ಪ್ರಧಾನಿ ನರೇಂದ್ರ ಮೋದಿಯನ್ನು ಶಿವಲಿಂಗದ ಮೇಲಿನ ಚೇಳಿಗೆ ಹೋಲಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧದ ಮಾನಹಾನಿ ಮೊಕದ್ದಮೆಯನ್ನು ಮುಕ್ತಾಯಗೊಳಿಸುವಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ರಾಜೀವ್ ಬಬ್ಬರ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿ ಹೇಳಿದೆ [ಶಶಿ ತರೂರ್ ವಿರುದ್ಧ ದೆಹಲಿ ರಾಜ್ಯ ಮತ್ತು ಇನ್ನೊಬ್ಬರು].
ಸಾರ್ವಜನಿಕ ಜೀವನದಲ್ಲಿ ಜನರು ಇಂತಹ ಹೇಳಿಕೆಗಳ ಬಗ್ಗೆ ಏಕಿಷ್ಟು ಸೂಕ್ಷ್ಮವಾಗಿ ವರ್ತಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಕೇಳಿದೆ.
"ಇವೆಲ್ಲವನ್ನೂ ಅಂತ್ಯಗೊಳಿಸೋಣ. ಇದೆಲ್ಲದರ ಬಗ್ಗೆ ಏಕಿಷ್ಟು ಸೂಕ್ಷ್ಮವಾಗಿ ವರ್ತಿಸಬೇಕು? ಈ ವಿಚಾರದಲ್ಲಿ, ಆಡಳಿತಗಾರರು ಮತ್ತು ನ್ಯಾಯಾಧೀಶರು ಒಂದೇ ಗುಂಪಿನಲ್ಲಿ ಬರುತ್ತಾರೆ. ಇಬ್ಬರೂ ದಪ್ಪ ಚರ್ಮವನ್ನು ಹೊಂದಿರುತ್ತಾರೆ" ಎಂದು ಪೀಠವು ಸಾರ್ವಜನಿಕ ಜೀವನದಲ್ಲಿ ಟೀಕೆಗಳಿಗೆ ದಪ್ಪ ಚರ್ಮ ಹೊಂದಿರಬೇಕಾದ ಅಗತ್ಯತೆಯ ಬಗ್ಗೆ ತಿಳಿ ಹೇಳಿತು.
ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ತರೂರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು. ಪ್ರತಿವಾದಿಗಳ ಪರ ವಕೀಲರ ಕೋರಿಕೆಯ ಮೇರೆಗೆ ನ್ಯಾಯಾಲಯವು ಅಂತಿಮವಾಗಿ ಪ್ರಕರಣವನ್ನು ಮುಂದೂಡಿತು.
ಕಾಂಗ್ರೆಸ್ ನಾಯಕ ತರೂರ್ ಹೇಳಿಕೆ ವಿರುದ್ಧ ಬಿಜೆಪಿಯ ಮುಖಂಡ ಬಬ್ಬರ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯವು ತರೂರ್‌ಗೆ ಸಮನ್ಸ್ ಜಾರಿ ಮಾಡಿತ್ತು.
ತರೂರ್ ಅವರು ನವೆಂಬರ್ 2018 ರಲ್ಲಿ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಪ್ರಧಾನಿ ಮೋದಿಯವರನ್ನು ಶಿವಲಿಂಗದ ಮೇಲೆ ಕುಳಿತಿರುವ ಚೇಳಿನಂತೆ ಎಂದು ಟೀಕಿಸಿದ್ದರು.
ನ್ಯಾಯಾಲಯದಲ್ಲಿ ತರೂರ್ ಅವರು ಇದು ತಮ್ಮ ಮೂಲ ಹೇಳಿಕೆಯಲ್ಲ. ಇದು ಗೋರ್ಧನ್ ಜಡಾಫಿಯಾ ಎಂಬ ಮತ್ತೊಬ್ಬ ವ್ಯಕ್ತಿಯ (ಗುಜರಾತ್‌ನ ಬಿಜೆಪಿ ಮುಖಂಡ) ಹೇಳಿಕೆಯಾಗಿದ್ದು, ಈ ಹೇಳಿಕೆ ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕ ವಲಯದಲ್ಲಿದೆ ಎಂದು ಸಮರ್ಥಿಸಿಕೊಂಡಿದ್ದರು.
ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸುವಂತೆ ತರೂರ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಪ್ರಕರಣವನ್ನು ರದ್ದುಪಡಿಸಲು ಆಗಸ್ಟ್ 9 ರಂದು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ತರೂರ್ ಅವರ ಹೇಳಿಕೆಗಳು ಮೋದಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧ ಮಾನಹಾನಿ ಮಾಡುವಂತಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.
"ಹಾಲಿ ಪ್ರಧಾನಿ ವಿರುದ್ಧದ ಆರೋಪಗಳು ತಿರಸ್ಕಾರಾರ್ಹವೂ, ಖಂಡನೀಯವೂ ಆಗಿದೆ" ಎಂಧಿದ್ದ ನ್ಯಾಯಾಲಯವು, ಇದು ಪಕ್ಷ, ಅದರ ಸದಸ್ಯರು ಮತ್ತು ಅದರ ಕಾರ್ಯಕಾರಿಣಿಗಳ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರುತ್ತವೆ ಎಂದಿತ್ತು.
ಪ್ರಕರಣದ ರದ್ದು ಕೋರಿ ತರೂರ್ ನಂತರ ವಕೀಲ ಅಭಿಷೇಕ್ ಜೆಬರಾಜ್ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.