ಗಂಡನ ಅನುಮತಿಯಿಲ್ಲದೆ ಹೆಂಡತಿ ತವರಿಗೆ ತೆರಳುವುದು ಕ್ರೌರ್ಯ ಅಥವಾ ಪರಿತ್ಯಾಗವಲ್ಲ ಎಂದು ಅಲಾಹಾಬಾದ್ ಹೈಕೋರ್ಟ್ ಹೇಳಿದೆ [ಮೋಹಿತ್ ಪ್ರೀತ್ ಕಪೂರ್ ಮತ್ತು ಸುಮಿತ್ ಕಪೂರ್ ನಡುವಣ ಪ್ರಕರಣ].
ಹೀಗಾಗಿ ಕ್ರೌರ್ಯ ಅಥವಾ ಪರಿತ್ಯಾಗ ನಡೆದಿದೆ ಎಂಬ ಆಧಾರದಲ್ಲಿ ಪತ್ನಿಗೆ ವಿಚ್ಛೇದನ ನೀಡಲು ಪತಿಗೆ ಅವಕಾಶ ಕಲ್ಪಿಸಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಸುನೀತಾ ಅಗರ್ವಾಲ್ ಮತ್ತು ಕ್ರಿಶನ್ ಪಹಲ್ ಅವರಿದ್ದ ಪೀಠ ಬದಿಗೆ ಸರಿಸಿತು.
“ಪ್ರತಿವಾದಿಯ ಅನುಮತಿ ಪಡೆಯದೆಯೂ ಅರ್ಜಿದಾರರು ತನ್ನ ತವರಿಗೆ ತೆರಳಿದರೆ ಆ ಕೃತ್ಯ ಯಾವುದೇ ರೀತಿಯಲ್ಲಿ ಕ್ರೌರ್ಯಕ್ಕೆ ಸಮನಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ಗಂಡನ ಮನೆ ತೊರೆದು ಹೋದ ಹೆಂಡತಿ ಮರಳಿ ಬರಲಿಲ್ಲ. ಹೀಗಾಗಿ ವಿಚ್ಛೇದನ ನೀಡುವಂತೆ ಪತಿ ಅರ್ಜಿ ಸಲ್ಲಿಸಿದ್ದರು. ಕಾರಣವೇ ಇಲ್ಲದೆ ಆಕೆ ತನ್ನನ್ನು ತೊರೆದಿದ್ದಾರೆ ಎಂದು ಪತಿ ವಾದಿಸಿದ್ದರು. ಅಲ್ಲದೆ ಗೃಹಕೃತ್ಯದಲ್ಲಿ ತೊಡಗಿಕೊಳ್ಳುತ್ತಿರಲಿಲ್ಲ, ಕುಟುಂಬದವರೊಂದಿಗೆ ಆಕೆ ಅನುಚಿತವಾಗಿ ವರ್ತಿಸುತ್ತಿದ್ದರು ತವರಿಗೆ ಹೇಳದೇ ಕೇಳದೇ ಹೋಗುತ್ತಾರೆ ಎನ್ನುವುದು ಗಂಡ ಮಾಡಿದ್ದ ಇತರೆ ಆರೋಪಗಳಾಗಿದ್ದವು.
ಗಂಡನ ಮನೆಯಿಂದ ಪತ್ನಿಯ ತವರುಮನೆ ಕೇವಲ 400 ಮೀಟರ್ ಅಂತರದಲ್ಲಿರುವುದನ್ನು ಗಮನಿಸಿದ ನ್ಯಾಯಾಲಯ “ಇಲ್ಲಿ ಉದ್ದೇಶಪೂರ್ವಕವಾಗಿ ಹೆಂಡತಿ ಗಂಡನ ಸಂಬಂಧವನ್ನು ಶಾಶ್ವತವಾಗಿ ಕಡಿತಗೊಳಿಸಿಕೊಳ್ಳುವ ಸಲುವಾಗಿ ಮನೆ ತೊರೆದಿದ್ದಾರೆ ಎನ್ನಲಾಗದು. ಅಲ್ಲದೆ ಗಂಡ ಮತ್ತು ಅವರ ಕಡೆಯವರಿಗೆ ಹೇಳದೇ ಹೆಂಡತಿ ತವರು ಮನೆಗೆ ಹೋಗಿ ಬರುತ್ತಿದ್ದುದನ್ನು ಅಪರಾಧ ಎಂದು ಕರೆಯಲಾಗದು” ಎಂದು ಅಭಿಪ್ರಾಯಪಟ್ಟಿತು.
ಈ ಅವಲೋಕನಗಳೊಂದಿಗೆ ವಿಚ್ಛೇದನ ತೀರ್ಪು ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಮೇಲ್ಮನವಿ ಸಲ್ಲಿಸಿದ್ದ ಪತ್ನಿಯ ಮತ್ತು ಆಕೆಯ ಮಗಳ ಜೀವನಾಂಶ ಸಮಸ್ಯೆಯನ್ನು ಇತ್ಯರ್ಥಪಡಿಸಿತು. ಕೌಟುಂಬಿಕ ನ್ಯಾಯಾಲಯ ಮೇಲ್ಮನವಿದಾರರಿಗೆ ಮಾಸಿಕ ಜೀವನಾಂಶವಾಗಿ ₹ 5,000 ಮತ್ತು ಅಪ್ರಾಪ್ತ ಮಗಳಿಗೆ ₹ 2,000 ನೀಡಿತ್ತು ಆದರೆ ಮಗಳ ಜೀವನಾಂಶವನ್ನು ಹೈಕೋರ್ಟ್ ಮಾಸಿಕ ₹ 30,000ಕ್ಕೆ ಹೆಚ್ಚಿಸಿತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: