Justice Krishna Dixit 
ಸುದ್ದಿಗಳು

ಹಿಮಾಲಯದಲ್ಲಿ ಹೈಕೋರ್ಟ್‌ನ ಪೀಠ ಮಾಡಿದರೆ ಅಲ್ಲಿಗೂ ಹೋಗುತ್ತೇನೆ: ನ್ಯಾ. ಕೃಷ್ಣ ದೀಕ್ಷಿತ್‌

“ವರ್ಗಾವಣೆ ವಿಚಾರದಲ್ಲಿ ನಾವು ವರ್ಗಾವಣೆಗೆ ಬದ್ಧವಾಗಿರಬೇಕು ಎಂದು ಹೇಳಿದಾಗ ನೀವು ಹೋಗಬೇಕಲ್ಲವೇ? ಇದು ನಮಗೂ ಅನ್ವಯಿಸುತ್ತದೆ” ಎಂದ ನ್ಯಾ. ದೀಕ್ಷಿತ್‌.

Bar & Bench

“ಹಿಮಾಲಯದಲ್ಲಿ ಹೈಕೋರ್ಟ್‌ ಪೀಠ ಮಾಡಿ ಅಲ್ಲಿಗೆ ಹೋಗು ಎಂದರೂ ಅಲ್ಲಿ ಹೋಗಿ ಕೆಲಸ ಮಾಡುತ್ತೇನೆ” ಎಂದು ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು ಏಪ್ರಿಲ್‌ 17ರ ವಿಚಾರಣೆಯ ಸಂದರ್ಭದಲ್ಲಿ ಮೌಖಿಕವಾಗಿ ಹೇಳಿದ್ದಾರೆ.

ನ್ಯಾ. ದೀಕ್ಷಿತ್‌ ಅವರನ್ನೂ ಒಳಗೊಂಡು ಇತರೆ ಮೂವರು ನ್ಯಾಯಮೂರ್ತಿಗಳಾದ ಕೆ ನಟರಾಜನ್‌, ಎನ್‌ ಎಸ್‌ ಸಂಜಯ್‌ಗೌಡ ಮತ್ತು ಹೇಮಂತ್‌ ಚಂದನ್‌ಗೌಡರ್‌ ಅವರ ವರ್ಗಾವಣೆ ಗುಸುಗುಸು ನಡುವೆ ನ್ಯಾಯಮೂರ್ತಿಗಳ ಈ ಅಭಿಪ್ರಾಯವು ಮಹತ್ವ ಪಡೆದಿದೆ.

ಪ್ರಕರಣದ ವಿಚಾರಣೆಯ ನಂತರ ಅರ್ಜಿದಾರರ ಪರ ವಕೀಲರು ಮುಂದಿನ ವಾರ ಅರ್ಜಿಯನ್ನು ವಿಚಾರಣೆಗೆ ನಿಗದಿ ಮಾಡಬೇಕು ಎಂದರು. ಆಗ ನ್ಯಾ. ದೀಕ್ಷಿತ್‌ ಅವರು “ಮುಂದೆ ನಿಮಗೆ ಒಳ್ಳೆಯ ಪೀಠ ಸಿಗಬಹುದು. ನೀವು ಎಲ್ಲಾ ಕೆಟ್ಟ ಜನರನ್ನು ಹೊರದಬ್ಬುತ್ತಿದ್ದೀರಿ…” ಎಂದು ನಕ್ಕರು.

ಆಗ ಪ್ರತಿವಾದಿಗಳ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಪಿ ಎಸ್‌ ರಾಜಗೋಪಾಲ್‌ ಅವರು “ನ್ಯಾಯಮೂರ್ತಿಗಳು ತಮ್ಮನ್ನು ಹೊರದಬ್ಬುವ ಪದ ಬಳಕೆ ಮಾಡಬಾರದಾಗಿ ವಿನಂತಿ. ದಯವಿಟ್ಟು ಈ ಅಭಿಪ್ರಾಯ ಹೊಂದಬೇಡಿ. ನಾವು ಪ್ರತಿಭಟಿಸುವುದನ್ನು ಕಲಿಯದಿದ್ದರೆ ನಾವು ನಾಶವಾಗುತ್ತೇವೆ ಎಂದು ನಾನು ಹೊರಗೆ ಹೇಳುತ್ತಿದ್ದೆ. ಅದರರ್ಥ ನಮ್ಮೆಲ್ಲಾ ಪ್ರತಿಭಟನೆಗಳು ಯಶಸ್ವಿಯಾಗುತ್ತವೆ ಎಂದಲ್ಲ” ಎಂದರು.

