Punjab and Haryana High Court, Chandigarh.  
ಸುದ್ದಿಗಳು

ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯ ಆಸ್ತಿ ಹಕ್ಕು ಮೊಟಕಾಗಬಾರದು: 44 ವರ್ಷ ಹಳೆಯ ಪ್ರಕರಣದಲ್ಲಿ ಪಂಜಾಬ್ ಹೈಕೋರ್ಟ್ ತೀರ್ಪು

ಮೇವತ್ ಪ್ರದೇಶದ ಮೆವೋ ಜನಾಂಗದಲ್ಲಿ ಚಾಲ್ತಿಯಲ್ಲಿರುವ ಸಂಪ್ರದಾಯವನ್ನು ಆಧರಿಸಿ ವಿಚಾರಣಾ ನ್ಯಾಯಾಲಯ ರೆಹಮಾನಿ ಎಂಬ ಮಹಿಳೆಯು ಆಸ್ತಿಯ ಉತ್ತರಾಧಿಕಾರಿಯಲ್ಲ ಎಂದು ತೀರ್ಪು ನೀಡಿತ್ತು .

Bar & Bench

ತನ್ನ ಗಂಡನಿಂದ ವಾರಸುದಾರಳಾಗಿ ಪಡೆದ ಪೂರ್ವಜರದಲ್ಲದ ಆಸ್ತಿಯನ್ನು ಪರಭಾರೆ ಮಾಡುವ ಮಹಿಳೆಯ ಹಕ್ಕನ್ನು ಮೊಟಕುಗೊಳಿಸುವ ಯಾವುದೇ ಸಂಪ್ರದಾಯವು ಅಂತರ್ಗತವಾಗಿ ತಾರತಮ್ಯದಿಂದ ಕೂಡಿದೆ ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಈಚೆಗೆ ತೀರ್ಪು ನೀಡಿದೆ [ಮೊಹಮ್ಮದ್ ಅಶ್ರಫ್ ಇತರರು ಹಾಗೂ ಕಾನೂನುಬದ್ಧ ಉತ್ತರಾಧಿಕಾರಿಗಳ ಮೂಲಕ ಮೃತ ಸಾದಿಕ್ ಮತ್ತಿತರರ ನಡುವಣ ಪ್ರಕರಣ].

ನಲವತ್ನಾಲ್ಕು ವರ್ಷಗಳ ಹಿಂದೆ ಅಂದರೆ 1982ರಲ್ಲಿ ಭೂ ಉತ್ತರಾಧಿಕಾರ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಮತ್ತು ಮೊದಲ ಮೇಲ್ಮನವಿ ನ್ಯಾಯಾಲಯ ನೀಡಿದ್ದ ಎರಡು ತೀರ್ಪುಗಳನ್ನು ರದ್ದುಗೊಳಿಸಿ ನ್ಯಾಯಮೂರ್ತಿ ವೀರೆಂದರ್‌ ಅಗರ್‌ವಾಲ್‌ ಈ ತೀರ್ಪು ನೀಡಿದರು.

ಮೇವತ್ ಪ್ರದೇಶದ ಮೆವೋ ಜನಾಂಗದಲ್ಲಿ ಚಾಲ್ತಿಯಲ್ಲಿರುವ ಸಂಪ್ರದಾಯವನ್ನು ಆಧರಿಸಿ ವಿಚಾರಣಾ ನ್ಯಾಯಾಲಯ ರೆಹಮಾನಿ ಎಂಬ ಮಹಿಳೆ ಆಸ್ತಿಯ ಉತ್ತರಾಧಿಕಾರಿಯಲ್ಲ ಎಂದು ತೀರ್ಪು ನೀಡಿತ್ತು. ಮೇಯೋ ಸಮುದಾಯದ ವಿಧವೆಗೆ ತನ್ನ ತಂದೆ ಅಥವಾ ಪತಿಗೆ ಸೇರಿದ ಆಸ್ತಿಯಲ್ಲಿ ಕೇವಲ ಜೀವನಾವಧಿಯ ಹಕ್ಕು ಇರುತ್ತದೆ ಎಂಬ ಸಾಂಪ್ರಾದಾಯಿಕ ನಿಯಮವಿತ್ತು.

ಆದರೆ ಲಿಂಗ ಇಲ್ಲವೇ ವೈವಾಹಿಕ ಸ್ಥಿತಿಯನ್ನಷ್ಟೇ ಆಧರಿಸಿ ವಿಧಿಸಲಾದ ಯಾವುದೇ ನಿರ್ಬಂಧ ಕಾನೂನಿನ ಎದುರು ಎಲ್ಲರೂ ಸಮಾನರು ಮತ್ತು ಏಕಪಕ್ಷೀಯ ಅಥವಾ ಅಸಂಗತ ವರ್ಗೀಕರಣ ನಿಷೇಧಿಸುವ ಸಂವಿಧಾನದ 14ನೇ ವಿಧಿಗೆ ವಿರುದ್ಧವಾದುದು ಎಂದು ಹೈಕೋರ್ಟ್‌ ತೀರ್ಪು ನೀಡಿದೆ.

