Yasin Malik
Yasin Malik 
ಸುದ್ದಿಗಳು

ಯಾಸಿನ್ ಮಲಿಕ್‌ಗೆ ಎನ್ಐಎ ವಿಶೇಷ ನ್ಯಾಯಾಲಯ ಮರಣ ದಂಡನೆ ವಿಧಿಸಲಿಲ್ಲ ಏಕೆ?

Bar & Bench

ಭಯೋತ್ಪಾದನೆಗೆ ಹಣದ ನೆರವು ನೀಡಿದ ಆರೋಪದಡಿ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪರ್ವೀನ್ ಸಿಂಗ್ ನಿನ್ನೆ ಜೀವಾವಧಿ ಶಿಕೆ ವಿಧಿಸಿದರು.

ಐಪಿಸಿ ಸೆಕ್ಷನ್‌ 121ರ ಅಡಿ ದೇಶದ ವಿರುದ್ಧ ಯುದ್ಧ ಸಾರುವುದಕ್ಕೆ ಸಂಬಂಧಿಸಿದಂತೆ ಗರಿಷ್ಠ ಮರಣದಂಡನೆ ಶಿಕ್ಷೆಗೆ ಗುರಿಯಾಗಬಹುದಾದ ಅಪರಾಧಗಳಲ್ಲಿ ಯಾಸಿನ್‌ ತಪ್ಪೊಪ್ಪಿಕೊಂಡಿದ್ದರು. ಆದರೂ ಪ್ರಸ್ತುತ ಪ್ರಕರಣದಲ್ಲಿ ಮರಣದಂಡನೆ ವಿಧಿಸುವುದನ್ನು ಸಮರ್ಥಿಸಲಾಗದು ಎಂದು ನ್ಯಾಯಾಧೀಶರು ತೀರ್ಪು ನೀಡಿದರು.

ಶಿಕ್ಷೆ ಪ್ರತಿಬಂಧಕವಾಗಿ ಕೆಲಸ ಮಾಡಬೇಕು, ಸುಧಾರಣೆಗೆ ಯಾವುದೇ ಅವಕಾಶ ಇಲ್ಲದ ಯಾಸಿನ್‌ಗೆ ಶಿಕ್ಷೆಯನ್ನು ಕಡಿಮೆಗೊಳಿಸುವ ಯಾವುದೇ ಸನ್ನಿವೇಶಗಳಿಲ್ಲ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೀಲ್ ಕಮಲ್ ಎನ್‌ಐಎ ಪರ ವಾದ ಮಂಡಿಸಿದರು.

ಆದರೆ ಮಲಿಕ್‌ ಪರ ಹಾಜರಾದ ಪ್ರಕರಣದ ಅಮಿಕಸ್‌ ಕ್ಯೂರಿ ಅಖಂಡ್‌ ಪ್ರತಾಪ್‌ ಸಿಂಗ್‌ “ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡ ನಂತರ ಪ್ರತಿಬಂಧಕ ಅಥವಾ ಪ್ರತೀಕಾರ ಶಿಕ್ಷೆ ವಿಧಿಸಬಾರದು. ಯಾಸಿನ್‌ 1994ರಿಂದ ಹಿಂಸಾಚಾರ ನಿಲ್ಲಿಸಿದ್ದು ರಾಜಕೀಯ ವಲಯದಲ್ಲಿ ಭಾರತೀಯ ನಾಯಕರೊಂದಿಗೆ ಗುರುತಿಸಿಕೊಂಡಿದ್ದಾರೆ. 1994ರಿಂದ ಮಹಾತ್ಮ ಗಾಂಧಿಯವರ ಶಾಂತಿಯುತ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ವಿವರಿಸಿದರು.

ವಾದ ಆಲಿಸಿದ ನ್ಯಾಯಾಲಯ”ಅಪರಾಧದಡಿ ಮರಣದಂಡನೆಯಂತಹ ಶಿಕ್ಷೆ ವಿಧಿಸಬಹುದು ಎಂದು ನಿಯಮ ಇದ್ದ ಮಾತ್ರಕ್ಕೆ ಅದನ್ನು ಸಾಮಾನ್ಯ ಪ್ರಕರಣದಲ್ಲಿ ಅಥವಾ ನಿಯಮಾನುಸಾರ ಅಪರಾಧಿಗೆ ವಿಧಿಸಲಾಗುವುದಿಲ್ಲ ಎಂಬುದು ಈಗಾಗಲೇ ಇತ್ಯರ್ಥವಾಗಿರುವ ಸಂಗತಿ ಎಂದು ಹೇಳಿತು. ಬಚನ್‌ ಸಿಂಗ್‌ ಮತ್ತು ಪಂಜಾಬ್‌ ಸರ್ಕಾರ ಹಾಗೂ ಮಚ್ಚಿ ಸಿಂಗ್‌ ಮತ್ತು ಪಂಜಾಬ್‌ ಸರ್ಕಾರ ನಡುವಣ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಆಧರಿಸಿ ಪ್ರಸ್ತುತ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದಿತು.

