ಅಮೆರಿಕಾದಲ್ಲಿ ಸ್ಥಾಪಿತವಾದ ಟ್ವಿಟರ್ ಇಂಕ್, ಟ್ವಿಟರ್ ಇಂಡಿಯಾದಲ್ಲಿ ಯಾವುದೇ ಷೇರು ಹೊಂದಿಲ್ಲ ಎಂದು ಹಿರಿಯ ವಕೀಲ ಸಿ ವಿ ನಾಗೇಶ್ ಅವರು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಟ್ವಿಟರ್ ಇಂಡಿಯಾ ಉದ್ಯೋಗಿ ಮನೀಶ್ ಮಹೇಶ್ವರಿ ಅವರನ್ನು ಪ್ರತಿನಿಧಿಸಿದ್ದ ನಾಗೇಶ್ ಅವರು ಟ್ವಿಟಿರ್ ಇಂಡಿಯಾ ಪ್ರತ್ಯೇಕ ಸಂಸ್ಥೆಯಾಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿನ ವಿಷಯದ ಮೇಲೆ ಅದು ಯಾವುದೇ ನಿಯಂತ್ರಣ ಹೊಂದಿಲ್ಲ ಎಂದಿದ್ದಾರೆ. “ಟ್ವಿಟರ್ ಇಂಡಿಯಾದಲ್ಲಿ ಅಮೆರಿಕದ ಟ್ವಿಟರ್ ಯಾವುದೇ ಷೇರು ಹೊಂದಿಲ್ಲ. ಅದಕ್ಕಾಗಿಯೇ ಅದು ಪ್ರತ್ಯೇಕ ಸಂಸ್ಥೆಯಾಗಿದೆ” ಎಂದಿದ್ದಾರೆ.
ಆದರೆ, ಇದಕ್ಕೆ ಪ್ರತಿವಾದಿಸಿದ ಉತ್ತರ ಪ್ರದೇಶವನ್ನು ಪ್ರತಿನಿಧಿಸಿರುವ ವಕೀಲ ಪ್ರಸನ್ನ ಕುಮಾರ್ ಐರ್ಲೆಂಡ್‌ನಲ್ಲಿ ಟ್ವಿಟರ್ ಅಂತಾರಾಷ್ಟ್ರೀಯ ಕಂಪೆನಿಯು ಸ್ಥಾಪಿತವಾಗಿದ್ದು, ಅದು ಟ್ವಿಟರ್ ಇಂಡಿಯಾದಲ್ಲಿ ಶೇ. 99ರಷ್ಟು ಷೇರುಗಳನ್ನು ಹೊಂದಿದೆ ಎಂದು ವಾದಿಸಿದರು.
ಗಾಜಿಯಾಬಾದ್ ವಿಡಿಯೊ ದಾಳಿಗೆ ಸಂಬಂಧಿಸಿದಂತೆ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 41ಎ ಅಡಿ ಉತ್ತರ ಪ್ರದೇಶ ಪೊಲೀಸರು ನೀಡಿರುವ ನೋಟಿಸ್ ಅನ್ನು ಪ್ರಶ್ನಿಸಿ ಟ್ವಿಟರ್ ಇಂಡಿಯಾದ ಮನೀಶ್ ಮಹೇಶ್ವರಿ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ವಾದ-ಪ್ರತಿವಾದ ಮಂಡಿಸಲಾಗಿದೆ.
ಜುಲೈ 9ರಂದು ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ನರೇಂದರ್ ಅವರು ಇಂದು ಆದೇಶ ಹೊರಡಿಸಿಲು ಆರಂಭಿಸಿದರು. ನಾಳೆಯು ಆದೇಶ ನೀಡುವುದನ್ನು ನ್ಯಾಯಮೂರ್ತಿಗಳು ಮುಂದುವರಿಸಲಿದ್ದಾರೆ.