Justice (Rtrd.) H N Nagamohan Das
Justice (Rtrd.) H N Nagamohan Das Youtube
ಸುದ್ದಿಗಳು

[40% ಕಮಿಷನ್‌ ಆರೋಪ] ಏಕ ವ್ಯಕ್ತಿ ಆಯೋಗದ ಮುಂದೆ ಏಕೆ ಒಂದೇ ಒಂದು ಪ್ರಕ್ರಿಯೆ ನಡೆದಿಲ್ಲ: ಹೈಕೋರ್ಟ್‌ ಪ್ರಶ್ನೆ

Bar & Bench

ಕಳೆದ ನಾಲ್ಕು ವರ್ಷದಲ್ಲಿ ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ ದಾಸ್‌ ಅವರ ಏಕ ವ್ಯಕ್ತಿ ಆಯೋಗದ ಮುಂದೆ ಏಕೆ ಒಂದೇ ಒಂದು ಪ್ರಕ್ರಿಯೆ ನಡೆದಿಲ್ಲ ಎಂಬುದನ್ನು ರಾಜ್ಯ ಸರ್ಕಾರ ತಿಳಿಸಬೇಕು. ಇಲ್ಲವಾದಲ್ಲಿ ಸೂಕ್ತ ಆದೇಶ ಮಾಡಲಾಗುವುದು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಎಚ್ಚರಿಸಿದೆ.

ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ಏಕವ್ಯಕ್ತಿ ಆಯೋಗ ರಚಿಸಿ 2023ರ ಆಗಸ್ಟ್‌ 5ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೆರ್ಸಸ್‌ ನಿಕ್ಷೇಪ್‌ ಇನ್ಫ್ರಾ ಪ್ರಾಜೆಕ್ಟ್ಸ್‌ ಸೇರಿದಂತೆ ಹಲವು ಗುತ್ತಿಗೆ ಕಂಪೆನಿಗಳು ಮತ್ತು ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಮುಂದಿನ ವಿಚಾರಣೆಯ ವೇಳೆಗೆ ಸಮಿತಿಯ ಮುಂದೆ ಇದುವರೆಗೆ ಏಕೆ ಒಂದೇ ಒಂದು ಪ್ರಕ್ರಿಯೆ ನಡೆದಿಲ್ಲ ಎಂಬುದರ ಕುರಿತು ತಿಳಿಸಬೇಕು. ಒಂದೊಮ್ಮೆ ಪ್ರಕ್ರಿಯೆ ನಡೆಯದಿರುವುದನ್ನು ಸಮರ್ಥನೆ ಮಾಡದಿದ್ದರೆ ಅರ್ಜಿದಾರರ ಕೋರಿಕೆಯಂತೆ ಸೂಕ್ತ ಆದೇಶ ಮಾಡಲಾಗುವುದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ನ್ಯಾ. ನಾಗಮೋಹನ್‌ ದಾಸ್‌ ಅವರ ನೇತೃತ್ವದ ಏಕಸದಸ್ಯ ಸಮಿತಿ ರಚಿಸಿರುವ 2023ರ ಆಗಸ್ಟ್‌ 5ರ ಆದೇಶ ರದ್ದುಪಡಿಸಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿದೆ.

25.08.2023ರಿಂದ ಯಾವುದೇ ಪ್ರಕ್ರಿಯೆ ನಡೆಯದಿರುವುದು ಮತ್ತು 13.12.2023ರ ಆದೇಶದ ನಂತರವೂ ಏನೂ ಬೆಳವಣಿಗೆಯಾಗದಿರುವುದನ್ನು ಗಮನಿಸಿದರೆ ಮೇಲ್ನೋಟಕ್ಕೆ ಅದು ಹಿರಿಯ ವಕೀಲರು ಹೇಳಿರುವುದು ಸರಿ ಇರುವಂತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಂಬಂಧಿತ ಎಲ್ಲಾ ಪಾಲುದಾರರ ವಾದ ಆಲಿಸಿದ ಬಳಿಕ ಅವರು ಸಲ್ಲಿಸುವ ದಾಖಲೆಗಳನ್ನು ಪರಿಗಣಿಸಲು ನ್ಯಾಯಾಲಯವು ಆಯೋಗಕ್ಕೆ 45 ದಿನಗಳ ಸಮಯ ನೀಡಿತ್ತು. ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು 45 ದಿನ ಸಮಯ ನೀಡಿದರೂ ಒಂದೇ ಒಂದು ಹಾಳೆಯನ್ನು ಆಯೋಗಕ್ಕೆ ಸಂಬಂಧಿತರು ಸಲ್ಲಿಸಿಲ್ಲ. 07.12.2023ರಂದು ಮಧ್ಯಂತರ ಆದೇಶ ಮಾಡಿದಾಗ ಈ ನಿರ್ದಿಷ್ಟ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. 25.08.2023ರಂದು ನ್ಯಾ. ನಾಗಮೋಹನ್‌ ದಾಸ್‌ ಅವರ ಸಮಿತಿ ರಚಿಸಿದಾಗಿನಿಂದ ಒಂದೇ ಒಂದು ಹಾಳೆಯನ್ನು ಅಲುಗಾಡಿಸಲಾಗಿಲ್ಲ ಎಂದು ತಿಳಿಸಿದ್ದಾರೆ. ಗುತ್ತಿಗೆದಾರರಿಗೆ ಹಣ ಪಾವತಿಸುವುದರಿಂದ ಬಚಾವಾಗಲು ರಾಜ್ಯ ಸರ್ಕಾರ ಆಯೋಗ ರಚಿಸಿದೆ ಎಂದು ಆಪಾದಿಸಿದ್ದರು.