ಕೆಲ ಪೀಠಗಳು ವಿಚಾರಣೆ ನಡೆಸುತ್ತಿದ್ದ ಪ್ರಕರಣಗಳನ್ನು ಬೇರೆ ಪೀಠಗಳಿಗೆ ವರ್ಗಾಯಿಸಲಾಗುತ್ತಿದೆ ಎಂದು ಕಳೆದ ವಾರ ಕೆಲ ಹಿರಿಯ ವಕೀಲರು ದೂರಿದ ಬಳಿಕ ಚರ್ಚೆಗೆ ಗ್ರಾಸವಾಗಿದ್ದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಈ ಕುರಿತು ಪ್ರತಿಕ್ರಿಯೆ ನೀಡಿದೆ.
"ಪೀಠ ಮತ್ತು ನ್ಯಾಯಮೂರ್ತಿಗಳನ್ನು ಆಯ್ದುಕೊಳ್ಳುವ (Bench Hunting) ಯಾವುದೇ ಯತ್ನವನ್ನು ವಿಫಲಗೊಳಿಸಲಾಗುವುದು" ಎಂದಿರುವ ರಿಜಿಸ್ಟ್ರಿ, "ಸುಪ್ರೀಂ ಕೋರ್ಟ್ ಎಂದಿಗೂ ವಕೀಲರು ನಡೆಸುವ ನ್ಯಾಯಾಲಯವಾಗಲು ಬಿಡುವುದಿಲ್ಲ" ಎಂದು ಸ್ಪಷ್ಟಪಡಿಸಿದೆ.
ಹಿರಿಯ ವಕೀಲ ದುಶ್ಯಂತ್ ದವೆ ಅವರು ಡಿಸೆಂಬರ್ 6 ರಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರ ಬರೆದು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಯುತ್ತಿರುವ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಸುಪ್ರೀಂ ಕೋರ್ಟ್ ನಿಯಮಾವಳಿ ಮತ್ತು ನ್ಯಾಯಾಲಯ ನಡಾವಳಿ ಮತ್ತು ಕಾರ್ಯವಿಧಾನ ಕೈಪಿಡಿಯನ್ನು ಉಲ್ಲಂಘಿಸಿ ಕೆಲ ಪೀಠಗಳು ವಿಚಾರಣೆ ನಡೆಸುತ್ತಿದ್ದ ಪ್ರಕರಣಗಳನ್ನು ಬೇರೆ ಪೀಠಗಳಿಗೆ ವರ್ಗಾಯಿಸಲಾಗಿದೆ ಎಂದು ಪತ್ರದಲ್ಲಿ ದವೆ ದೂರಿದ್ದರು.
ನ್ಯಾಯಮೂರ್ತಿ ಅನಿರುದ್ಧ ಬೋಸ್ ನೇತೃತ್ವದ ನ್ಯಾಯಪೀಠವು ಈ ಹಿಂದೆ ವಿಚಾರಣೆ ನಡೆಸಿದ ಪ್ರಕರಣಗಳನ್ನು ನ್ಯಾಯಮೂರ್ತಿ ಬೋಸ್ ಅವರಿಗಿಂತ ಕಿರಿಯರಾದ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ನೇತೃತ್ವದ ನ್ಯಾಯಪೀಠಕ್ಕೆ ತಪ್ಪಾಗಿ ವರ್ಗಾಯಿಸಲಾಗುತ್ತಿದೆ ಎಂದು ಹಿರಿಯ ವಕೀಲರು ಮುಕ್ತ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಕೆಲ ದಿನಗಳಲ್ಲಿ ಈ ಪತ್ರ ಬರೆಯಲಾಗಿತ್ತು.
ನ್ಯಾಯಮೂರ್ತಿ ತ್ರಿವೇದಿ ನೇತೃತ್ವದ ಪೀಠದೆದುರು ಇಬ್ಬರು ವಕೀಲರು ಮತ್ತು ಪತ್ರಕರ್ತರೊಬ್ಬರ ವಿರುದ್ಧದ ಪ್ರಕರಣ ಪಟ್ಟಿ ಮಾಡಿರುವುದನ್ನು ಆಕ್ಷೇಪಿಸಿ ಆಕ್ಷೇಪ ವ್ಯಕ್ತಪಡಿಸಿ ವಕೀಲ ಪ್ರಶಾಂತ್ ಭೂಷಣ್ ಅವರು ಕೂಡ ಸಿಜೆಐಗೆ ಪತ್ರ ಬರೆದಿದ್ದರು.
