Tahir Hussain and Delhi Riots 
ಸುದ್ದಿಗಳು

'ಒಂಬತ್ತು ಪ್ರಕರಣಗಳಲ್ಲಿ ಜಾಮೀನು ನೀಡಿದರೂ ಅಂಥದ್ದೇ ಮತ್ತೊಂದು ಪ್ರಕರಣದಲ್ಲಿ ತಾಹಿರ್‌ಗೆ ಜಾಮೀನು ಏಕಿಲ್ಲ?' ಸುಪ್ರೀಂ

ರಾಷ್ಟ್ರ ರಾಜಧಾನಿಯಲ್ಲಿ 2020ರ ಗಲಭೆ ವೇಳೆ ಹತರಾದ ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಸೇನ್ ಆರೋಪಿಯಾಗಿದ್ದಾರೆ.

Bar & Bench

ದೆಹಲಿ ಗಲಭೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಪಾಲಿಕೆ ಸದಸ್ಯ ತಾಹಿರ್ ಹುಸೇನ್ ಅವರಿಗೆ ಕೇವಲ ಒಂದು ಪ್ರಕರಣದಲ್ಲಿ ಜಾಮೀನು ನಿರಾಕರಿಸಿರುವುದು ಏಕೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ದೆಹಲಿ ಪೊಲೀಸರನ್ನು ಪ್ರಶ್ನಿಸಿದೆ.

ಹುಸೇನ್‌ಗೆ ಏಕೆ ಮಧ್ಯಂತರ ಜಾಮೀನು ಅಥವಾ ಸಾಮಾನ್ಯ ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ತಿಳಿಸುವಂತೆ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್‌ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತನಿಖಾ ಸಂಸ್ಥೆಗೆ ಸೂಚಿಸಿತು.

“ನಾವು ಅರ್ಹತೆಯ ಆಧಾರದ ಮೇಲೆ ಪ್ರಕರಣ ಆಲಿಸಿದ್ದು ಒಂದೊಮ್ಮೆ ನ್ಯಾಯಾಲಯಕ್ಕೆ ಒಪ್ಪಿಗೆಯಾದರೆ ನಿಯಮಿತ ಜಾಮೀನು ಅಲ್ಲದೆ ಹೋದರೂ ಮಧ್ಯಂತರ ಜಾಮೀನು ಏಕೆ ನೀಡಬಾರದು... ಇಂಥದ್ದೇ ಆರೋಪ ಎದುರಿಸುತ್ತಿರುವ ಎಲ್ಲಾ  9 ಪ್ರಕರಣಗಳಲ್ಲಿ ಜಾಮೀನು ದೊರೆತಿರುವಾಗ ಈ ಪ್ರಕರಣದಲ್ಲೇಕೆ ಜಾಮೀನು ನೀಡಬಾರದು” ಎಂದು ನ್ಯಾಯಮೂರ್ತಿ ಅಮಾನುಲ್ಲಾ ಪ್ರಶ್ನಿಸಿದರು.

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಲು ಮತ್ತು ಪ್ರಚಾರ ಮಾಡಲು ದೆಹಲಿ ಗಲಭೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ಹುಸೇನ್ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಪ್ರಶ್ನೆಗಳನ್ನು ಕೇಳಿತು.

ದೆಹಲಿ ಹೈಕೋರ್ಟ್ ತಾಹಿರ್‌ ಅವರಿಗೆ ಈ ಹಿಂದೆ ಪರಿಹಾರ ನೀಡಲು ನಿರಾಕರಿಸಿತ್ತು. ರಾಷ್ಟ್ರ ರಾಜಧಾನಿಯಲ್ಲಿ 2020ರ ಗಲಭೆ ವೇಳೆ ಹತರಾದ ಗುಪ್ತಚರ ದಳದ ಅಧಿಕಾರಿ ಅಂಕಿತ್‌ ಶರ್ಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಸೇನ್‌ ಆರೋಪಿಯಾಗಿದ್ದಾರೆ.

ಎಐಎಂಐಎಂ ಪಕ್ಷದಿಂದ ಮುಸ್ತಫಾಬಾದ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿದ್ದು ಇದಕ್ಕಾಗಿ ಜನವರಿ 14 ರಿಂದ ಫೆಬ್ರವರಿ 9 ರವರೆಗೆ ಮಧ್ಯಂತರ ಜಾಮೀನು ನೀಡುವಂತೆ ಅವರು ಕೋರಿದ್ದರು. ನಾಮಪತ್ರ ಸಲ್ಲಿಕೆ ಮತ್ತು ಚುನಾವಣಾ ಪ್ರಚಾರದಂತಹ ಪ್ರಕ್ರಿಯೆಗಳಿಗೆ ತನ್ನ ಭೌತಿಕ ಉಪಸ್ಥಿತಿ ಅಗತ್ಯವಿದೆ ಎಂದು ಅವರು ವಾದಿಸಿದ್ದರು.

ದೆಹಲಿ ಗಲಭೆಗೆ ಸಂಬಂಧಿಸಿದ ಇತರ ಒಂಬತ್ತು ಪ್ರಕರಣಗಳಲ್ಲಿ ತಾಹಿರ್‌ ಆರೋಪಿಯಾಗಿದ್ದರೂ, ಅಂಕಿತ್ ಶರ್ಮಾ ಸಾವಿನ ಪ್ರಕರಣವನ್ನು ಹೊರತುಪಡಿಸಿ ಉಳಿದೆಲ್ಲ ಪ್ರಕರಣಗಳಲ್ಲಿ ಜಾಮೀನು ಪಡೆದಿರುವುದಾಗಿ ಹೇಳಿದ್ದರು.  ಚುನಾವಣೆಗೆ ಸ್ಪರ್ಧಿಸುವುದಕ್ಕಾಗಿ ಮತ್ತು ಪ್ರಚಾರ ಮಾಡುವುದಕ್ಕಾಗಿ ಮಧ್ಯಂತರ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು.