Aurangabad Bench, Bombay High Court  
ಸುದ್ದಿಗಳು

ವಿಚ್ಛೇದನಕ್ಕೆ ಮುನ್ನ ವೈವಾಹಿಕ ಮನೆ ತೊರೆದ ಮಹಿಳೆ ಆ ಮನೆಯಲ್ಲಿ ವಾಸಿಸುವ ಹಕ್ಕು ಕೇಳುವಂತಿಲ್ಲ: ಬಾಂಬೆ ಹೈಕೋರ್ಟ್

ವಿಚ್ಛೇದನಕ್ಕೂ ಮೊದಲು ವೈವಾಹಿಕ ಮನೆಯನ್ನು ತೊರೆಯುವಂತೆ ಬಲವಂತ ಮಾಡಲಾಗಿತ್ತು ಎಂಬುದನ್ನು ಸಾಬೀತು ಪಡಿಸುವ ಯಾವುದೇ ದಾಖಲೆಯನ್ನು ಪತ್ನಿ ಸಲ್ಲಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ.

Bar & Bench

ವಿಚ್ಛೇದನಕ್ಕೆ ಮುನ್ನವೇ ವೈವಾಹಿಕ ಮನೆಯನ್ನು ತೊರೆದಿದ್ದ ಮಹಿಳೆ ಒಂದು ವೇಳೆ ಮೇಲ್ಮನವಿ ಬಾಕಿ ಇದ್ದರೂ ಸಹ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ- 2005ರ (ಡಿವಿ ಆಕ್ಟ್) ಅಡಿಯಲ್ಲಿ ಆ ಮನೆಯಲ್ಲಿ ವಾಸಿಸುವ ಹಕ್ಕು ಕೇಳುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಇತ್ತೀಚೆಗೆ ಹೇಳಿದೆ [ಉಮಾಕಾಂತ್ ಹವಗಿರಾವ್ ಬೊಂದ್ರೆ ಮತ್ತು ಸಾಕ್ಷಿಅಲಿಯಾಸ್‌ ಸೋನಾಲಿ ಸೂರಜ್ ಬೊಂದ್ರೆ ನಡುವಣ ಪ್ರಕರಣ].

ಆ ಮೂಲಕ ಅತ್ತೆ ಮನೆಯಲ್ಲಿ ಮಹಿಳೆಗೆ ವಾಸಿಸುವ ಹಕ್ಕು ನೀಡಿದ್ದ ಮತ್ತು ಅಲ್ಲಿ ವಿದ್ಯುತ್, ಸ್ನಾನಗೃಹ, ಶೌಚಾಲಯ ಬಳಸಲು ಅವಕಾಶ ಕಲ್ಪಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಸಂದೀಪ್‌ಕುಮಾರ್ ಮೋರೆ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ರದ್ದುಗೊಳಿಸಿತು.

ಡಿವಿ ಕಾಯಿದೆಯ ಸೆಕ್ಷನ್ 17 ಗಂಡನ ಮನೆಯಲ್ಲಿ ವಾಸಿಸುವ ಹಕ್ಕನ್ನು ನೀಡುತ್ತದಾದರೂ, ಹಾಗೆ ಮಾಡಲು ವಿಚ್ಛೇದನಕ್ಕೂ ಮೊದಲು ಆ ಮಹಿಳೆ ವೈವಾಹಿಕ ಮನೆಯಲ್ಲಿ (ಅತ್ತೆ ಮಾವಂದಿರ ಜೊತೆಯಲ್ಲಿ ಗಂಡ ಇರುವ ಮನೆ) ವಾಸವಿರಬೇಕು ಎಂದು ಸ್ಪಷ್ಟಪಡಿಸಿತು.

“ಅಂತೆಯೇ, ಸಾಕ್ಷಿ (ವಿಚ್ಛೇದಿತ ಪತ್ನಿ) ನ್ಯಾಯಾಲಯ ನೀಡಿದ ವಿಚ್ಚೇದನ ತೀರ್ಪಿನ ಮೂಲಕ ಗಂಡನೊಂದಿಗಿನ ಮದುವೆ ನಂಟನ್ನು ಕಡಿದುಕೊಂಡಿದ್ದು ಅದಕ್ಕೂ ಮೊದಲು ನ್ಯಾಯಾಲಯವು ನೀಡಿದ್ದ ವಸತಿ ಆದೇಶವನ್ನು ಈಗ ಆಧರಿಸುವಂತಿಲ್ಲ. ಅದರಲ್ಲಿಯೂ ನಾಲ್ಕು ವರ್ಷಗಳ ಹಿಂದೆಯೇ ಗಂಡನ ಮನೆಯನ್ನು ತೊರೆದಿರುವಾಗ ಅದನ್ನು ಆಧರಿಸಲಾಗದು. ಇಂತಹ ಸ್ಥಿತಿಯಲ್ಲಿ ಆಕೆ ಮನೆಯಲ್ಲಿ ಇಲ್ಲದ ಕಾರಣ ಮನೆಯನ್ನು ತನ್ನಿಂದ ನಿಸ್ವಾಧೀನಗೊಳಿಸದಂತೆ ತಡೆಯಲು ಪರಿಹಾರ ಕೋರಲು ಅರ್ಹಳಲ್ಲ” ಎಂದು ನ್ಯಾಯಾಲಯ ಹೇಳಿದೆ.

ಆ ಮೂಲಕ ವಿಚ್ಛೇದಿತ ಪತ್ನಿ ಮಾವನ ಹೆಸರಿನಲ್ಲಿರುವ ಮನೆಯಲ್ಲಿ ವಾಸಿಸಲು ಅನುಮತಿ ನೀಡಿದ ಮ್ಯಾಜಿಸ್ಟ್ರೇಟ್‌ ಆದೇಶ ಪ್ರಶ್ನಿಸಿ ಗಂಡನ ಮನೆಯ ಕಡೆಯವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಪೀಠ ಪುರಸ್ಕರಿಸಿತು.