ಆಗ ನ್ಯಾ. ದೀಕ್ಷಿತ್‌ ಅವರು “ನಿಮ್ಮ ಅಭಿಪ್ರಾಯ ನಮ್ಮದಾಗುವುದಿಲ್ಲ. ಅದೆಲ್ಲವೂ ನೀತಿಯ ಭಾಗವಾಗಿರುತ್ತದೆ. ವರ್ಗಾವಣೆ ವಿಚಾರದಲ್ಲಿ ನಾವು ವರ್ಗಾವಣೆಗೆ ಬದ್ಧವಾಗಿರಬೇಕು ಎಂದು ನಾವು ಹೇಳಿದಾಗ ನೀವು ಹೋಗಬೇಕಲ್ಲವೇ? ಅದು ನಮಗೂ ಅನ್ವಯಿಸುತ್ತದೆ” ಎಂದು ನಕ್ಕರು.

ಇದಕ್ಕೆ ರಾಜಗೋಪಾಲ್‌ ಅವರು “ನನ್ನ ಅಭಿಪ್ರಾಯ ಹೇಳುವ ಅರ್ಹತೆ ನನಗಿದೆ. ನಾವು ಭಾವನೆ ವ್ಯಕ್ತಪಡಿಸುವಂತವರಾಗಿರಬೇಕು ಎಂದಷ್ಟೆ” ಎಂದರು. ಇದಕ್ಕೆ ಅಲ್ಲಿಯೇ ಉಪಸ್ಥಿತರಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರೂ ಧ್ವನಿಗೂಡಿಸಿದರು.

ಮುಂದುವರಿದು ರಾಜಗೋಪಾಲ್‌ ಅವರು “ಸೇವಾ ಕಾನೂನು ಸಾಂವಿಧಾನಿಕ ಹುದ್ದೆಗಳಿಗೆ ಅನ್ವಯಿಸುವುದಿಲ್ಲ ಎಂದು ಹತ್ತು ದಿನಗಳ ಹಿಂದೆ ತಾವೇ ನನಗೆ ಹೇಳಿದ್ದೀರಿ. ನಿಮ್ಮ ನಿಲುವು ನಮಗೆ ಅರ್ಥವಾಗುತ್ತದೆ. ಆದರೆ, ಬಾರ್‌ನಿಂದ ಏನಾದರೂ ಆಗಬೇಕಿದೆ. ಈ ವೇದಿಕೆಯಲ್ಲಿ ನಾನು ಅಭಿಪ್ರಾಯ ಹೇಳಲು ಅರ್ಹನಾಗಿಲ್ಲ. ಆದರೆ, ನನ್ನ ಮುಕ್ತತೆಯನ್ನು ಕ್ಷಮಿಸಬೇಕಾಗಿ ವಿನಂತಿ” ಎಂದರು.

ಆಗ ನ್ಯಾ. ದೀಕ್ಷಿತ್‌ ಅವರು “ಸೈನಿಕನನ್ನು ಒಂದು ಕಡೆ ನಿಯೋಜಿಸಿದಾಗ ಅಲ್ಲಿಗೆ ಹೋಗಿ ವರದಿ ಮಾಡಿಕೊಳ್ಳುವುದು ಅವರ ಕರ್ತವ್ಯ. ಖುಷಿಯಿಂದ ಹೋಗಬೇಕು, ಕೆಲಸ ಮಾಡಬೇಕು ಅಷ್ಟೆ. ಅಲ್ಲಿ ಹೋದರು ನಮಗೆ ವ್ಯವಸ್ಥೆ ಇರುತ್ತದೆ. ನಮ್ಮನ್ನೇನು ಹಿಮಾಲಯಕ್ಕೆ ಕಳುಹಿಸುತ್ತಾರಾ? ಹಿಮಾಲಯದಲ್ಲಿ ಹೈಕೋರ್ಟ್‌ನ ಪೀಠ ಮಾಡಿದರೆ ಅಲ್ಲಿಗೂ ಹೋಗುತ್ತೇನೆ. ಸಮಸ್ಯೆಯಿಲ್ಲ” ಎಂದರು.