ನಿಯಮಗಳ ಪ್ರಕಾರ ಸಿಜೆಐ ಅವರು ಆಲಿಸಬೇಕಿದ್ದ ಪ್ರಕರಣವನ್ನು ನ್ಯಾ. ಬೇಲಾ ಅವರು ವಿಚಾರಣೆ ನಡೆಸುತ್ತಿದ್ದಾರೆ. ಇದು ಪ್ರಕರಣಗಳನ್ನು ಸ್ವಯಂಚಾಲಿತವಾಗಿ ಪಟ್ಟಿ ಮಾಡುವ ಹೊಸ ಯೋಜನೆಯ ಷರತ್ತು 15ರ ಉಲ್ಲಂಘನೆಯಾಗಿದೆ ಎಂದು ಪ್ರಶಾಂತ್ ಭೂಷಣ್ ದೂರಿದ್ದರು.
ಆದರೆ ಇದು ನಿಯಮಗಳ ತಪ್ಪು ತಿಳುವಳಿಕೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಉನ್ನತ ಮೂಲಗಳು ʼಬಾರ್ ಅಂಡ್ ಬೆಂಚ್ʼಗೆ ತಿಳಿಸಿವೆ.
ಜಾರಿಯಲ್ಲಿರುವ ವ್ಯವಸ್ಥೆಯ ಪ್ರಕಾರ, ಪ್ರಕರಣವೊಂದನ್ನು ಪೀಠದ ಕಿರಿಯರೇ ಇರಲಿ ಹಿರಿಯರೇ ಇರಲಿ ಯಾವುದೇ ನ್ಯಾಯಾಧೀಶರಿಗೆ ನಿಯೋಜಿಸಬಹುದಾಗಿದೆ. ಅವರು ಪೀಠದ ಅಧ್ಯಕ್ಷತೆ ವಹಿಸುವ ನ್ಯಾಯಮೂರ್ತಿಗಳೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ಆ ಪ್ರಕರಣವನ್ನು ನಿಯೋಜಿಸಲಾದ ನ್ಯಾಯಮೂರ್ತಿಗಳಿಂದ ವಿಚಾರಣೆಗೆ ಒಳಗಾಗಬೇಕಾಗುತ್ತದೆ. ಕಿರಿಯ ನ್ಯಾಯಮೂರ್ತಿಗಳಾದವರು ಪ್ರಕರಣದ ವಿಚಾರಣೆ ನಡೆಸುವಂತಿಲ್ಲ ಎಂದಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಕರಣವೊಂದು ಹಿರಿಯ ನ್ಯಾಯಮೂರ್ತಿಗಳನ್ನು ಅನುಸರಿಸಬೇಕು ಎನ್ನುವುದು ವ್ಯವಸ್ಥೆಯ ಕುರಿತಾದ ಸರಿಯಾದ ಗ್ರಹಿಕೆಯಲ್ಲಸುಪ್ರೀಂ ಕೋರ್ಟ್ ವಿಶ್ವಾಸಾರ್ಹ ಮೂಲಗಳು
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಗೆ (ಪಿಎಂಎಲ್ಎ) ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ, "ಪ್ರಕರಣಗಳನ್ನು ಪಟ್ಟಿ ಮಾಡುವಾಗ ತಮ್ಮ ಆಯ್ಕೆಯ ನ್ಯಾಯಮೂರ್ತಿಗಳನ್ನು ನಿಯಂತ್ರಿಸಬಹುದು ಎಂದು ಜನ ಭಾವಿಸಬಹುದಾದರೂ ಅದು ಹಾಗೆ ಕಾರ್ಯ ನಿರ್ವಹಿಸುವುದಿಲ್ಲ" ಎಂದು ಮೂಲಗಳು ತಿಳಿಸಿವೆ.
ನ್ಯಾಯಮೂರ್ತಿ ತ್ರಿವೇದಿ ಅವರು ಕೆಲವು ಪ್ರಕರಣಗಳ ವಿಚಾರಣೆ ನಡೆಸಬಾರದು ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌ನ ಅಧಿಕಾರಿ, " ನೀವು ಯಾವುದೇ ಕಾರಣಕ್ಕೂ ನ್ಯಾ. ಬೇಲಾ ಅವರ ಮುಂದೆ ಹಾಜರಾಗುವುದಿಲ್ಲ ಎಂದು ಹೇಳುವುದು ನ್ಯಾಯವಲ್ಲ" ಎಂದು ಹೇಳಿದರು.
ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರು ಜಿಲ್ಲಾ ನ್ಯಾಯಾಂಗದಿಂದ ಪದೋನ್ನತಿ ಪಡೆದಿರುವುದರಿಂದ ಮತ್ತು ಅವರು ಕಾನೂನನ್ನು ಬೇರೆ ನೆಲೆಯಿಂದ ನೋಡಿರುವುದರಿಂದ ಅವರು ಸ್ವಲ್ಪ ಹೆಚ್ಚು ಕಟ್ಟುನಿಟ್ಟಾಗಿರುತ್ತಾರೆ ಎಂದು ಕೆಲವರು ಭಾವಿಸಬಹುದು...
ಮೊದಲು ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಅಜಯ್ ರಸ್ತೋಗಿ (ಇಬ್ಬರೂ ಈಗ ನಿವೃತ್ತರಾಗಿದ್ದಾರೆ) ಅವರು ವಿಚಾರಣೆ ನಡೆಸಿದ್ದ ಪಿಎಂಎಲ್‌ಎ ಪ್ರಕರಣವನ್ನು ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರೋಸ್ಟರ್‌ಗೆ ನಿಯೋಜಿಸಬೇಕಾಯಿತು. ಹೀಗಾಗಿ ನ್ಯಾಯಾಧೀಶರ ನಡುವೆ ಪ್ರಕರಣಗಳು ಸುತ್ತುತ್ತಿರುತ್ತವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಜಿಲ್ಲಾ ನ್ಯಾಯಾಂಗದಿಂದ ಪದೋನ್ನತಿ ಪಡೆದ ನ್ಯಾಯಮೂರ್ತಿಗಳು ವಕೀಲ ಸಮುದಾಯದಿಂದ ಬರುವ ನ್ಯಾಯಮೂರ್ತಿಗಳಿಗಿಂತಲೂ ಭಿನ್ನವಾಗಿ ಕಾನೂನನ್ನು ನೋಡುತ್ತಾರೆ, ಆದರೆ ಅದು ವ್ಯವಸ್ಥೆಯ ಭಾಗವಾಗಿದೆ. ವಕೀಲರು ರಿಜಿಸ್ಟ್ರಿ ಬಳಿ ಬಂದು "ನನಗೆ ಈ ಪೀಠ ಬೇಕು" ಎಂದು ಹೇಳಲು ಸಾಧ್ಯವಿಲ್ಲ. ನಿರ್ದಿಷ್ಟ ನ್ಯಾಯಮೂರ್ತಿಗಳಿಗೆ ಪ್ರಕರಣ ವಹಿಸದಿದ್ದರೆ ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ರಿಜಿಸ್ಟ್ರಿ ಅವರನ್ನು ವಕೀಲ ಸಮುದಾಯ ಬೆದರಿಸಿದ ಉದಾಹರಣೆ ಇದೆ. ಮಾಸ್ಟರ್ ಆಫ್ ರೋಸ್ಟರ್ ಆಗಿರುವ ಸಿಜೆಐ ಅವರು ಚಾಟಿ ಬೀಸಬೇಕಾದ ಕೆಲ ಪ್ರಕರಣಗಳಿರುತ್ತವೆ. ಅದನ್ನು ತಾತ್ವಿಕವಾಗಿ ಮಾಡಲಾಗುತ್ತದೆಯೇ ವಿನಾ ಖಾಸಗಿ ಅಥವಾ ಸರ್ಕಾರಿ ಹಿತಾಸಕ್ತಿಗಳಿಗೆ ಅನುಗುಣವಾಗಿ ಅಲ್ಲ ಎಂದು ಮೂಲಗಳು ವಿವರಿಸಿದವು.
ಇದಲ್ಲದೆ, ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಮೂರ್ತಿಗಳ ನೇಮಕಾತಿಯನ್ನು ಸೂಚಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬಕ್ಕೆ ಸಂಬಂಧಿಸಿದ ಪ್ರಕರಣವನ್ನು ಅದನ್ನು ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠದಿಂದ ತೆಗೆದುಹಾಕಲಾಗಿತ್ತು. ಈ ಬಗ್ಗೆ ನ್ಯಾ. ಕೌಲ್ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿ ಸಹೋದ್ಯೋಗಿ ನ್ಯಾಯಮೂರ್ತಿಗಳ ಮಾತನ್ನು ನಂಬುವುದು ಮುಖ್ಯ ಎಂದಿದ್ದಾರೆ. "ಏನೋ ತಪ್ಪಾಗಿದೆ ಎಂದು ಹೇಳುವುದು ತುಂಬಾ ಸುಲಭ ... ಆದರೆ ಸರ್ಕಾರದಿಂದ ನ್ಯಾಯಾಲಯದ ಮಟ್ಟದಲ್ಲಿ ಬಗೆಹರಿಸಿಕೊಳ್ಳುವುದು ಉತ್ತಮ" ಎಂದು ಅವರು ಹೇಳಿದರು.