Karnataka High Court 
ಸುದ್ದಿಗಳು

ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡರೆ ಪತ್ನಿಯನ್ನು ಹೊಣೆ ಮಾಡಲಾಗದು; ಹೈಕೋರ್ಟ್‌

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ದೋಷಿ ಎಂದು ಘೋಷಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಬದಿಗೆ ಸರಿಸಿದೆ.

Bar & Bench

ಪತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪತ್ನಿ ಮತ್ತು ಆಕೆಯ ಪ್ರಿಯತಮನನ್ನು ದೋಷಿಗಳು ಎಂದು ಘೋಷಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಬದಿಗೆ ಸರಿಸಿದೆ.

ಪತ್ನಿಯು ಸಹ ಆರೋಪಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಆಕೆಯ ಪತಿಯು ಆತ್ಮಹತ್ಯೆ ಮಾಡಿಕೊಂಡರೆ ಅದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಐಪಿಸಿ ಸೆಕ್ಷನ್‌ 306ರ ಅಡಿ ಅವರನ್ನು ದೋಷಿಗಳು ಎಂದು ಘೋಷಿಸಲು ಪ್ರಬಲ ಆಧಾರವಾಗದು ಎಂದು ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ಅವರ ಏಕಸದಸ್ಯ ಪೀಠ ಹೇಳಿದೆ.

Justice Shivashankar Amarannavar

ಪತಿಯು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕೆಲವು ದಿನ ಮುಂಚಿತವಾಗಿ ಯಾವುದೇ ಪ್ರಚೋದನೆಯಿಲ್ಲದೇ ಹೋಗಿ ಸಾಯಿ ಎಂದು ಹೇಳುವುದು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಮನಾಗದು ಎಂದು ಪೀಠ ಹೇಳಿದೆ.

“1 ಮತ್ತು 2ನೇ ಆರೋಪಿಯು ಪತಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಉದ್ದೇಶ ಹೊಂದಿರಲಿಲ್ಲ. ಪತಿ ಹೋಗಿ ಸತ್ತರೆ ಆರೋಪಿಗಳು ಸಂತೋಷದಿಂದ ಜೀವನ ನಡೆಸಬಹುದು ಎಂದು ಹೇಳಿದ ಮಾತ್ರಕ್ಕೆ ಅದು ಪ್ರಚೋದನೆಯಾಗದು. ಪತಿಯು ಸೂಕ್ಷ್ಮ ಸಂವೇದನೆಯ ವ್ಯಕ್ತಿಯಂತೆ ತೋರುತ್ತಿದ್ದು ತನ್ನ ಪತ್ನಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬುದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ದಾಖಲೆಯಲ್ಲಿರುವ ಸಾಕ್ಷ್ಯಗಳು ಆರೋಪಿಗಳು ಪತಿಯನ್ನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಾರೆ ಎಂಬುದನ್ನು ರುಜುವಾತುಪಡಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ ಅರ್ಜಿದಾರ/ಆರೋಪಿಗಳಾದ ಪ್ರೇಮ ಮತ್ತು ಬಸವಲಿಂಗೇಗೌಡ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ.

ಪ್ರೇಮ ಮತ್ತು ಬಸವಲಿಂಗೇಗೌಡ ಪರವಾಗಿ ವಕೀಲ ಎ ಎನ್‌ ರಾಧಾಕೃಷ್ಣ ವಾದಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ವಕೀಲ ಬಿ ಲಕ್ಷ್ಮಣ ವಾದಿಸಿದ್ದರು.