Kashi Viswanath Temple and Gyanvapi Mosque 
ಸುದ್ದಿಗಳು

ಕಾರ್ಬನ್ ಡೇಟಿಂಗ್‌ನಿಂದ ಜ್ಞಾನವಾಪಿ ಮಸೀದಿಯಲ್ಲಿ ದೊರೆತ ವಸ್ತುವಿಗೆ ಹಾನಿಯಾಗುವುದೆ? ಅಲಾಹಾಬಾದ್ ಹೈಕೋರ್ಟ್ ಪ್ರಶ್ನೆ

ಶಿವಲಿಂಗ ಎಂದು ಕರೆಯುವ ವಸ್ತುವಿನ ವೈಜ್ಞಾನಿಕ ತನಿಖೆ ನಡೆಸಬೇಕೆಂದು ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾ. ಜೆ ಜೆ ಮುನೀರ್ ಈ ಆದೇಶ ನೀಡಿದ್ದರು.

Bar & Bench

ಜ್ಞಾನವಾಪಿ ಮಸೀದಿಯಲ್ಲಿ ದೊರೆತ ವಸ್ತುವಿನ ಕಾಲ ನಿರ್ಧರಿಸುವುದಕ್ಕೆ ಬಳಸುವ  ಕಾರ್ಬನ್‌ ಡೇಟಿಂಗ್‌, ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್), ಉತ್ಖನನ ಮತ್ತಿತರ ವಿಧಾನಗಳಿಂದ ಆ ವಸ್ತುವಿಗೆ ಹಾನಿಯಾಗುತ್ತದೆಯೇ ಎಂಬ ಕುರಿತು ಅಭಿಪ್ರಾಯ ನೀಡುವಂತೆ ಅಲಾಹಾಬಾದ್ ಹೈಕೋರ್ಟ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಹಾನಿರ್ದೇಶಕರಿಗೆ ಸೂಚಿಸಿದೆ.

ಶಿವಲಿಂಗ ಎಂದು ಕರೆಯುವ ವಸ್ತುವಿನ ವೈಜ್ಞಾನಿಕ ತನಿಖೆ ನಡೆಸಬೇಕೆಂದು ಕೋರಿದ್ದ ಮನವಿಯನ್ನು ತಿರಸ್ಕರಿಸಿ ಜಿಲ್ಲಾ ನ್ಯಾಯಾಧೀಶರು ಅಕ್ಟೋಬರ್ 14ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾ. ಜೆ ಜೆ ಮುನೀರ್ ಈ ಆದೇಶ ನೀಡಿದ್ದಾರೆ.

ದೊರೆತಿರುವ ವಸ್ತವಿನ ಕಾಲಮಾನದ ಪರೀಕ್ಷೆ ನಡೆಸಿದರೆ ಅದಕ್ಕೆ ಹಾನಿಯಾಗುತ್ತದೆಯೇ ಅಥವಾ ಸುರಕ್ಷಿತ ಪರೀಕ್ಷೆ ಸಾಧ್ಯವೇ ಎಂಬ ಕುರಿತು ಮುಂದಿನ ವಿಚಾರಣೆಯ ದಿನದ ಒಳಗಾಗಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಎಎಸ್‌ಐಗೆ ತಿಳಿಸಿದೆ.

ಹಿಂದೂ ದೇವಲಯವಾಗಿರುವ  ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವತೆಗಳಿದ್ದು ಆವರಣದೊಳಗೆ ಪೂಜೆ ಮಾಡುವ ಹಕ್ಕು ಕೋರಿ ಹಿಂದೂ ಭಕ್ತರು ಸಿವಿಲ್‌ ನ್ಯಾಯಾಲಯದ ಮೊರೆ ಹೋಗುವ ಮೂಲಕ ವ್ಯಾಜ್ಯ ಆರಂಭವಾಗಿತ್ತು. ನ್ಯಾಯಾಲಯದ ಆದೇಶದಂತೆ ಅಡ್ವೊಕೇಟ್‌ ಕಮಿಷನರ್‌ ಸಲ್ಲಿಸಿದ ವರದಿ ಆಧರಿಸಿ ಮಸೀದಿಯಲ್ಲಿ ಪತ್ತೆಯಾದ ವಸ್ತು ಶಿವಲಿಂಗ ಎಂದು ಹಿಂದೂ ಪಕ್ಷಕಾರರು ಹೇಳಿದರೆ ಅದು ಕೇವಲ ನೀರಿನ ಕಾರಂಜಿ ಎಂಬುದಾಗಿ ಮುಸ್ಲಿಂ ಕಕ್ಷಿದಾರರು ಪ್ರತಿಪಾದಿಸಿದ್ದರು.

ಈ ಮಧ್ಯೆ ಪ್ರಕರಣದ ಸೂಕ್ಷ್ಮತೆ ಗಮನಿಸಿ ಸಿವಿಲ್‌ ನ್ಯಾಯಾಲಯದ ಮುಂದಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿತು. ಜಿಲ್ಲಾ ನ್ಯಾಯಾಲಯ ಕಳೆದ ಸೆಪ್ಟೆಂಬರ್‌ನಲ್ಲಿ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ- 1991ರ ಅಡಿ ಮೊಕದ್ದಮೆಯನ್ನು ನಿರ್ಬಂಧಿಸಿಲ್ಲ ಎಂದಿತು.

ಆ ವಸ್ತು ಶಿವಲಿಂಗವೇ ಅಥವಾ ಕಾರಂಜಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿವಾದಿತ ವಸ್ತುವಿನ ಕಾರ್ಬನ್ ಡೇಟಿಂಗ್ ಕೋರಿ ನಾಲ್ವರು ಹಿಂದೂ ಪಕ್ಷಕಾರರು ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಜಿಲ್ಲಾ ನ್ಯಾಯಾಧೀಶ ಡಾ. ಎ ಕೆ.ವಿಶ್ವೇಶ ಅವರು ಅಕ್ಟೋಬರ್ 14 ರಂದು ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಪ್ರಸ್ತುತ ಮೇಲ್ಮನವಿ ಸಲ್ಲಿಸಲಾಗಿತ್ತು.