“ನ್ಯಾಯಾಲಯ ನೀಡಿರುವ ತೀರ್ಪುಗಳ ಒಟ್ಟು ಫಲಿತಾಂಶ ಎಂದರೆ ಅಪರಾಧ ತನ್ನ ಸ್ವರೂಪದಿಂದ ಸಮಾಜದ ಸಾಮೂಹಿಕ ಪ್ರಜ್ಞೆಗೆ ಆಘಾತ ತಂದ ಮತ್ತು ಎಣೆಯಿಲ್ಲದ ಕ್ರೌರ್ಯವನ್ನು ಭೀಕರ ರೀತಿಯಲ್ಲಿ ಎಸಗಿದ ಪ್ರಕರಣಗಳಲ್ಲಿ ಮಾತ್ರವೇ ಮರಣದಂಡನೆ ವಿಧಿಸಬಹುದು” ಎಂದು ನ್ಯಾಯಾಲಯ ಹೇಳಿದೆ.

ಮರಣದಂಡನೆ ವಿಧಿಸುವ ಮುನ್ನ ಪಾಲಿಸಬೇಕಾದ ಸುಪ್ರೀಂ ಕೋರ್ಟ್‌ ಮಾನದಂಡಗಳ ಬಗ್ಗೆ ಚರ್ಚಿಸಿದ ನ್ಯಾಯಾಧೀಶರು ಪ್ರಸ್ತುತ ಪ್ರಕರಣ ʼಅಪರೂಪದಲ್ಲೇ ಅಪರೂಪʼ ವರ್ಗಕ್ಕೆ ಬರುವುದಿಲ್ಲ ಎಂದರು.

ಕಾಶ್ಮೀರಿ ಪಂಡಿತರ ನರಮೇಧ ಮತ್ತು ಅವರ ಪಲಾಯನಕ್ಕೆ ಅಪರಾಧಿಯೇ ಕಾರಣ ಎಂಬುದನ್ನು ಶಿಕ್ಷೆ ನೀಡುವಾಗ ನ್ಯಾಯಾಲಯ ಪರಿಗಣಿಸಬೇಕು ಎಂಬ ಎನ್‌ಐಎ ಪರ ವಕೀಲರು ಮಂಡಿಸಿದ ವಾದವನ್ನು ನಿರಾಕರಿಸಿದ ನ್ಯಾಯಾಲಯ ಈ ಪ್ರಕರಣದಲ್ಲಿ ಆ ವಿಚಾರವಾಗಿ ವ್ಯವಹರಿಸುತಿಲ್ಲ. ಹೀಗಾಗಿ ಎನ್‌ಐಎ ಬೇಡಿಕೆಯಂತೆ ಮರಣದಂಡನೆ ವಿಧಿಸಲಾಗದು ಎಂದಿತು.

ಭಯೋತ್ಪಾದನೆಗೆ ಹಣದ ನೆರವು ನೀಡಿದ ಕುರಿತಂತೆ ನ್ಯಾಯಾಲಯ ಹಣಕಾಸು ನೆರವು ಒದಗಿಸುವುದು ಉಗ್ರ ಚಟುವಟಿಕೆಗಳಿಗೆ ಬೆನ್ನೆಲುಬಾದಂತೆ. ಅದರ ಗಂಭೀರ ಸ್ವರೂಪವನ್ನು ಗುರುತಿಸುವ ಸಮಯ ಈಗ ಬಂದಿದೆ ಎಂದಿತು. ಪ್ರಶ್ನೆಯಲ್ಲಿರುವ ಅಪರಾಧಗಳು ಭಾರತೀಯ ಕಲ್ಪನೆಯ ಹೃದಯವನ್ನು ಒಡೆಯುವ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಉದ್ದೇಶ ಹೊಂದಿವೆ ಎನ್ನುವ ಅಂಶವನ್ನು ನ್ಯಾಯಾಧೀಶರು ಗಮನಿಸಿದರು.

ಅಲ್ಲದೆ 1994ಕ್ಕೂ ಮೊದಲು ಎಸಗಿದ ಅಪರಾಧಗಳಿಗೆ ಮಲಿಕ್‌ ಯಾವುದೇ ವಿಷಾದ ವ್ಯಕ್ತಪಡಿಸಿಲ್ಲ ಮತ್ತು ತಾನು ಗಾಂಧಿವಾದಿ ಎಂಬ ಮಲಿಕ್‌ ಅವರ ವಾದವನ್ನು ಅಧಿಕೃತ ಪುರಾವೆಗಳು ಸುಳ್ಳಾಗಿಸುತ್ತವೆ. ಆದ್ದರಿಂದ ಪ್ರಕರಣದಲ್ಲಿ ಶಿಕ್ಷೆ ವಿಧಿಸಲು ಪ್ರಾಥಮಿಕ ಪರಿಗಣಿಸಿರುವ ಅಂಶ ಎಂದರೆ ಇದೇ ರೀತಿಯ ಮಾರ್ಗವನ್ನು ಅನುಸರಿಸಲು ಬಯಸುವವರಿಗೆ ಶಿಕ್ಷೆಯು ಪ್ರತಿಬಂಧಕವಾಗಿ ಕಾರ್ಯನಿರ್ವಹಿಸಬೇಕು ಎನ್ನುವುದಾಗಿದೆ ಎಂದು ಆದೇಶ ವಿವರಿಸಿದೆ. ಅಂತೆಯೇ ನ್ಯಾಯಾಲಯ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತು.