ ಅಮಾನತುಗೊಳಿಸಿರುವಾಗ ಅಂತಹುದೇ ಆಕ್ಷೇಪಾರ್ಹ ಖಾತೆಗಳ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿದೆ.

Bar & Bench

ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದಾರೆಂಬ ಕಾರಣಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನೇ ಅಮಾನತ್ತಿನಲ್ಲಿಟ್ಟಿದ್ದ ಟ್ವಿಟರ್‌ ಹಿಂದೂ ದೇವಾನುದೇವತೆಗಳ ಬಗ್ಗೆ ಅಂತಹುದೇ ಟ್ವೀಟ್‌ ಮಾಡುವ ಖಾತೆಗಳನ್ನು ಏಕೆ ಅಮಾನತುಗೊಳಿಸುತ್ತಿಲ್ಲ? ಅಂತಹ ಖಾತೆಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ ಅನ್ನು ಪ್ರಶ್ನಿಸಿದೆ [ಆದಿತ್ಯ ಸಿಂಗ್ ದೇಶ್ವಾಲ್ ಮತ್ತು ಒಕ್ಕೂಟ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ತನಗೆ ಸೂಕ್ಷ್ಮ ಎನಿಸುವ ಮಾಹಿತಿಯ ಕುರಿತಂತೆ ಮಾತ್ರ ಟ್ವಿಟರ್‌ ಕ್ರಮ ಕೈಗೊಳ್ಳುವಂತೆ ಕಾಣುತ್ತದೆ. ಆದರೆ ಬೇರೆ ಪ್ರದೇಶ ಮತ್ತು ಜನಾಂಗಗಳು ನೊಂದ ವಿಚಾರಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ವಿಪಿನ್ ಸಾಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಆದ್ದರಿಂದ, ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ನಿರ್ಬಂಧಿಸುವ ಕುರಿತು ಸಂಸ್ಥೆಯ ನೀತಿಯನ್ನು ವಿವರಿಸುವ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯವು ನಿರ್ದೇಶಿಸಿದೆ. ಅಲ್ಲದೆ ಪ್ರತಿ ಅಫಿಡವಿಟ್‌ನೊಂದಿಗೆ ಖಾತೆ ಅಥವಾ ಆಕ್ಷೇಪಾರ್ಹ ಮಾಹಿತಿ ಅಥವಾ ಅದನ್ನು ಪ್ರಕಟಿಸುವ ಖಾತೆಗೆ ನಿರ್ಬಂಧ ವಿಧಿಸುವುದಕ್ಕೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್‌ಒಪಿ) ದಾಖಲಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.

ಎಥಿಯಿಸ್ಟ್‌ ರಿಪಬ್ಲಿಕ್‌ ಹೆಸರಿನ ಟ್ವಿಟರ್‌ ಹ್ಯಾಂಡಲ್‌ ಮೂಲಕ ಹಲವು ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಲಾಗುತ್ತಿದ್ದು ವಿವಿಧ ದೂರುಗಳ ಹೊರತಾಗಿಯೂ ಟ್ವಿಟರ್‌ ಆ ಖಾತೆಯನ್ನು ಅಮಾನತುಗೊಳಿಸಿಲ್ಲ ಅಥವಾ ಆಕ್ಷೇಪಾರ್ಹ ವಿಚಾರಗಳನ್ನು ತೆಗೆದುಹಾಕಿಲ್ಲ ಎಂದು ದೂರಿ ವಕೀಲ ಆದಿತ್ಯ ದೇಶ್ವಾಲ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.