ಆರ್‌ಸಿಬಿ, ಡಿಎನ್‌ಎ ಅಧಿಕಾರಿಗಳನ್ನು ಬಂಧಿಸದಂತೆ ಹೈಕೋರ್ಟ್‌ ಸೂಚನೆ; ಬಂಧಿತರ ಬಿಡುಗಡೆ ವಿಚಾರ ನಾಳೆಗೆ ಮುಂದೂಡಿಕೆ

“ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ವಜಾ, ಐವರು ಪೊಲೀಸ್‌ ಅಧಿಕಾರಿಗಳ ಅಮಾನತು ಮತ್ತು ಗುಪ್ತ ದಳದ ಮುಖ್ಯಸ್ಥರನ್ನು ವರ್ಗಾವಣೆ ಮಾಡಿರುವುದು ಏತಕ್ಕಾಗಿ? ಅವರನ್ನು ಬಂಧಿಸುವಂತೆ ಸಿಎಂ ಏಕೆ ನಿರ್ದೇಶನ ನೀಡಿಲ್ಲ” ಎಂದು ಪ್ರಶ್ನಿಸಿದ ಚೌಟ.
KSCA & RCB
KSCA & RCB
Published on

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಈಚೆಗೆ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಲ್‌ ಚಾಲೆಂಜರ್ಸ್‌ ಸ್ಪೋರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಪದಾಧಿಕಾರಿಗಳನ್ನು ಬಂಧಿಸದಂತೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಮೌಖಿಕವಾಗಿ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಪದಾಧಿಕಾರಿಗಳ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿತ್ತು.

ರಾಯಲ್‌ ಚಾಲೆಂಜರ್ಸ್‌ ಸ್ಪೋರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ವಜಾಗೊಳಿಸಬೇಕು ಎಂದು ಕೋರಿದ್ದು, ಬಂಧಿತರಾದ ಆರ್‌ಸಿಬಿಯ ಮಾರುಕಟ್ಟೆ ವಿಭಾಗದ ಮುಖಸ್ಥ ನಿಖಿಲ್‌ ಸೋಸಲೆ, ಡಿಎನ್‌ಎ ಉದ್ಯೋಗಿಗಳಾದ ಸುನೀಲ್‌ ಮ್ಯಾಥ್ಯೂ, ಕಿರಣ್‌ ಕುಮಾರ್‌ ಮತ್ತು ಸುಮಂತ್‌ ಅವರು ಮಧ್ಯಂತರ ಪರಿಹಾರದ ಭಾಗವಾಗಿ ಬಿಡುಗಡೆ ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice S R Krishna Kumar
Justice S R Krishna Kumar

ಕೆಎಸ್‌ಸಿಎ ಪದಾಧಿಕಾರಿಗಳ ವಿರುದ್ಧ ಬಲವಂತ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿರುವುದರಿಂದ ಆರ್‌ಸಿಎಸ್‌ಪಿಎಲ್‌ ಮತ್ತು ಡಿಎನ್‌ಎ ಉದ್ಯೋಗಿಗಳು ಇದೇ ರಕ್ಷಣೆ ನೀಡಬೇಕಿದೆ ಎಂದು ಪೀಠವು ಹೇಳಿತು. ಇದಕ್ಕೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಆಕ್ಷೇಪಿಸಿದ್ದರಿಂದ ಮೌಖಿಕವಾಗಿ ಬಂಧಿಸದಂತೆ ಸೂಚಿಸಿತು. ಸರ್ಕಾರ ಬಯಸುವ ಎಲ್ಲಾ ಷರತ್ತುಗಳನ್ನು ವಿಧಿಸಿ, ಆರೋಪಿಗಳು ತನಿಖೆಗೆ ಸಹಕರಿಸುವಂತೆ ಸೂಚಿಸಲಾಗುವುದು. ಆದರೆ, ಬಂಧಿಸಬಾರದು ಎಂದಿತು. ಇದಕ್ಕೆ ಅಡ್ವೊಕೇಟ್‌ ಜನರಲ್‌ ಸಮ್ಮತಿಸಿದರು. ಹೀಗಾಗಿ, ಈ ಅರ್ಜಿಗಳ ವಿಚಾರಣೆಯನ್ನು ಜೂನ್ 12ಕ್ಕೆ ನ್ಯಾಯಾಲಯ ಮುಂದೂಡಿತು.

