Justice BV Nagarathna 
ಸುದ್ದಿಗಳು

ಮಹಿಳೆಯರು ಪುರುಷರ ಸ್ಥಾನ ಅತಿಕ್ರಮಿಸುತ್ತಿಲ್ಲ ಬದಲಿಗೆ ನ್ಯಾಯಯುತ ಸ್ಥಾನ ಮರಳಿ ಪಡೆಯುತ್ತಿದ್ದಾರೆ: ನ್ಯಾ. ನಾಗರತ್ನ

ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ಮಹಿಳೆಯರು ಹೆಚ್ಚು ಸ್ಥಾನ ಪಡೆಯುತ್ತಿರುವುದು ಪಿತೃಪ್ರಧಾನತೆಯನ್ನು ಹೊರಗಿಟ್ಟುದುದರ ಒಂದು ರೂಪ ಎಂದು ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಅವರು ಹೇಳಿದರು.

Bar & Bench

ಪುರುಷರು ನಿರ್ವಹಿಸುವಂತಹ ವೃತ್ತಿಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಹೇರಿಕೆಯಾಗಿರದೆ ಪಿತೃಪ್ರಧಾನ ತಾರತಮ್ಯದಿಂದಾಗಿ ಚಾರಿತ್ರಿಕವಾಗಿ ನಿರಾಕರಿಸಲಾಗಿದ್ದ ತಮ್ಮ ಸ್ಥಾನಗಳನ್ನು ಸ್ತ್ರೀಯರು ಪಡೆಯುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ವಿ ನಾಗರತ್ನ ತಿಳಿಸಿದರು.  

ಶುಕ್ರವಾರ ನವದೆಹಲಿಯಲ್ಲಿ ನಡೆದ ಹಿರಿಯ ವಕೀಲೆ ಮಹಾಲಕ್ಷ್ಮಿ ಪಾವನಿ ಅವರು ಬರೆದಿರುವ ʼವಿಮೆನ್‌ ಲಾಸ್‌ ಫ್ರಮ್‌ ವೂಂಬ್‌ ಟು ಟೂಂಬ್: ರೈಟ್ಸ್‌ ಅಂಡ್‌ ರೆಮಿಡೀಸ್‌ʼ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ಮಹಿಳೆಯರು ಹೆಚ್ಚು ಸ್ಥಾನ ಪಡೆಯುತ್ತಿರುವುದು ಪಿತೃಪ್ರಧಾನತೆಯನ್ನು ಹೊರಗಿಟ್ಟುದುದರ ಒಂದು ರೂಪ ಎಂದು ಅವರು ವಿವರಿಸಿದರು.

ಮಹಿಳೆಯರು ಹೊರಗಿನವರು ಎಂಬ ಗ್ರಹಿಕೆ ಸಲ್ಲದು. ಅಧಿಕಾರ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಬುದ್ಧಿಶಕ್ತಿ ಸ್ವಾಭಾವಿಕವಾಗಿ ಪುರುಷರಿಗೆ ಸೇರಿದ್ದು ಎಂಬ ಅಂತಹ ದೃಷ್ಟಿಕೋನಗಳು ಕೇವಲ ಪ್ರಾಚೀನ ಸ್ವರೂಪದ್ದಷ್ಟೇ ಅಲ್ಲ ಮೂಲತಃ ದೋಷದಿಂದ ಕೂಡಿರುವಂತಹವು ಎಂದು ಅವರು ಹೇಳಿದರು.

ಮಹಿಳೆಯರು ಬೇರೆಯವರ ಪ್ರದೇಶದೊಳಗೆ ನುಸುಳುತ್ತಿಲ್ಲ ಅಥವಾ ಒಳಗೆ ಕಾಲಿಡುತ್ತಿಲ್ಲ; ಬದಲಾಗಿ, ಅವರು ನಾಗರಿಕರು, ಕೊಡುಗೆದಾರರು ಮತ್ತು ತಮ್ಮದೇ ಆದ ರೀತಿಯಲ್ಲಿ ನಾಯಕರು. ಅವರು ತಮ್ಮ ನ್ಯಾಯಯುತ ಸ್ಥಾನ ಮರಳಿ ಪಡೆಯುತ್ತಿದ್ದಾರೆ ಎಂದು ನ್ಯಾಯಮೂರ್ತಿ ನಾಗರತ್ನ ಬಣ್ಣಿಸಿದರು.

ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ತ್ವರಿತವಾಗಿ ಜಾರಿಗೆ ತರಬೇಕು. ಅದು ಸಾಕಾರಗೊಂಡರೆ ಭಾರತೀಯ ಮಹಿಳೆಯರು ಲಿಂಗ ಸಮಾನತೆಗಾಗಿ ನಡೆಸಿದ "ಶತಮಾನಗಳ ಹೋರಾಟ ತನ್ನ ಉಚ್ಛ್ರಾಯ ಸ್ಥಿತಿ ತಲುಪಿದಂತಾಗುತ್ತದೆ ಎಂದರು.

"ನಾವು ಪುರುಷರ ವಿರೋಧಿಗಳಲ್ಲ. ಬದಲಿಗೆ ಮಹಿಳೆಯರ ಪರವಾಗಿದ್ದೇವೆ" ಎಂದ ಅವರು ಪತಿ ಅಥವಾ ಅವನ ಸಂಬಂಧಿಕರಿಂದ ಮಹಿಳೆಯ ಮೇಲೆ ನಡೆಯುವ ಕ್ರೌರ್ಯವನ್ನು ಅಪರಾಧೀಕರಿಸುವ  ಐಪಿಸಿ ಸೆಕ್ಷನ್‌ 498 ಎ ದುರುಪಯೋಗವಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.  

ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್‌, ನಿವೃತ್ತ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಕೃತಿಯ ಲೇಖಕಿ ಮಹಾಲಕ್ಷ್ಮಿ ಪಾವನಿ ಈ ಸಂದರ್ಭದಲ್ಲಿ ಮಾತನಾಡಿದರು.