ಸುದ್ದಿಗಳು

ಪತಿ ಉದ್ಯೋಗ ಮಾಡುವ ಸ್ಥಳದಲ್ಲಿ ಆತನೊಂದಿಗೆ ಇರಬೇಕೆಂದು ಪತ್ನಿ ಒತ್ತಾಯಿಸುವುದು ಕ್ರೌರ್ಯವಲ್ಲ: ಛತ್ತೀಸ್‌ಗಢ ಹೈಕೋರ್ಟ್

ಹೀಗಾಗಿ ಪತ್ನಿ ಕ್ರೌರ್ಯ ಎಸಗಿದ್ದಾರೆ ಎಂಬ ಆಧಾರದಲ್ಲಿ ತನಗೆ ವಿಚ್ಛೇದನ ನೀಡಲು ನಿರಾಕರಿಸಿದ್ದ ಜಾಂಜ್‌ಗಿರ್‌ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿತು.

Bar & Bench

ಪತಿ ಉದ್ಯೋಗ ಮಾಡುವ ಸ್ಥಳದಲ್ಲಿ ಆತನೊಂದಿಗೆ ತಾನು ಇರಬೇಕೆಂದು ಪತ್ನಿ ಒತ್ತಾಯಿಸುವುದು ಹಿಂದೂ ವಿವಾಹ ಕಾಯಿದೆಯಡಿ ಕ್ರೌರ್ಯ ಅಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ವೈವಾಹಿಕ ಸಂಬಂಧಗಳಲ್ಲಿ ಒಬ್ಬರಿಗೊಬ್ಬರು ಪರಸ್ಪರ ಗೌರವದೊಂದಿಗೆ ವರ್ತಿಸುವುದು ಮತ್ತು ಸಾಂಗತ್ಯ ಅತ್ಯಗತ್ಯ ಎಂದು ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ದೀಪಕ್ ಕುಮಾರ್ ತಿವಾರಿ ಅವರ ವಿಭಾಗೀಯ ಪೀಠ ತಿಳಿಸಿದೆ.

ಯಾವುದೇ ಬಾಹ್ಯ ಕಾರಣ ಇಲ್ಲದೆ ಅಥವಾ ಅಧಿಕೃತ ಕಾರಣವಿಲ್ಲದೆ ಪತಿ ತಾನು ನಿಯೋಜನೆಗೊಂಡ ಸ್ಥಳದಲ್ಲಿ ಪತ್ನಿಯನ್ನು ಇರಲು ಆಸ್ಪದಕೊಡೆದೆ ಹೋದರೆ ಆಗ ಪತ್ನಿಯು ಪತಿಯೊಂದಿಗೆ ಇರಲು ಒತ್ತಾಯಿಸುವುದನ್ನು ಗಂಡನ ವಿರುದ್ಧದ ಕ್ರೌರ್ಯ ಎಂದು ಹೇಳಲಾಗುವುದಿಲ್ಲ ಎಂಬುದಾಗಿ ಪೀಠ ಅಭಿಪ್ರಾಯಪಟ್ಟಿತು.

ಹೀಗಾಗಿ ಪತ್ನಿ ಕ್ರೌರ್ಯ ಎಸಗಿದ್ದಾರೆ ಎಂಬ ಆಧಾರದಲ್ಲಿ ತನಗೆ ವಿಚ್ಛೇದನ ನೀಡಲು ನಿರಾಕರಿಸಿದ್ದ ಜಾಂಜ್‌ಗಿರ್‌ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿತು.

ದಂಪತಿ 2005ರಲ್ಲಿ ವಿವಾಹವಾಗಿದ್ದರು. ಆದರೆ ಕಾಲಕ್ರಮೇಣ ಭಿನ್ನಾಭಿಪ್ರಾಯಗಳು ಮೊಳೆತಿದ್ದವು. ಅತ್ತೆಯೊಂದಿಗೆ ವಾಸಿಸದೆ ತನ್ನೊಂದಿಗೆ ವಾಸಿಸಬೇಕು ಎಂದು ಪತ್ನಿ ಒತ್ತಾಯಿಸಿ ಆಗಾಗ ಜಗಳ ತೆಗೆಯುತ್ತಿದ್ದಳು. ಪತ್ನಿ ಸಕಾರಣವಿಲ್ಲದೆ ವೈವಾಹಿಕ ಗೃಹವನ್ನು ತೊರೆದಿದ್ದಾರೆ, ಮರಳುವಂತೆ ಮನವಿ ಮಾಡಿದ್ದರೂ ಆಕೆ ಒಪ್ಪಿರಲಿಲ್ಲ ಎಂಬುದು ಪತಿಯ ವಾದವಾಗಿತ್ತು.

ಇತ್ತ ತಾವು ಐದು ವರ್ಷ ಸುಖ ಸಂಸಾರ ನಡೆಸಿದ್ದಾಗಿ ಪತ್ನಿ ವಾದಿಸಿದ್ದರು. ಪತಿ ತಾನು ನಿಯೋಜನೆಗೊಂಡಿದ್ದ ಸ್ಥಳಕ್ಕೆ ಕರೆದೊಯ್ಯಲು ನಿರಾಕರಿಸಿದ್ದರು. ತನ್ನನ್ನು ನಿರ್ಲಕ್ಷಿಸಲು ಆರಂಭಿಸಿದ್ದರಿಂದ ತಾನು ವೈವಾಹಿಕ ಗೃಹ ತೊರೆದಿದ್ದಾಗಿ ಅವರು ಅಳಲು ತೋಡಿಕೊಂಡಿದ್ದರು.

ವಾದಗಳನ್ನು ಆಲಿಸಿದ ಪೀಠ, ಪತಿಯೇ ತನ್ನ ಪತ್ನಿಯನ್ನು ತಾನು ನಿಯುಕ್ತಿಗೊಂಡ ಸ್ಥಳಕ್ಕೆ ಕರೆದೊಯ್ಯಲು ನಿರಾಕರಿಸಿದ್ದಾನೆ . ಅರ್ಜಿದಾರೆಯನ್ನು ತನ್ನೊಂದಿಗೆ ಇರಿಸಿಕೊಳ್ಳದೇ ಇರಲು ಕಾರಣವೇನು ಎಂಬುದನ್ನು ಆತ ತಿಳಿಸಿಲ್ಲ ಎಂದಿತು. ಹೀಗಾಗಿ ಮೇಲ್ಮನವಿಯನ್ನು ವಜಾಗೊಳಿಸಿತಲ್ಲದೆ ಪತ್ನಿಗೆ ₹15 ಸಾವಿರ ಮಧ್ಯಂತರ ಜೀವನಾಂಶ ನೀಡುವಂತೆ ಪತಿಗೆ ಸೂಚಿಸಿತು.