ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೇಳಿಗೆ ಹೋಲಿಸಿದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ದಾಖಲಿಸಲಾದ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡೆಹಿಡಿದಿದೆ [ಶಶಿ ತರೂರ್ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ತರೂರ್ ಅವರ ಹೇಳಿಕೆ ಅವರೇ ನೀಡಿದ ಮೂಲ ಹೇಳಿಕೆಯಲ್ಲ ಬದಲಿಗೆ ಆದರೆ 2012ರಲ್ಲಿ ಕಾರವಾನ್ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನದಲ್ಲಿ ಹೇಳಿದ್ದನ್ನು ಅವರು ಪ್ರಸ್ತಾಪಿಸಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಆರ್ ಮಹದೇವನ್ ಅವರಿದ್ದ ಪೀಠ ತಿಳಿಸಿತು.
ಅಲ್ಲದೆ ತರೂರ್ ಹೇಳಿಕೆ ಒಂದು ರೂಪಕದಂತೆ ತೋರುತ್ತಿದ್ದು ಪ್ರಧಾನಿ ಮೋದಿ ಅವರ ಅಜೇಯತೆಯನ್ನು ಸೂಚಿಸುತ್ತದೆ. ಹೀಗಿರುವಾಗ ತರೂರ್ ಹೇಳಿಕೆಗೆ ಯಾಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ ಎಂಬುದು ಅಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿದೆ.
"2012ರಲ್ಲಿ, ಇದು ಮಾನಹಾನಿಯಾಗಿರಲಿಲ್ಲ. ಇದೊಂದು ರೂಪಕ. ನಾನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಇದು ಉಲ್ಲೇಖಿತ ವ್ಯಕ್ತಿಯ (ಮೋದಿ) ಅಜೇಯತೆಯನ್ನು ಸೂಚಿಸುತ್ತದೆ," ಎಂದು ಪೀಠವು ಹೇಳಿತು.
ಈ ಹಿನ್ನೆಲೆಯಲ್ಲಿ ದೂರು ನೀಡಿದ್ದ ಬಿಜೆಪಿ ನಾಯಕ ರಾಜೀವ್ ಬಬ್ಬರ್ ಹಾಗೂ ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ ತರೂರ್ ವಿರುದ್ಧದ ಪ್ರಸಕ್ತ ದೂರಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ತಡೆ ನೀಡಿತು.
ಈ ಬಗೆಯ ದಾವೆಗಳನ್ನೆಲ್ಲಾ ಪುರಸ್ಕರಿಸುತ್ತಾ ಹೋದರೆ ನ್ಯಾಯಾಲಯಗಳು ಮೊಕದ್ದಮೆಗಳಿಂದ ಮುಳುಗಿಹೋಗುತ್ತದೆ ಎಂದು ನ್ಯಾಯಾಲಯ ಇದೇ ವೇಳೆ ನುಡಿಯಿತು.
ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ಮಾಡಿದ್ದ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ತರೂರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
2018ರ ನವೆಂಬರ್‌ನಲ್ಲಿ ನಡೆದ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಕಾಂಗ್ರೆಸ್ ನಾಯಕ ಈ ಹೇಳಿಕೆ ನೀಡಿದ್ದರು.‘ಶ್ರೀ ಮೋದಿ ಅವರು ಶಿವಲಿಂಗದ ಮೇಲೆ ಕುಳಿತಿರುವ ಚೇಳು’ ಎಂದು ಅವರು ಬಣ್ಣಿಸಿದ್ದರು.