ಸುದ್ದಿಗಳು

ಕಾಲ್ತುಳಿತ ಪ್ರಕರಣ: ಎಲ್ಲ ಮಾಹಿತಿ ಬಹಿರಂಗಪಡಿಸಲಾಗುವುದು ಎಂದ ಸರ್ಕಾರ, ಬಿಡುಗಡೆ ಕುರಿತ ವಿಚಾರಣೆ ನಾಳೆಗೆ ಮುಂದೂಡಿಕೆ

“ವಿಜಯೋತ್ಸವಕ್ಕೆ ಬನ್ನಿ ಎಂದು ಆರ್‌ಸಿಬಿ ಕರೆ ನೀಡಿದೆ. ಅದೇ ಕರೆಯನ್ನು ಸರ್ಕಾರ ನೀಡಿದೆ. ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ, ಸರ್ಕಾರ ಎಲ್ಲರೂ ಒಂದೇ ನೆಲೆಯಲ್ಲಿ ಇದ್ದಾರೆ. ಆದರೆ, ಇಲ್ಲಿ ಒಬ್ಬರಿಗೊಬ್ಬರು ಹೋರಾಡುವ ಅಗತ್ಯವೇನಿದೆ” ಎಂದ ಚೌಟ.

Bar & Bench

“ಎಲ್ಲ ಮಾಹಿತಿಯನ್ನು ಸ್ಪಷ್ಟವಾಗಿ ಬಹಿರಂಗಪಡಿಸಲು ನಾಳೆಯವರೆಗೆ ಕಾಲಾವಕಾಶ ನೀಡಬೇಕು” ಎಂಬ ರಾಜ್ಯ ಸರ್ಕಾರದ ವಿನಮ್ರ ವಾದವನ್ನು ಪರಿಗಣಿಸಿದ ಕರ್ನಾಟಕ ಹೈಕೋರ್ಟ್‌ ಕಾಲ್ತುಳಿತ ಪ್ರಕರಣದ ಸಂಬಂಧ ಬಂಧಿತರಾಗಿರುವ ನಾಲ್ವರ ಬಿಡುಗಡೆ ಮನವಿಗೆ ಸಂಬಂಧಿಸಿದ ಅರ್ಜಿಯನ್ನು ಬುಧವಾರಕ್ಕೆ ಮುಂದೂಡಿದೆ.

ತಮ್ಮ ಬಂಧನ ಅಕ್ರಮವಾಗಿರುವುದರಿಂದ ತಕ್ಷಣ ಬಿಡುಗಡೆ ಮಾಡಬೇಕು ಎಂದು ಕೋರಿ ಆರ್‌ಸಿಬಿ ಮಾರುಕಟ್ಟೆ ವಿಭಾಗದ ನಿಖಿಲ್‌ ಸೋಸಲೆ, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ನ ನಿರ್ದೇಶಕ ಸುನೀಲ್‌ ಮ್ಯಾಥ್ಯೂ, ಡಿಎನ್‌ನ ಮ್ಯಾನೇಜರ್‌ ಕಿರಣ್‌ ಕುಮಾರ್‌ ಮತ್ತು ಸಮಂತ್‌ ಮಾವಿನಕೆರೆ ಅವರ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

Justice S R Krishna Kumar

ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್‌ ಚೌಟ ಅವರು ವಾದ ಪೂರ್ಣಗೊಳಿಸುವ ವೇಳೆಗೆ ಪೀಠದ ಮುಂದೆ ಹಾಜರಾದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಬಹಿರಂಗಪಡಿಸಲಾಗುವುದು. ಅರ್ಜಿದಾರರ ಆರೋಪಗಳಿಗೆ ವಿಸ್ತೃತವಾಗಿ ವಾದ ಮಂಡನೆ ಮಾಡಬೇಕಿದೆ. ಇದೇ ಕಾರಣಕ್ಕೆ ಹಂಗಾಮಿ ನ್ಯಾಯಮೂರ್ತಿಗಳ ಮುಂದೆ ಇದ್ದ ಸ್ವಯಂಪ್ರೇರಿತ ಪಿಐಎಲ್‌ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿಕೆ ಮನವಿ ಮಾಡಲಾಗಿದೆ. ನಮ್ಮ ಅಧಿಕಾರಿಗಳು ಬೆಳಗಿನ ಜಾವದವರೆಗೆ ಕೆಲಸ ಮಾಡಿದ್ದಾರೆ. ಎಲ್ಲವನ್ನೂ ಕಪ್ಪು-ಬಿಳುಪಿನ ಮಾದರಿಯಲ್ಲಿ ಪೀಠದ ಮುಂದೆ ಇಡಲಾಗುವುದು. ಇದಕ್ಕೆ ಸಿದ್ಧತೆ ನಡೆಸಬೇಕಿದೆ. ಹೀಗಾಗಿ, ವಿಚಾರಣೆಯನ್ನು ನಾಳೆಗೆ ಮುಂದೂಡಬೇಕುʼ ಎಂದು ಕೋರಿದರು.

