ಜ್ಞಾನವಾಪಿ ಪ್ರಕರಣ: ಶಿವಲಿಂಗದ ವೈಜ್ಞಾನಿಕ ವಿಶ್ಲೇಷಣೆ ಕೋರಿದ್ದ ಮನವಿ ತಿರಸ್ಕರಿಸಿದ ವಾರಾಣಸಿ ನ್ಯಾಯಾಲಯ

ಅಡ್ವೊಕೇಟ್ ಕಮಿಷನರ್ ನಡೆಸಿದ ಸಮೀಕ್ಷೆ ವೇಳೆ ಸ್ಥಳದಲ್ಲಿ ಪತ್ತೆಯಾದ ವಸ್ತು ಶಿವಲಿಂಗವಾಗಿದ್ದು, ವೈಜ್ಞಾನಿಕ ವಿಶ್ಲೇಷಣೆಯಿಂದ ಅದನ್ನು ಸಾಬೀತುಪಡಿಸಬಹುದು ಎಂದು ಹಿಂದೂ ಪಕ್ಷಕಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಜ್ಞಾನವಾಪಿ ಪ್ರಕರಣ: ಶಿವಲಿಂಗದ ವೈಜ್ಞಾನಿಕ ವಿಶ್ಲೇಷಣೆ ಕೋರಿದ್ದ ಮನವಿ ತಿರಸ್ಕರಿಸಿದ ವಾರಾಣಸಿ ನ್ಯಾಯಾಲಯ
A1
Published on

ಜ್ಞಾನವಾಪಿ ಮಸೀದಿ ಆವರಣದ ಸಮೀಕ್ಷೆ ವೇಳೆ ಪತ್ತೆಯಾದ ವಸ್ತು ಶಿವಲಿಂಗವೇ ಅಥವಾ ನೀರಿನ ಕಾರಂಜಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ವಿಶ್ಲೇಷಣೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶನ ನೀಡುವಂತೆ ಕೋರಿ 4 ಮಂದಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಮನವಿಯನ್ನು ವಾರಾಣಸಿ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ [ಶ್ರೀಮತಿ. ರಾಖಿ ಸಿಂಗ್ ಮತ್ತಿತರರು ಹಾಗೂ ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಜಿಲ್ಲಾ ನ್ಯಾಯಾಧೀಶ ಡಾ. ಎ ಕೆ ವಿಶ್ವೇಶ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಸ್ಥಳಕ್ಕೆ ಯಾರೂ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್‌ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ವೈಜ್ಞಾನಿಕ ವಿಶ್ಲೇಷಣೆಗೆ ಅವಕಾಶ ನೀಡುವಂತಿಲ್ಲ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.  

Also Read
[ಜ್ಞಾನವಾಪಿ ಪ್ರಕರಣ] ಶಿವಲಿಂಗದ ವೈಜ್ಞಾನಿಕ ಪರಿಶೀಲನೆ ಮನವಿ ಕುರಿತಾದ ಆದೇಶ ಮುಂದೂಡಿದ ವಾರಾಣಸಿ ನ್ಯಾಯಾಲಯ

ಜ್ಞಾನವಾಪಿ ಮಸೀದಿ ನಿರ್ವಹಣೆಯ ಹೊಣೆ ಹೊತ್ತಿರುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಹಿಂದೂ ಆರಾಧಕರು ಸಲ್ಲಿಸಿದ್ದ ಮನವಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಅಡ್ವೊಕೇಟ್‌ ಕಮಿಷನರ್ ಸಮೀಕ್ಷೆ ವೇಳೆ ಸ್ಥಳದಲ್ಲಿ ಪತ್ತೆಯಾದ ವಸ್ತುವು ಶಿವಲಿಂಗವಾಗಿದ್ದು, ಅನಾದಿ ಕಾಲದಿಂದಲೂ ವಿವಾದಿತ ಸ್ಥಳದಲ್ಲಿ ಅದು ಅಸ್ತಿತ್ವದಲ್ಲಿದೆ. ಈ ಹಿನ್ನೆಲೆಯಲ್ಲಿ ಆ ವಸ್ತುವಿನ ಸ್ವರೂಪ ಮತ್ತು ಅದು ರೂಪುಗೊಂಡ ಕಾಲವನ್ನು ಪತ್ತೆ ಹಚ್ಚುವಂತೆ ಎಎಸ್‌ಐಗೆ ನಿರ್ದೇಶಿಸುವ ಅಗತ್ಯವಿದೆ ಎಂದು ಹಿಂದೂ ಪಕ್ಷಕಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com