ತಲಾಖ್ ಮೂಲಕ ವಿಚ್ಛೇದನ ನೀಡುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ಷರಿಯಾ ಕಾನೂನಿನ ಅಡಿಯಲ್ಲಿ ಮಾನ್ಯತೆ ಪಡೆದ ತಲಾಖ್-ಎ-ಹಸನ್ ಪದ್ಧತಿಯಿಂದ ವಿಚ್ಛೇದನ ಪಡೆದ ಪತ್ರಕರ್ತೆಯೊಬ್ಬರು ಈ ಅರ್ಜಿ ಸಲ್ಲಿಸಿದ್ದಾರೆ.
ತಲಾಖ್ ಮೂಲಕ ವಿಚ್ಛೇದನ ನೀಡುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ಮುಸ್ಲಿಂ ಪುರುಷನು ತಿಂಗಳಿಗೊಮ್ಮೆ ತಲಾಖ್ ಎಂಬ ಪದವನ್ನು ಮೂರು ತಿಂಗಳವರೆಗೆ ಉಚ್ಚರಿಸುವ ಮೂಲಕ ತನ್ನ ಹೆಂಡತಿಗೆ ವಿಚ್ಛೇದನ ನೀಡುವ ತಲಾಖ್-ಎ-ಹಸನ್ ಪದ್ಧತಿಯನ್ನು ಪ್ರಶ್ನಿಸಿ ಮಹಿಳಾ ಪತ್ರಕರ್ತೆಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. [ಬೆನಜೀರ್ ಹೀನಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ತಲಾಖ್‌ ಪದ್ದತಿ ಅತಾರ್ಕಿಕ, ಅವಾಸ್ತವಿಕ ಹಾಗೂ ಸಂವಿಧಾನದ 14, 15, 21 ಮತ್ತು 25ನೇ ವಿಧಿಗಳ ಉಲ್ಲಂಘನೆಯಾಗಿದ್ದು ಇದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಪತ್ರಕರ್ತೆ ಬೆನಜೀರ್ ಹೀನಾ ಅವರು ಅಡ್ವೊಕೇಟ್-ಆನ್-ರೆಕಾರ್ಡ್ ಅಶ್ವನಿ ಕುಮಾರ್ ದುಬೆ ಮೂಲಕ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಕೋರಿದ್ದಾರೆ.

Also Read
ತಲಾಖ್ ಅಸಾಂವಿಧಾನಿಕ ಎಂದು ಘೋಷಿಸಲು ಕೋರಿದ ಅರ್ಜಿ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋದ ಮುಸ್ಲಿಂ ಮಹಿಳೆ

ಲಿಂಗ ಮತ್ತು ಧರ್ಮ ತಟಸ್ಥ ವಿಧಾನದ ಮೂಲಕ ವಿಚ್ಛೇದನ ಪ್ರಕ್ರಿಯೆ ನಡೆಯಬೇಕು ಎಂದು ಸಹ ಅರ್ಜಿ ತಿಳಿಸಿದೆ. ತಲಾಖ್‌ ಎಂಬುದು ಏಕಪಕ್ಷೀಯ ನ್ಯಾಯಾಂಗೇತರ ಸಂಗತಿ ಎಂದು ಬಣ್ಣಿಸಿರುವ ಅರ್ಜಿ ಮಾನವ ಹಕ್ಕುಗಳು ಮತ್ತು ಸಮಾನತೆಗೆ ಆಸ್ಪದ ಇಲ್ಲದ ಅದನ್ನು ನಿಷೇಧಿಸಲು ಇದು ಸಕಾಲ. ಇದು ಇಸ್ಲಾಂ ನಂಬಿಕೆಯ ಅಗತ್ಯ ಭಾಗವಲ್ಲ ಎಂದು ವಿವರಿಸಿದೆ.

ಅನೇಕ ಮುಸ್ಲಿಂ ದೇಶಗಳು ತಲಾಖ್‌ ಪದ್ದತಿ ನಿರ್ಬಂಧಿಸಿವೆ. ಭಾರತೀಯ ಸಮಾಜ ಅದರಲ್ಲಿಯೂ ಮುಸ್ಲಿಂ ಮಹಿಳೆಯರನ್ನು ಸಂಕಷ್ಟಕ್ಕೀಡುಮಾಡಲು ಇದು ದೇಶದಲ್ಲಿ ಇನ್ನೂ ಜಾರಿಯಲ್ಲಿದೆ. ಇದು ಸಮಾಜದ ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿದ ಅನೇಕ ಮಹಿಳೆಯರು ಮತ್ತು ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ದೂರಲಾಗಿದೆ.

ಅರ್ಜಿದಾರರ ಪತಿ ವಕೀಲರ ಮೂಲಕ ತಲಾಖ್-ಎ-ಹಸನ್ ನೋಟಿಸ್ ಕಳುಹಿಸಿ ಆಕೆಗೆ ವಿಚ್ಛೇದನ ನೀಡಿದ್ದರು. ಆಕೆಯ ಕುಟುಂಬವು ವರದಕ್ಷಿಣೆ ನೀಡಲು ನಿರಾಕರಿಸಿದ ಕಾರಣ ಅತ್ತೆ ಮನೆಯವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

Related Stories

No stories found.