ಗುತ್ತಿಗೆ ಕಾಮಗಾರಿಗಳಲ್ಲಿ ಅಕ್ರಮ ಪ್ರಕರಣ: ನ್ಯಾ. ನಾಗಮೋಹನ್‌ ದಾಸ್‌ ಆಯೋಗಕ್ಕೆ ವರದಿ ಸಲ್ಲಿಸಲು 45 ದಿನಗಳ ಗಡುವು

ಎಲ್ಲಾ ಪಾಲುದಾರರ ವಾದವನ್ನು ಆಯೋಗವು ಆಲಿಸಿದ ನಂತರ ಕಾನೂನು ಪ್ರಕಾರ ವರದಿಯನ್ನು ಸಿದ್ಧಪಡಿಸಬೇಕು. ಆ ವರದಿಯನ್ನು 45 ದಿನಗಳ ಪೂರ್ಣಗೊಂಡ ನಂತರ ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು.
Justice (Rtrd.) H N Nagamohan Das
Justice (Rtrd.) H N Nagamohan DasYoutube

ಕಳೆದ ನಾಲ್ಕು ವರ್ಷದಲ್ಲಿ ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ ದಾಸ್‌ ಅವರ ಏಕ ವ್ಯಕ್ತಿ ಆಯೋಗಕ್ಕೆ ವರದಿ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ 45 ದಿನಗಳ ಗಡುವು ವಿಧಿಸಿ ಬುಧವಾರ ಆದೇಶಿಸಿದೆ.

ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ಏಕವ್ಯಕ್ತಿ ಆಯೋಗ ರಚಿಸಿ 2023ರ ಆಗಸ್ಟ್‌ 5ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೆರ್ಸಸ್‌ ನಿಕ್ಷೇಪ್‌ ಇನ್ಫ್ರಾ ಪ್ರಾಜೆಕ್ಟ್ಸ್‌ ಸೇರಿದಂತೆ ಹಲವು ಗುತ್ತಿಗೆ ಕಂಪೆನಿಗಳು ಮತ್ತು ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

2019-20ರಿಂದ 2022-23ರವರೆಗೆ ಬಿಬಿಎಂಪಿ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳು ಗುತ್ತಿಗೆದಾರರಿಗೆ ವಹಿಸಿದ ಎಲ್ಲಾ ಗುತ್ತಿಗೆ ಕಾಮಗಾರಿಗಳ ತನಿಖೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ಘಟಕವನ್ನು (ಎಸ್‌ಐಟಿ) ರಚಿಸಿದೆ. ಎಸ್‌ಐಟಿಯ ರಚನೆಯ ಸಿಂಧುತ್ವವನ್ನು ಈ ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗಿದೆ. ಎಸ್‌ಐಟಿ ರಚನೆಯ ನಂತರ ಯಾವುದೇ ಪ್ರಕ್ರಿಯೆಗಳೂ ನಡೆದಿಲ್ಲ. ಇದರ ಬೆನ್ನಲ್ಲೆಯೇ 2019ರಿಂದ 2023ರವರೆಗೆ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ವಿಚಾರಣೆ ನಡೆಸಲು ಏಕವ್ಯಕ್ತಿ ಆಯೋಗವನ್ನು ರಚಿಸಲಾಗಿದೆ. ಅಲ್ಲಿಯೂ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಎಸ್‌ಐಟಿ ಕೈಗೊಂಡ ಎಲ್ಲಾ ಶೋಧನೆಗಳನ್ನು (ಫೈಡಿಂಗ್ಸ್‌) ಏಕವ್ಯಕ್ತಿಯ ಆಯೋಗ ಪರಿಗಣಿಸಲಿದೆ. ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಪಾಲುದಾರರು ಮತ್ತು ಎಸ್‌ಐಟಿ ಇರಿಸುವ ಎಲ್ಲಾ ದಾಖಲೆಗಳನ್ನು ಪರಿಗಣಿಸಲು ಆಯೋಗಕ್ಕೆ 45 ದಿನಗಳ ಕಾಲಮಿತಿ ನಿಗದಿಪಡಿಸಲಾಗುತ್ತಿದೆ. ಎಲ್ಲಾ ಪಾಲುದಾರರ ವಾದವನ್ನು ಆಯೋಗವು ಆಲಿಸಿದ ನಂತರ ಕಾನೂನು ಪ್ರಕಾರ ವರದಿಯನ್ನು ಸಿದ್ಧಪಡಿಸಬೇಕು. ಆ ವರದಿಯನ್ನು 45 ದಿನಗಳ ಪೂರ್ಣಗೊಂಡ ನಂತರ ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ ಹೈಕೋರ್ಟ್‌ ವಿಚಾರಣೆಯನ್ನು 2024ರ ಫೆಬ್ರವರಿ 6ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ ರಾಜ್ಯ ಅಡ್ವೋಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಸೂಕ್ತ ಸಮಯವಕಾಶ ಕಲ್ಪಿಸಿದರೆ ಆಯೋಗ ವಿಚಾರಣೆ ನಡೆಸಲಿದೆ. ಗುತ್ತಿಗೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಆರೋಪಗಳ ಕುರಿತು ಸಮಗ್ರ ತನಿಖೆಗಾಗಿ ಎಸ್‌ಐಟಿಯ ಶೋಧನೆಗಳನ್ನು ಸಹ ಆಯೋಗಕ್ಕೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು.

ಈ ವಾದ ಪರಿಗಣಿಸಿದ ಪೀಠವು ಏಕವ್ಯಕ್ತಿ ಆಯೋಗಕ್ಕೆ ವಿಚಾರಣಾ ವರದಿ ಸಲ್ಲಿಸಲು 45 ದಿನಗಳ ಕಾಲಾವಕಾಶ ನೀಡಿತು.

Also Read
ಬಿಜೆಪಿ ಆಡಳಿತದಲ್ಲಿ ಬಿಬಿಎಂಪಿ ಕಾಮಗಾರಿ ತನಿಖೆಗೆ ವಿಶೇಷ ತನಿಖಾ ಘಟಕ ರಚನೆ: ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

ಇದಲ್ಲದೇ, ಗುತ್ತಿಗೆದಾರಿಗೆ ಹಣ ಪಾವತಿ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಡ್ವೋಕೇಟ್‌ ಜನರಲ್‌ ಅವರು ಯಾವುದೇ ಅಕ್ರಮಗಳ  ಆರೋಪ ಹೊಂದಿರದ ಗುತ್ತಿಗೆದಾರರಿಗೆ ಅವರು ಕ್ಲೇಮು ಮಾಡಿದ ಹಣದ ಪೈಕಿ ಶೇ.75ರಷ್ಟು ಹಿರಿತನದ ಆಧಾರದ ಮೇಲೆ ಪಾವತಿಸಲಾಗುತ್ತದೆ. ಆರೋಪ ಹೊತ್ತಿರುವ ಗುತ್ತಿಗೆದಾರಿಗೆ ಶೇ.50ರಷ್ಟು ಮಾತ್ರ ಪಾವತಿಸಲಾಗುತ್ತದೆ. ಈ ಕುರಿತ ಸರ್ಕಾರದ ಆದೇಶಗಳು ಹೈಕೋರ್ಟ್‌ ಅಥವಾ ಏಕವ್ಯಕ್ತಿ ಆಯೋಗದ ಮುಂದಿರುವ ಪ್ರಕ್ರಿಯೆಗಳಿಗೆ ಬದ್ಧವಾಗಿರುತ್ತವೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 2019ರಿಂದ 2023ರ ಮೇ ತಿಂಗಳ ಅವಧಿಯಲ್ಲಿ 15ನೇ ಹಣಕಾಸು ಆಯೋಗದ ಅನುದಾನ, ನಗರೋತ್ಥಾನ ಅನುದಾನ ಮತ್ತು ಬಿಬಿಎಂಪಿ ಅನುದಾನಗಳ ಅಡಿಯಲ್ಲಿ ಕೈಗೊಂಡಿದ್ದ ಹಲವು ಕಾಮಗಾರಿಗಳಲ್ಲ ನಡೆದಿರುವ ಅಕ್ರಮಗಳ ತನಿಖೆಗೆ ನಾಲ್ಕು ಪ್ರತ್ಯೇಕ ಎಸ್‌ಐಟಿಗಳನ್ನು ರಚನೆ ಮಾಡಿ 2023ರ ಆಗಸ್ಟ್‌ 5ರಂದು ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಈ ಆದೇಶಗಳನ್ನು ಪ್ರಶ್ನಿಸಿ ಇದೇ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಗಳನ್ನು 2023ರ ಡಿಸೆಂಬರ್‌ 7ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠವು ಎಸ್‌ಐಟಿಗಳ ತನಿಖೆಗೆ ತಡೆಯಾಜ್ಞೆ ನೀಡಿದೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 19ಕ್ಕೆ ನಿಗದಿಪಡಿಸಿದೆ.

Related Stories

No stories found.
Kannada Bar & Bench
kannada.barandbench.com