“ಆದ್ದರಿಂದ, ಮಹಿಳೆಯೊಬ್ಬರು ಸ್ವತಂತ್ರವಾಗಿ ಉತ್ತರಾಧಿಕಾರದ ರೂಪದಲ್ಲಿ ಪಡೆದ ಆಸ್ತಿಯನ್ನು ನಿರ್ವಹಿಸುವ ಅಥವಾ ವರ್ಗಾಯಿಸುವ ಹಕ್ಕಿನ ಮೇಲೆ ವಿಧಿಸಲಾದ ಯಾವುದೇ ಅಡ್ಡಿ ಸಂವಿಧಾನಾತ್ಮಕವಾಗಿ ಅಮಾನ್ಯ, ಕಾನೂನಾತ್ಮಕವಾಗಿ ಅಸ್ಥಿರವಾದುದು, ಹಾಗೂ ಬಾಧ್ಯತೆ ಇಲ್ಲದ್ದಾಗಿರುತ್ತದೆ” ಎಂದು ನ್ಯಾಯಾಲಯ ವಿವರಿಸಿದೆ.

ಮೇವೊ ಸಂಪ್ರದಾಯದ ಪ್ರಕಾರ ವಿಧವೆಗೆ ಕೇವಲ ಜೀವನಾವಧಿಯ ಹಕ್ಕು ಮಾತ್ರ ಇರುತ್ತದೆ. ಹೀಗಾಗಿ ಅಕ್ಕಾಲಾ ಅವರ ಪತ್ನಿ ರೆಹಮಾನಿ ಅವರು ಆಸ್ತಿ ಮಾರಾಟವನ್ನು ಅನೂರ್ಜಿತಗೊಳಿಸಬೇಕು ಎಂದು ಅವರ ಸೋದರಳಿಯ ದಾವೆ ಹೂಡಿದ್ದರು. ಅಕ್ಕಾಲಾರಿಗೆ ಮಕ್ಕಳಿಲ್ಲದ ಕಾರಣ, ರೆಹಮಾನಿಯ ಮರಣದ ನಂತರ ತಾನೇ ಆ ಭೂಮಿಯ ವಾರಸುದಾರ ಎಂದಿದ್ದರು. ಕೆಳ ನ್ಯಾಯಾಲಯಗಳು ಈ ವಾದಕ್ಕೆ ತಲೆದೂಗಿದ್ದವು.

ಆದರೆ ಹೈಕೋರ್ಟ್‌, ಆಸ್ತಿ ಪಿತ್ರಾರ್ಜಿತವಾದುದಾಗಿರದೇ ಇರುವುದರಿಂದ ರೆಹಮಾನಿ ಅವರಿಗೆ ಅದನ್ನು ಮಾರಾಟ ಮಾಡುವ ಪೂರ್ಣ ಹಕ್ಕು ಇದೆ ಎಂದು ಹೇಳಿದೆ. ಮಹಿಳೆಯ ಹಕ್ಕುಗಳನ್ನು ಕೇವಲ ಲಿಂಗದ ಆಧಾರದಲ್ಲಿ ಕಡಿತಗೊಳಿಸುವುದು ಸಂವಿಧಾನಕ್ಕೆ ವಿರುದ್ಧ ಎಂದಿರುವ ಅದು ರೆಹಮಾನಿ ಅವರು ಆಸ್ತಿಯನ್ನು ತಮ್ಮ ಮೊಮ್ಮಗಳ ಮದುವೆ ಖರ್ಚಿಗಾಗಿ ಸದುದ್ದೇಶದಿಂದ ಮಾರಾಟ ಮಾಡಿದ್ದರು ಎಂಬುದನ್ನು ಗಣನೆಗೆ ತೆಗೆದುಕೊಂಡಿತು. ಅಂತೆಯೇ ವಿಚಾರಣಾ ನ್ಯಾಯಾಲಯ ಮತ್ತು ಮೊದಲ ಮೇಲ್ಮನವಿ ನ್ಯಾಯಾಲಯ ನೀಡಿದ್ದ ತೀರ್ಪುಗಳನ್ನು ರದ್ದುಗೊಳಿಸಿದ ಅದು ಮೊಕದ್ದಮೆ ವಜಾಗೊಳಿಸಿತು.