ವರದಕ್ಷಿಣೆ ಬೇಡಿಕೆಗೆ ಸಂಬಂಧಿಸಿದಂತೆ ಸಾಕಷ್ಟು ಆರೋಪಗಳಿದ್ದರೂ ತನ್ನ ಪತಿಯನ್ನು ಆರೋಪಿಯನ್ನಾಗಿ ಮಾಡದೆ ಕೇವಲ ಅತ್ತೆ ಮಾವಂದಿರನ್ನು ಮಾತ್ರ ಗುರಿಯಾಗಿಸಿ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಮಹಿಳೆಯೊಬ್ಬರು ಹೂಡಿದ್ದ ಕ್ರೌರ್ಯದ ಮೊಕದ್ದಮೆ ವಿಲಕ್ಷಣ ಎಂದ ಸುಪ್ರೀಂ ಕೋರ್ಟ್ ಈಚೆಗೆ ಅದನ್ನು ರದ್ದುಗೊಳಿಸಿದೆ.
ಪ್ರಕರಣದಲ್ಲಿ ಪತ್ನಿ ಜೊತೆಗೆ ಪತಿಯೂ ಸೇರಿ ತನ್ನ ಪೋಷಕರ ವಿರುದ್ಧ ಮೊಕದ್ದಮೆ ಹೂಡಿದ್ದರು ಎಂದು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಯ ವಿಭಾಗವನ್ನು ದೂರುದಾರರು ಮತ್ತು ಆಕೆಯ ಪತಿ ಪರಸ್ಪರ ಹಂಚಿಕೊಂಡಿದ್ದಾರೆ ಎಂದು ತೋರುತ್ತದೆ. ಪತಿ ಸಿವಿಲ್ ಪ್ರಕರಣ ಹೂಡಿದ್ದರೆ ಪತ್ನಿ ಕ್ರಿಮಿನಲ್ ಮೊಕದ್ದಮೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕುತೂಹಲಕಾರಿ ಸಂಗತಿ ಎಂದರೆ ಒಂದು ಮೊಕದ್ದಮೆಯ ಬಗ್ಗೆ ಇನ್ನೊಂದು ಮೊಕದ್ದಮೆಯಲ್ಲಿ ಪ್ರಸ್ತಾಪವಿಲ್ಲ ಎಂದು ನ್ಯಾಯಾಲಯ ನುಡಿದಿದೆ.
ಇದಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೆ ಮುಂದಾಗದೆ ಆರೋಪಪಟ್ಟಿಯಲ್ಲಿ ಮಹಿಳೆಯ ಆರೋಪಗಳನ್ನೇ ಪುನರುಚ್ಚರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ ಆರೋಪಪಟ್ಟಿ ಸಲ್ಲಿಸಿದ ನಂತರವೂ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿವುದಕ್ಕೆ ಅಡ್ಡಿ ಇರದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಐಪಿಸಿ ಸೆಕ್ಷನ್ 34 ಸಹ ವಾಚನ ಸೆಕ್ಷನ್ 498 ಎ, 323, 504, 506ರ ಅಡಿ ಯಾವುದೇ ಅಂಶಗಳನ್ನು ನಿರೂಪಿಸಿಲ್ಲ. ಮೇಲ್ಮನವಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮುಂದುವರೆಸಲು ಅವಕಾಶ ನೀಡಿದರೆ, ಅದು ಕಾನೂನಿನ ಪ್ರಕ್ರಿಯೆಯ ದುರುಪಯೋಗ ಮತ್ತು ನ್ಯಾಯದ ವಿಡಂಬನೆಯಾಗಲಿದೆ ಎಂಬ ತೀರ್ಮಾನಕ್ಕೆ ಬರಲು ನಮಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ನ್ಯಾಯಮೂರ್ತಿಗಳು ವಿವರಿಸಿದ್ದಾರೆ.
ಪ್ರಕರಣ ಕ್ರಿಮಿನಲ್ ಪ್ರಕ್ರಿಯೆಯ ದುರುಪಯೋಗದ ಮತ್ತೊಂದು ನಿದರ್ಶನವಾಗಿದ್ದು ಪ್ರಕರಣವನ್ನು ಇನ್ನಷ್ಟು ಮುಂದುವರೆಸುವುದು ನ್ಯಾಯಸಮ್ಮತವಲ್ಲ ಎಂದು ಪೀಠ ಹೇಳಿದೆ.
ಹಾಗಾಗಿ ಮೇಲ್ಮನವಿಯನ್ನು ಪುರಸ್ಕರಿಸಿದ ಅದು ಕ್ರಿಮಿನಲ್ ಮೊಕದ್ದಮೆಯನ್ನು ಎತ್ತಿ ಹಿಡಿದಿದ್ದ ಬಾಂಬೆ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು. ಜೊತೆಗೆ 2013ರ ಕ್ರಿಮಿನಲ್ ದೂರು ಹಾಗೂ ಆರೋಪಪಟ್ಟಿಯನ್ನು ಕೂಡ ರದ್ದುಪಡಿಸಿತು.