ದೆಹಲಿ ಚುನಾವಣೆಗೆ ನಾಮಪತ್ರ: ತಾಹಿರ್ ಹುಸೇನ್‌ಗೆ ದೆಹಲಿ ಹೈಕೋರ್ಟ್ ಕಸ್ಟಡಿ ಪೆರೋಲ್

ರಾಷ್ಟ್ರ ರಾಜಧಾನಿಯಲ್ಲಿ 2020ರ ಗಲಭೆ ವೇಳೆ ಹತರಾದ ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಸೇನ್ ಆರೋಪಿಯಾಗಿದ್ದಾರೆ.
Tahir Hussain and Delhi Riots
Tahir Hussain and Delhi Riots
Published on

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ನಾಮಪತ್ರ ಸಲ್ಲಿಸಲು ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಪಾಲಿಕೆಯ ಮಾಜಿ ಸದಸ್ಯ, ಆಮ್‌ ಆದ್ಮಿ ಪಕ್ಷದ (ಎಎಪಿ) ತಾಹಿರ್‌ ಹುಸೇನ್‌ಗೆ ದೆಹಲಿ ಹೈಕೋರ್ಟ್‌ ಕಸ್ಟಡಿ ಪೆರೋಲ್‌ ನೀಡಿದೆ.

ತಾಹಿರ್‌ ಅವರು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ವಿಚಾರಣೆ ವೇಳೆ ಚುನಾವಣೆಗೆ ಸ್ಪರ್ಧಿಸಲು ಹಾಗೂ ಪ್ರಚಾರ ಮಾಡುವುದಕ್ಕಾಗಿ ಹುಸೇನ್ ಅವರು ಸಲ್ಲಿಸಿ ಮಧ್ಯಂತರ ಜಾಮೀನು ಕೋರಿಕೆಯನ್ನು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ನಿರಾಕರಿಸಿದರು.

Also Read
[ಲೋಕಸಭೆ ಚುನಾವಣೆ] ಡೀಪ್‌ಫೇಕ್‌ ವಿಡಿಯೋ ಬಗ್ಗೆ ಇಸಿಐ ಕ್ರಮಕೈಗೊಳ್ಳುವ ವಿಶ್ವಾಸ ಇದೆ ಎಂದ ದೆಹಲಿ ಹೈಕೋರ್ಟ್

ನಾಮಪತ್ರ ಸಲ್ಲಿಕೆ ವೇಳೆ ತಾಹಿರ್‌ ಯಾವುದೇ ಬಗೆಯ ಫೋನ್‌ ಬಳಸುವಂತಿಲ್ಲ; ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊರತುಪಡಿಸಿ ಯಾವುದೇ ವ್ಯಕ್ತಿಯೊಂದಿಗೆ ಸಂವಹನ ನಡೆಸುವಂತಿಲ್ಲ; ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲ; ಕುಟುಂಬದ ಸದಸ್ಯರು ಉಪಸ್ಥಿತರಿರಬಹುದಾದರೂ ನಾಮಪತ್ರ ಸಲ್ಲಿಕೆಯ ಛಾಯಾಚಿತ್ರಗಳನ್ನು ತೆಗೆಯಲು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಅವಕಾಶವಿಲ್ಲ ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಅವರಿಗೆ ಕಸ್ಟಡಿ ಪೆರೋಲ್‌ ನೀಡಿತು.

ನಾಮಪತ್ರ ಸಲ್ಲಿಕೆಗೆ ಅನುಕೂಲ ಮಾಡಿಕೊಡುವಂತೆಯೂ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಇದೇ ವೇಳೆ ನಿರ್ದೇಶನ ನೀಡಿತು.

