ಸಹಜೀವನ ನಡೆಸುತ್ತಿದ್ದ ಅಂತರ್ ಧರ್ಮೀಯ ಜೋಡಿಗೆ ಇತ್ತೀಚೆಗೆ ರಕ್ಷಣೆ ನಿರಾಕರಿಸಿರುವ ಅಲಾಹಾಬಾದ್ ಹೈಕೋರ್ಟ್ ಅಂತಹ ಸಂಬಂಧವನ್ನು ಸಾಮಾಜಿಕ ವಾಸ್ತವ ಎಂದು ಸುಪ್ರೀಂ ಕೋರ್ಟ್ ಒಪ್ಪಿರಬಹುದಾದರೂ ಅದಕ್ಕೆ ಉತ್ತೇಜನ ನೀಡಿಲ್ಲ ಎಂದು ಹೇಳಿದೆ [ಕಿರಣ್ ರಾವತ್ ಮತ್ತಿತರರು ಮತ್ತು ಸರ್ಕಾರ ನಡುವಣ ಪ್ರಕರಣ].
ಕಾನೂನು ರೂಢಿಗತವಾಗಿ ಮದುವೆಯ ಪರವಾಗಿದ್ದು ವಿವಿಧ ಪ್ರಕರಣಗಳಲ್ಲಿ ಲಿವ್ ಇನ್ ಸಂಬಂಧಗಳ ಬಗ್ಗೆ ಗಮನಿಸಿದಾಗ ಭಾರತೀಯ ಕೌಟುಂಬಿಕ ಜೀವನದ ಸಂರಚನೆಯನ್ನು ಅಲುಗಾಡಿಸುವ ಯಾವುದೇ ಉದ್ದೇಶ ಸುಪ್ರೀಂ ಕೋರ್ಟ್‌ಗೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ಸಂಗೀತಾ ಚಂದ್ರ ಮತ್ತು ನರೇಂದ್ರ ಕುಮಾರ್ ಜೊಹರಿ ಅವರಿದ್ದ ಪೀಠ ತಿಳಿಸಿತು.
“ಮೇಲೆ ಹೇಳಿದಂತೆ ಸುಪ್ರೀಂ ಕೋರ್ಟ್ ಅಂತಹ ಸಂಬಂಧಗಳನ್ನು ಪ್ರೋತ್ಸಾಹಿಸುವುದನ್ನು ಪರಿಗಣಿಸುವುದಿಲ್ಲ. ಕಾನೂನು ರೂಢಿಗತವಾಗಿ ಮದುವೆಯ ಪರವಾಗಿ ಪಕ್ಷಪಾತ ಹೊಂದಿದೆ. ಮದುವೆ ಎಂಬ ಸಂಸ್ಥೆಯನ್ನು ಸಂರಕ್ಷಿಸಲು ಮತ್ತು ಪ್ರೋತ್ಸಾಹಿಸಲು ವಿವಾಹಿತ ವ್ಯಕ್ತಿಗಳಿಗೆ ಇದು ಅನೇಕ ಹಕ್ಕು ಮತ್ತು ಸವಲತ್ತುಗಳನ್ನು ಮೀಸಲಿಟ್ಟಿದೆ. ಸುಪ್ರೀಂ ಕೋರ್ಟ್ ಸಾಮಾಜಿಕ ವಾಸ್ತವವನ್ನು ಸರಳವಾಗಿ ಒಪ್ಪಿದ್ದು ಅದು ಭಾರತೀಯ ಕೌಟುಂಬಿಕ ಜೀವನದ ಸಂರಚನೆಯನ್ನು ಅಲುಗಾಡಿಸುವ ಉದ್ದೇಶ ಹೊಂದಿಲ್ಲ” ಎಂದು ಹೈಕೋರ್ಟ್ ಆದೇಶ ತಿಳಿಸಿದೆ.
ಅಲ್ಲದೆ ಹೈಕೋರ್ಟ್‌ಗಳ ರಿಟ್ ನ್ಯಾಯವ್ಯಾಪ್ತಿಯು ಅಸಾಧಾರಣ ಸಂದರ್ಭಗಳಲ್ಲಿ ಬಳಸಬಹುದಾದ ಅಧಿಕಾರ ವ್ಯಾಪ್ತಿಯಾಗಿರುವುದರಿಂದ ಖಾಸಗಿ ಪಕ್ಷಕಾರರ ನಡುವಿನ ವ್ಯಾಜ್ಯಗಳನ್ನು ಪರಿಹರಿಸುವ ಉದ್ದೇಶ ಅದಕ್ಕೆ ಇಲ್ಲ ಎಂದ ನ್ಯಾಯಾಲಯ 29 ವರ್ಷದ ಹಿಂದೂ ಮಹಿಳೆ ಮತ್ತು 30 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ತಿರಸ್ಕರಿಸಿತು.
ಇದೇ ವೇಳೆ ಅದು “ಅರ್ಜಿದಾರರು ತಮ್ಮ ಸಂಬಂಧಿಕರಿಂದ ಯಾವುದೇ ಬೆದರಿಕೆ ಎದುರಿಸುತ್ತಿದ್ದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಎಫ್‌ಐಆರ್ ದಾಖಲಿಸಬಹುದು” ಎಂದು ನ್ಯಾಯಾಲಯ ನುಡಿಯಿತು. ಒಂದು ವೇಳೆ ಪೋಷಕರು ಅಥವಾ ಸಂಬಂಧಿಕರಿಗೆ ತಮ್ಮ ಮಗ ಅಥವಾ ಮಗಳು ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯ ಉದ್ದೇಶಕ್ಕಾಗಿ ಮನೆ ತೊರೆದಿದ್ದಾರೆ ಎಂದು ಕಂಡುಬಂದರೆ ಅವರು ಕೂಡ ಎಫ್‌ಐಆರ್ ದಾಖಲಿಸಲು ಸಮಾನ ಸ್ವತಂತ್ರರು ಎಂದು ಕೂಡ ಅದು ಹೇಳಿತು.