ಇದಕ್ಕೆ ಚೌಟ ಅವರು “ತಕ್ಷಣ ಬಿಡುಗಡೆ ಕೋರಿರುವ ನಮ್ಮ ಕೋರಿಕೆಯಲ್ಲಿ ವಿಫಲವಾದರೆ ನಾವು ಮತ್ತೆ ಕಸ್ಟಡಿಗೆ ಹೋಗುತ್ತೇವೆ. ಹೀಗಾಗಿ, ಮಧ್ಯಂತರ ಪರಿಹಾರ ಪರಿಗಣಿಸಬೇಕು” ಎಂದರು.

ಇದಕ್ಕೆ ಒಪ್ಪದ ಪೀಠವು ಅಡ್ವೊಕೇಟ್‌ ಜನರಲ್‌ ವಾದ ಮಂಡಿಸಲಿ, ಅರ್ಜಿಯನ್ನು ನಾಳೆ 10.30ಕ್ಕೆ ವಿಚಾರಣೆ ನಡೆಸಲಾಗುವುದು ಎಂದಿತು.

ಇದಕ್ಕೂ ಮುನ್ನ, ಚೌಟ ಅವರು “ಜೂನ್‌ 5ರ ಬೆಳಗಿನ ಜಾವ 3.30ಕ್ಕೆ ಬೆಂಗಳೂರಿನ ಆರ್‌ ಟಿ ನಗರದ ಮನೆಯಲ್ಲಿ 4ನೇ ಆರೋಪಿ ಸಮಂತ್‌ ಮಾವಿನಕೆರೆಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. 4 ಗಂಟೆಗೆ ವಿಮಾನ ನಿಲ್ದಾಣದಲ್ಲಿ ಸಿಸಿಬಿ ಪೊಲೀಸರು ನಿಖಿಲ್‌ ಸೋಸಲೆಯನ್ನು ಬಂಧಿಸಿದ್ದಾರೆ. 4.30ಕ್ಕೆ ಸುನೀಲ್‌ ಮ್ಯಾಥ್ಯೂ ಮತ್ತು ಕಿರಣ್‌ ಕುಮಾರ್‌ ಬಂಧಿಸಲಾಗಿದೆ. ಇವರನ್ನು ಬಂಧಿಸಲು ಸಿಸಿಬಿಗೆ ಯಾವ ಅಧಿಕಾರ ಇದೆ? ತನಿಖೆಗೆ ಹಾಜರಾಗುವಂತೆ ನೋಟಿಸ್‌ ನೀಡದೆಯೇ ಬಂಧಿಸಿದ್ದು ಹೇಗೆ? ಮುಖ್ಯಮಂತ್ರಿ ಸೂಚನೆಯನ್ನು ಆಧರಿಸಿ ನಾಲ್ವರನ್ನು ಬಂಧಿಸಲಾಗಿದೆ" ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು.

ಮುಂದುವರೆದು, "ಈ ನಡುವೆ ಐವರು ಪೊಲೀಸ್‌ ಅಧಿಕಾರಿಗಳು, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ವಜಾಗೊಳಿಸಲಾಗಿದೆ, ಗುಪ್ತದಳದ ಮುಖ್ಯಸ್ಥ ಹೇಮಂತ್‌ ನಿಂಬಾಳ್ಕರ್‌ ವರ್ಗಾವಣೆಯಾಗಿದೆ. ಇವರಲ್ಲಿ ಯಾರೊಬ್ಬರನ್ನೂ ಏಕೆ ಬಂಧಿಸಿಲ್ಲ. ಬಂಧನ ನಿರ್ದೇಶನ ನೀಡುವ ಅಧಿಕಾರ ನ್ಯಾಯಾಲಯಕ್ಕೇ ಇಲ್ಲ. ಮುಖ್ಯಮಂತ್ರಿಗೆ ಬಂಧನಕ್ಕೆ ನೀಡುವ ಅಧಿಕಾರ ಎಲ್ಲಿದೆ? ಬಂಧನ ಅಧಿಕಾರ ತನಿಖಾಧಿಕಾರಿ ವಿವೇಚನೆಗೆ ಬಿಟ್ಟಿದೆ. ರಾಜಕೀಯ ಪ್ರಭಾವ ಇಲ್ಲಿ ಕೆಲಸ ಮಾಡಿದೆ” ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು.

“ವಿಜಯೋತ್ಸವಕ್ಕೆ ಬನ್ನಿ ಎಂದು ಆರ್‌ಸಿಬಿ ಕರೆ ನೀಡಿದೆ. ಅದೇ ಕರೆಯನ್ನು ಸರ್ಕಾರ ನೀಡಿದೆ. ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ, ಸರ್ಕಾರ ಎಲ್ಲರೂ ಒಂದೇ ನೆಲೆಯಲ್ಲಿ ಇದ್ದಾರೆ. ಆದರೆ, ಇಲ್ಲಿ ಒಬ್ಬರಿಗೊಬ್ಬರು ಹೋರಾಡುವ ಅಗತ್ಯವೇನಿದೆ. ಯಾರೂ ಕಾಲ್ತುಳಿತ ಸಂಭವಿಸಬೇಕು ಅಥವಾ ಸಂಭವಿಸಬಹುದು ಎಂದು ನಿರೀಕ್ಷಿಸಿರಲಿಲ್ಲ” ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ನಾಳೆಗೆ ಮುಂದೂಡಿತು.