Madhya Pradesh High Court (Gwalior Bench) 
ಸುದ್ದಿಗಳು

ಮುಸ್ಲಿಂ ಕಾನೂನು ಹಾಗೂ ಡಿ ವಿ ಕಾಯಿದೆಯಡಿ ಮಾವನಿಂದ ವಿಧವೆ ಜೀವನಾಂಶ ಪಡೆಯುವಂತಿಲ್ಲ: ಮಧ್ಯಪ್ರದೇಶ ಹೈಕೋರ್ಟ್

ಕೌಟುಂಬಿಕ ಹಿಂಸಾಚಾರ ಕಾಯಿದೆಯಡಿ ಅಥವಾ ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾವ ಜೀವನಾಂಶ ನೀಡುವಂತೆ ವಿಧವೆ ಸೊಸೆ ಒತ್ತಾಯಿಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

Bar & Bench

ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆ-2005ರ ಅಡಿಯಾಗಲಿ ಅಥವಾ ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಜೀವನಾಂಶ ನೀಡುವಂತೆ ವಿಧವೆ ಸೊಸೆಯು ಮಾವನನ್ನು ಒತ್ತಾಯಿಸುವಂತಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಈಚೆಗೆ ಹೇಳಿದೆ [ಬಶೀರ್ ಖಾನ್ ಮತ್ತು ಇಶ್ರತ್ ಬಾನೋ ನಡುವಣ ಪ್ರಕರಣ].

ತನ್ನ ವಿಧವೆ ಸೊಸೆಗೆ ಮಾಸಿಕ ಜೀವನಾಂಶವಾಗಿ ₹ 3,000 ಪಾವತಿಸಲು ಸೂಚಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಹಿರ್ದೇಶ್ ಅವರು ಈ ಅವಲೋಕನ ಮಾಡಿದ್ದಾರೆ.

ವಿಧವೆ ಸೊಸೆ ತನ್ನ ಅತ್ತೆಯ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಗಂಡನ ಮರಣದ ನಂತರ, ತನ್ನ ದೈನಂದಿನ ಅಗತ್ಯಗಳನ್ನು ಪೂರೈಸಲು ₹ 40,000 ಮಾಸಿಕ ಜೀವನಾಂಶ ನೀಡುವಂತೆಯೂ ಕೋರಿ ಅರ್ಜಿ ಸಲ್ಲಿಸಿದ್ದರು.

 ಅರ್ಜಿದಾರರು ಈ ಮನವಿಗೆ ವಿರೋಧ ವ್ಯಕ್ತಪಡಿಸಿದರಾದರೂ ವಿಚಾರಣಾ ನ್ಯಾಯಾಲಯ ವಿಧವೆ ಸೊಸೆಗೆ ₹ 3,000 ಪಾವತಿಸುವಂತೆ ಆದೇಶಿಸಿತ್ತು. ಆದೇಶ ಪ್ರಶ್ನಿಸಿ ಮಾವ ಸಲ್ಲಿಸಿದ್ದ ಮೇಲ್ಮನವಿಯನ್ನು ಸೆಷನ್ಸ್‌ ನ್ಯಾಯಾಲಯ ಕೂಡ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಯಸ್ಸಾಗಿರುವ ತನಗೆ ಮಹಮದೀಯ ಕಾನೂನಿನ (ಮುಸ್ಲಿಂ ವೈಯಕ್ತಿಕ ಕಾನೂನು) ಪ್ರಕಾರ ವಿಧವೆ ಸೊಸೆಗೆ ಜೀವನಾಂಶ ನೀಡುವ ಜವಾಬ್ದಾರಿ ಹೊರಿಸಬಾರದು. ಕೌಟುಂಬಿಕ ಹಿಂಸಾಚಾರ ಕಾಯಿದೆಯಡಿಯೂ ಅಂತಹ ಯಾವುದೇ ಹೊಣೆಗಾರಿಕೆ ವಹಿಸುವಂತಿಲ್ಲ ಎಂದು ಶಬ್ನಮ್‌ ಪರ್ವೀನ್‌ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣದಲ್ಲಿ ಕಲ್ಕತ್ತಾ ಹೈಕೋರ್ಟ್‌ ನೀಡಿದ್ದ ತೀರ್ಪು ಹಾಗೂ ಉಳಿದ ತೀರ್ಪುಗಳನ್ನು ಅರ್ಜಿದಾರ ಮಾವ ಪ್ರಸ್ತಾಪಿಸಿದ್ದರು.

ತಮ್ಮ ಮಗ ಜೀವಂತ ಇದ್ದಾಗಲೇ ಸೊಸೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಆಕೆಗೆ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.

ವಾದದಲ್ಲಿ ಹುರುಳಿದೆ ಎಂದು ತಿಳಿಸಿದ ಹೈಕೋರ್ಟ್‌ ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ದೋಷವಿದೆ ಎಂದು ಅಭಿಪ್ರಾಯಪಟ್ಟಿತು. ಅಂತೆಯೇ ಮಾವ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿ ಜೀವನಾಂಶ ಆದೇಶ ರದ್ದುಗೊಳಿಸಿತು.