A1
ಸುದ್ದಿಗಳು

ಲಿವ್-ಇನ್ ಸಂಬಂಧದಲ್ಲಿರುವ ಮಹಿಳೆ, ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಬಹುದು: ಕೇರಳ ಹೈಕೋರ್ಟ್

ಮ್ಯಾಜಿಸ್ಟ್ರೇಟ್ ಎದುರು ಬಾಕಿ ಇರುವ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ಪೀಠ.

Bar & Bench

ಸಂಗಾತಿಯೊಂದಿಗೆ ಸಹಜೀವನ (ಲಿವ್‌-ಇನ್‌ ಸಂಬಂಧ) ನಡೆಸುತ್ತಿರುವ ಮಹಿಳೆ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆ (ಡಿ ವಿ ಕಾಯಿದೆ) ಅಡಿಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಬಹುದು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ವಿನೀತ್ ಗಣೇಶ್ ಮತ್ತು ಪ್ರಿಯಾಂಕಾ ವಾಸನ್ ನಡುವಣ ಪ್ರಕರಣ].

ಕೌಟುಂಬಿಕ ಸಂಬಂಧ ಹೊಂದಿರುವ ಪುರುಷನಿಂದ ಹಿಂಸೆಗೆ ತುತ್ತಾದ ಮಹಿಳೆ ಡಿ ವಿ ಕಾಯಿದೆಯಡಿ ಪ್ರಕರಣ ದಾಖಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ತಮ್ಮ ಸಹಜೀವನ, ಮದುವೆ, ಅಥವಾ ಮದುವೆಯ ಸ್ವರೂಪದ ಸಂಬಂಧ, ದತ್ತಕ ಅಥವಾ ಅವಿಭಕ್ತ ಕುಟುಂಬವಾಗಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾಗ ಅಥವಾ ಸಂಪರ್ಕ ಹೊಂದಿದ್ದಾಗ ಇದ್ದ ಸಂಬಂಧವನ್ನು ಈ ಕಾಯಿದೆ ಕೌಟುಂಬಿಕ ಸಂಬಂಧ ಎಂದು ವ್ಯಾಖ್ಯಾನಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.  

"ಮೇಲಿನ ವ್ಯಾಖ್ಯಾನಗಳಿಂದಾಗಿ, ಮಹಿಳೆ ಡಿ ವಿ ಕಾಯಿದೆಯಡಿಯೊಂದರಲ್ಲೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ವಿವಾಹ ಸ್ವರೂಪದ ಸಂಬಂಧದಲ್ಲಿ ವಾಸಿಸುವ ಹೆಣ್ಣು ಕೂಡ ಡಿ ವಿ ಕಾಯಿದೆ ಅಡಿಯಲ್ಲಿ ಪರಿಹಾರಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ... ಡಿ ವಿ ಕಾಯಿದೆಯ ಸೆಕ್ಷನ್ 2(q) ನಲ್ಲಿ ಪ್ರತಿವಾದಿಯ (ಪ್ರಿಯಾಂಕಾ ವಾಸನ್‌) ವ್ಯಾಖ್ಯಾನದ ಪ್ರಕಾರ, ಮದುವೆಯ ಸ್ವರೂಪದ ಸಂಬಂಧದಲ್ಲಿರುವ; ಬೇರೆ ರೀತಿಯಲ್ಲಿ ಹೇಳುವುದಾದರೆ ಸಹಜೀವನ ನಡೆಸುತ್ತಿರುವ ಹೆಣ್ಣು ಸಹ ಡಿ ವಿ ಕಾಯಿದೆಯ ಸೆಕ್ಷನ್ 12ರ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು” ಎಂದು ನ್ಯಾಯಾಲಯ ತಿಳಿಸಿದೆ.

ಕಾಯಿದೆಯ ಸೆಕ್ಷನ್ 12ರ ಅಡಿಯಲ್ಲಿ ತನ್ನ ವಿರುದ್ಧ ಹೂಡಲಾದ ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಬಾಕಿ ಇರುವ ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಲು ಬಯಸಿ ವಿನೀತ್‌ ಗಣೇಶ್‌ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಈ ಸಂದರ್ಭದಲ್ಲಿ ಅದು ಮ್ಯಾಜಿಸ್ಟ್ರೇಟ್ ಎದುರು ಬಾಕಿ ಇರುವ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ ವಿನೀತ್‌ ಗಣೇಶ್‌ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.