ರಾಷ್ಟ್ರ ರಾಜಧಾನಿಯಲ್ಲಿ 2020ರ ಗಲಭೆ ವೇಳೆ ಹತರಾದ ಗುಪ್ತಚರ ದಳದ ಅಧಿಕಾರಿ ಅಂಕಿತ್‌ ಶರ್ಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಸೇನ್‌ ಆರೋಪಿಯಾಗಿದ್ದು, ಮಾರ್ಚ್ 16, 2020ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಎಐಎಂಐಎಂ ಪಕ್ಷದಿಂದ ಮುಸ್ತಫಾಬಾದ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿದ್ದು ಇದಕ್ಕಾಗಿ ಜನವರಿ 14 ರಿಂದ ಫೆಬ್ರವರಿ 9 ರವರೆಗೆ ಮಧ್ಯಂತರ ಜಾಮೀನು ನೀಡುವಂತೆ ಅವರು ಕೋರಿದ್ದರು. ನಾಮಪತ್ರ ಸಲ್ಲಿಕೆ ಮತ್ತು ಚುನಾವಣಾ ಪ್ರಚಾರದಂತಹ ಪ್ರಕ್ರಿಯೆಗಳಿಗೆ ತನ್ನ ಭೌತಿಕ ಉಪಸ್ಥಿತಿ ಅಗತ್ಯವಿದೆ ಎಂದು ಅವರು ವಾದಿಸಿದ್ದರು.

ದೆಹಲಿ ಗಲಭೆಗೆ ಸಂಬಂಧಿಸಿದ ಇತರ ಒಂಬತ್ತು ಪ್ರಕರಣಗಳಲ್ಲಿ ತಾಹಿರ್‌ ಆರೋಪಿಯಾಗಿದ್ದರೂ, ಅಂಕಿತ್ ಶರ್ಮಾ ಸಾವಿನ ಪ್ರಕರಣವನ್ನು ಹೊರತುಪಡಿಸಿ ಉಳಿದೆಲ್ಲ ಪ್ರಕರಣಗಳಲ್ಲಿ ಜಾಮೀನು ಪಡೆದಿರುವುದಾಗಿ ಹೇಳಿದ್ದರು. ನಾಮಪತ್ರ ಸಲ್ಲಿಕೆಗೆ ಜನವರಿ 17 ಕೊನೆಯ ದಿನವಾಗಿದೆ.

Also Read
ದೆಹಲಿ ಗಲಭೆ: ಎಎಪಿ ಮುಖಂಡ, ಮಾಜಿ ಪಾಲಿಕೆ ಸದಸ್ಯ ತಾಹಿರ್ ಹುಸೇನ್ ವಿರುದ್ಧ ಆರೋಪ ನಿಗದಿಪಡಿಸಿದ ಸ್ಥಳೀಯ ನ್ಯಾಯಾಲಯ

ಅರ್ಜಿದಾರರು ಒಂಬತ್ತು ಪ್ರಕರಣಗಳಲ್ಲಿ ಜಾಮೀನು ಪಡೆದಿರುವುದನ್ನು ಒಪ್ಪಿಕೊಳ್ಳಬಹುದಾದರೂ ಪ್ರಸ್ತುತ ಪ್ರಕರಣದಲ್ಲಿ ಅವರು ಬಂಧನದಲ್ಲಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದ ನ್ಯಾಯಾಲಯ ಅವರಿಗೆ ಕಸ್ಟಡಿ ಪೆರೋಲ್‌ ನೀಡುವುದು ಸೂಕ್ತ ಎಂದು ನಿರ್ಧರಿಸಿತು.

ಹುಸೇನ್ ಅವರ ಸಾಮಾನ್ಯ ಜಾಮೀನು ಅರ್ಜಿ ಫೆಬ್ರವರಿ 20 ರಂದು ವಿಚಾರಣೆಗೆ ಬರಲಿದೆ. ಹಿರಿಯ ವಕೀಲೆ ರೆಬೆಕಾ ಜಾನ್ ಮತ್ತವರ ತಂಡ ಹುಸೇನ್‌ ಅವರನ್ನು ಪ್ರತಿನಿಧಿಸಿತ್ತು. ಸರ್ಕಾರದ ಪರವಾಗಿ ಎಎಸ್‌ಜಿ ಚೇತನ್ ಶರ್ಮಾ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಜತ್ ನಾಯರ್ ಮತ್ತಿತರರು ವಾದ ಮಂಡಿಸಿದರು.

Kannada Bar & Bench
kannada.barandbench.com