pregnant woman and Bombay high court 
ಸುದ್ದಿಗಳು

ಜನ್ಮ ನೀಡಲು ಮಹಿಳೆಗೆ ಒತ್ತಾಯ ಮಾಡಲಾಗದು; ಸಂತಾನೋತ್ಪತ್ತಿ ಆಯ್ಕೆಯು ಸಂವಿಧಾನದ 21ನೇ ವಿಧಿಯ ಭಾಗ: ಬಾಂಬೆ ಹೈಕೋರ್ಟ್‌

ಸಂವಿಧಾನದ 21ನೇ ವಿಧಿಯಲ್ಲಿ ಮಹಿಳೆಯ ಸಂತಾನೋತ್ಪತ್ತಿ ಆಯ್ಕೆಯು ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಸಂವಿಧಾನದ 21ನೇ ವಿಧಿಯಡಿ ಮಹಿಳೆಯ ಸಂತಾನೋತ್ಪತ್ತಿ ಆಯ್ಕೆಯು ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿರುವುದರಿಂದ ಆಕೆಗೆ ಮಗು ಪಡೆಯಲು ಬಲವಂತ ಮಾಡಲಾಗದು ಎಂದು ಈಚೆಗೆ ಬಾಂಬೆ ಹೈಕೋರ್ಟ್‌ ಹೇಳಿದೆ.

ತನ್ನ ಒಪ್ಪಿಗೆ ಪಡೆಯದೇ ಪತ್ನಿಯು ಗರ್ಭಪಾತ ಮಾಡಿಸಿರುವುದು ಕ್ರೌರ್ಯ ಎಂಬ ಆಧಾರದಲ್ಲಿ ವಿಚ್ಚೇದನ ಕೋರಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅತುಲ್‌ ಚಂದೂರ್ಕರ್‌ ಮತ್ತು ಊರ್ಮಿಳಾ ಜೋಶಿ ಫಾಲ್ಕೆ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಪತ್ನಿಯ ನಡತೆಯು ತನ್ನ ಮಗುವಿನ ಕುರಿತ ಜವಾಬ್ದಾರಿಯನ್ನು ಎತ್ತಿ ತೋರಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.

“ಸಂವಿಧಾನದ 21ನೇ ವಿಧಿಯಡಿ ಮಹಿಳೆಯ ಸಂತಾನೋತ್ಪತ್ತಿ ಆಯ್ಕೆಯು ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ, ಮಗುವಿಗೆ ಜನ್ಮ ನೀಡುವಂತೆ ಒತ್ತಾಯ ಮಾಡಲಾಗದು” ಎಂದು ನ್ಯಾಯಾಲಯ ಹೇಳಿದೆ. ವಿವಾಹದ ನಂತರ ಕೆಲಸ ಮಾಡಲು ಮಹಿಳೆ ಬಯಸಿದರೆ ಅದು ಕ್ರೌರ್ಯವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಅರ್ಜಿ ವಜಾ ಮಾಡಿದೆ.

2001ರಲ್ಲಿ ಮದುವೆಯಾದಾಗಿನಿಂದ ಪತ್ನಿಯು ಉದ್ಯೋಗ ಮಾಡಲು ಬಯಸಿದ್ದು, ಗರ್ಭಪಾತ ಮಾಡಿಸಿಕೊಳ್ಳುವ ಮೂಲಕ ತಮ್ಮನ್ನು ಕ್ರೌರ್ಯಕ್ಕೆ ಗುರಿಪಡಿಸಲಾಗಿದೆ ಎಂದು ಅರ್ಜಿದಾರ ಪತಿ ಆರೋಪಿಸಿದ್ದರು. 2004ರಲ್ಲಿ ಪುತ್ರನೊಂದಿಗೆ ತಮ್ಮನ್ನು ತೊರೆದು ಹೋಗಿದ್ದಾರೆ. ಕ್ರೌರ್ಯ ಮತ್ತು ತನ್ನನ್ನು ತೊರೆದಿರುವ ಆಧಾರದಲ್ಲಿ ವಿಚ್ಚೇದನ ಕೊಡಿಸಬೇಕು ಎಂದು ಮನವಿ ಮಾಡಿದ್ದರು.

ಇತ್ತ ಪತ್ನಿಯು ತಾನು ಮೊದಲ ಮಗುವಿಗೆ ಜನ್ಮ ನೀಡಿ ಅದನ್ನು ಸಲಹುತ್ತಿರುವುದು ಮಾತೃತ್ವವನ್ನು ಒಪ್ಪಿಕೊಂಡಿರುವುದರ ಸೂಚಕವಾಗಿದೆ. ತಾನು ಎರಡನೆಯ ಬಾರಿಗೆ ಗರ್ಭಿಣಿಯಾದಾಗ ಅನಾರೋಗ್ಯದ ಕಾರಣದಿಂದ ಗರ್ಭಪಾತವಾಗಿದೆ ಎಂದು ವಾದಿಸಿದ್ದರು. ತನ್ನನ್ನು ಮರಳಿ ಗಂಡನ ಮನೆಗೆ ಕರೆತರಲು ಯಾವುದೇ ಪ್ರಯತ್ನವನ್ನು ಮಾಡಲಾಗಿಲ್ಲ. ತಾನು ಮನೆ ಬಿಡಲು ತನ್ನ ಶೀಲವನ್ನು ಶಂಕಿಸಿದ್ದು ಕಾರಣ ಎಂದು ಹೇಳಿದ್ದರು.

ಅಂತಿಮವಾಗಿ ನ್ಯಾಯಾಲಯವು ಎರಡೂ ಪಕ್ಷಕಾರರ ಬಳಿ ತಮ್ಮ ವಾದಗಳನ್ನು ಸಮರ್ಥಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎನ್ನುವುದನ್ನು ಗಮನಿಸಿತು. ಸಣ್ಣಪುಟ್ಟ ವಿಷಯಗಳನ್ನೆಲ್ಲಾ ಕ್ರೌರ್ಯ ಎಂದು ಪರಿಗಣಿಸಿ ವಿಚ್ಛೇದನವನ್ನು ನೀಡಲಾಗದು ಎಂದು ಹೇಳಿ ಮನವಿಯನ್ನು ವಜಾಗೊಳಿಸಿತು.