ವಿಚಾರಣೆಯ ಒಂದು ಹಂತದಲ್ಲಿ ಶೆಟ್ಟಿ ಅವರು “ಆರ್‌ಸಿಬಿ ಟ್ವೀಟ್‌ ಅನ್ನು 13 ಕೋಟಿ ಜನರು ನೋಡಿದ್ದಾರೆ. ಆರ್‌ಸಿಬಿ ಗೆದ್ದ ತಕ್ಷಣ ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಿಸಲಾಗುವುದು ಎಂದು ಟ್ವೀಟ್‌ ಮಾಡಿತ್ತು. ಇದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ. ಹೀಗಾಗಿ, ಆರ್‌ಸಿಬಿ ಅಥವಾ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟವರ್ಕ್ಸ್‌ ಉದ್ಯೋಗಿಗಳಿಗೆ ಬಂಧನದಿಂದ ಪರಿಹಾರ ನೀಡಬಾರದು” ಎಂದರು.

ಇದಕ್ಕೆ ಪೀಠವು ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗವಹಿಸುವಂತೆ ಟ್ವೀಟ್‌ ಮಾಡಿದ್ದು ಕಾಲ್ತುಳಿತಕ್ಕೆ ಕಾರಣ ಎಂದು ಈಗಲೇ ಹೇಳುವುದು ಆತುರದ ನಿರ್ಧಾರವಾಗುತ್ತದೆ ಎಂದು ಹೇಳಿತು.

ನಿಖಿಲ್‌, ಸುನೀಲ್‌ ಮ್ಯಾಥ್ಯೂ, ಕಿರಣ್‌ ಕುಮಾರ್‌, ಸುಮಂತ್‌ ಅರ್ಜಿ ವಿಚಾರಣೆ ನಾಳೆ

ಕಾಲ್ತುಳಿತ ಪ್ರಕರಣದ ಭಾಗವಾಗಿ ಬಂಧಿತರಾಗಿರುವ ನಿಖಿಲ್‌ ಸೋಸಲೆ ಹಾಗೂ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ಉದ್ಯೋಗಿಗಳಾದ ಸುನೀಲ್‌ ಮ್ಯಾಥ್ಯೂ, ಕಿರಣ್‌ ಕುಮಾರ್‌, ಸುಮಂತ್‌ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ನಾಳೆ ವಿಚಾರಣೆ ನಡೆಸಲಿದೆ.

ನಿಖಿಲ್‌ ಪರವಾಗಿ ವಾದಿಸಿದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇಲ್ಲಿನ ಠಾಣಾಧಿಕಾರಿಯು ಅಮಾನತುಗೊಂಡಿದ್ದು, ನಿಖಿಲ್‌ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ, ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿತ್ತು. ಇದು ಕಾನೂನುಬಾಹಿರ ಕ್ರಮ. ಸಿಸಿಬಿಯು ಇಲ್ಲಿ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲದಿರುವುದರಿಂದ ನಿಖಿಲ್‌ ಬಂಧಿಸುವ ಅಧಿಕಾರ ಸಿಸಿಬಿಗೆ ಇರಲಿಲ್ಲ. ಹೀಗಾಗಿ, ಬಂಧನ ಅಕ್ರಮ” ಎಂದರು.

“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗೋಷ್ಠಿಯಲ್ಲಿ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದಾರೆ. ಆನಂತರ ಪೊಲೀಸರು ನಿಖಿಲ್‌ ಮತ್ತಿತರರನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿ, ಅಗತ್ಯಬಿದ್ದರೆ ಮಾತ್ರ ತನಿಖಾಧಿಕಾರಿ ಆರೋಪಿಯನ್ನು ಬಂಧಿಸಬಹುದು. ತನಿಖಾಧಿಕಾರಿ ಹೊರತುಪಡಿಸಿ ಯಾರಿಗೂ ಬಂಧಿಸುಂತೆ ಸೂಚಿಸುವ ಅಧಿಕಾರವಿಲ್ಲ. ಬಂಧನಕ್ಕೂ ಮುನ್ನ, ನಿಖಿಲ್‌ಗೆ ಪೊಲೀಸರು ಯಾವುದೇ ನೋಟಿಸ್‌ ನೀಡಿಲ್ಲ. ಬಂಧನ ಸೂಚನೆ, ಬಂಧನಕ್ಕೆ ಕಾರಣ ನೀಡಿಲ್ಲ. ಪತ್ನಿ, ಮಗುವಿನ ಜೊತೆ ಪ್ರವಾಸಕ್ಕೆ ತೆರಳುತ್ತಿದ್ದ ನಿಖಿಲ್‌ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದು ಕಾನೂನುಬಾಹಿರ ಕ್ರಮಕವಾಗಿದೆ” ಎಂದು ಆಕ್ಷೇಪಿಸಿದರು.

“ತನಿಖೆಯೇ ನಡೆಯದೇ ಮುಖ್ಯಮಂತ್ರಿ ಬಂಧಿಸುವಂತೆ ಮಾಧ್ಯಮಗೋಷ್ಠಿಯಲ್ಲಿ ಹೇಗೆ ಸೂಚನೆ ನೀಡಿದ್ದಾರೆ? ತಮ್ಮ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ವಜಾ, ಐವರು ಪೊಲೀಸ್‌ ಅಧಿಕಾರಿಗಳ ಅಮಾನತು ಮತ್ತು ಗುಪ್ತ ದಳದ ಮುಖ್ಯಸ್ಥ ಹೇಮಂತ್‌ ನಿಂಬಾಳ್ಕರ್‌ ಅವರನ್ನು ವರ್ಗಾವಣೆ ಮಾಡಿರುವುದು ಏತಕ್ಕಾಗಿ? ಅವರನ್ನು ಬಂಧಿಸುವಂತೆ ಮುಖ್ಯಮಂತ್ರಿ ಏಕೆ ನಿರ್ದೇಶನ ನೀಡಿಲ್ಲ” ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪಿಸಿದ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು “ಆರ್‌ಸಿಬಿ ಜಯಿಸಿದ ದಿನವೇ ಟ್ವೀಟ್‌ ಮಾಡುವ ಮೂಲಕ ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಿಸಲಾಗುವುದು ಎಂದು ಆರ್‌ಸಿಬಿ ಘೋಷಿಸಿದೆ. ಇದಕ್ಕೆ ಸೂಕ್ತ ಅನುಮತಿ ಪಡೆದಿರಲಿಲ್ಲ. 11 ಮಂದಿ ದುರ್ಮರಣಕ್ಕೆ ಕಾರಣವಾಗಿರುವುದು ಆರ್‌ಸಿಬಿ, ಡಿಎನ್‌ಎ ನಡೆಯಾಗಿದೆ. ಆರೋಪಿಗಳು ಫಲಾಯಗೈಯ್ಯುತ್ತಿರುವಾಗ ಸರ್ಕಾರ ನೋಡಿಕೊಂಡು ಕುಳಿತುಕೊಳ್ಳಬೇಕೆ” ಎಂದು ತಿರುಗೇಟು ನೀಡಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಬಂಧಿತರ ಬಿಡುಗಡೆ ಸೀಮಿತವಾದ ಮಧ್ಯಂತರ ಕೋರಿಕೆಯ ಕುರಿತು ವಾದಿಸಲು ಅಡ್ವೊಕೇಟ್‌ ಜನರಲ್‌ಗೆ ನಿರ್ದೇಶಿಸಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

Kannada Bar & Bench
kannada.barandbench.com