H D Revanna and Bengaluru city civil court 
ಸುದ್ದಿಗಳು

ಮಹಿಳೆ ಅಪಹರಣ ಪ್ರಕರಣ: ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ಜಾಮೀನು ಆದೇಶವನ್ನು 5 ಗಂಟೆಗೆ ಪ್ರಕಟಿಸಲಿರುವ ನ್ಯಾಯಾಲಯ

Bar & Bench

ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ಜಾಮೀನು ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಸಂಜೆ 5 ಗಂಟೆಗೆ ಕಾಯ್ದಿರಿಸಿದೆ.

ಎಚ್‌ ಡಿ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ನಡೆಸಿದರು.

ಪ್ರಾಸಿಕ್ಯೂಷನ್‌ ಪರವಾಗಿ ವಾದಿಸಿದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್‌ ನಾಯ್ಕ್‌ ಮತ್ತು ಜಯ್ನಾ ಕೊಠಾರಿ ಅವರು “ಎಚ್‌ ಡಿ ರೇವಣ್ಣ ಕುಟುಂಬವು ರಾಜಕೀಯವಾಗಿ ಪ್ರಭಾವಿಯಾಗಿದೆ. ಈ ಹಿಂದೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದಾಗ ಹಾಸನ ಜಿಲ್ಲೆಗೆ ಬಿಡುಗಡೆಯಾದಗಿದ್ದ 576 ಕೋಟಿ ರೂಪಾಯಿ ಅನುದಾನವನ್ನು ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ರೇವಣ್ಣ ಕುಟುಂಬದ ವಿರುದ್ಧ ಹಲವು ಚುನಾವಣಾ ಅಕ್ರಮದ ದೂರಗಳನ್ನು ಸಲ್ಲಿಕೆ ಮಾಡಿದ್ದರೂ ಅವರ ಕುಟುಂಬ ಪ್ರಭಾವಶಾಲಿಯಾಗಿರುವ ಕಾರಣ ಅವೆಲ್ಲದರಲ್ಲೂ ಬಿ ವರದಿ ಸಲ್ಲಿಕೆಯಾಗಿದೆ. ಇಂಥ ಪರಿಸ್ಥಿತಿ ಇರುವಾಗ ಇವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶವಾಗದೇ ಉಳಿಯುತ್ತದೆಯೇ?” ಎಂದು ಬಲವಾಗಿ ವಾದಿಸಿದರು.

ಮುಂದುವರಿದು, “ರೇವಣ್ಣ ಕುಟುಂಬ ಪಿತೂರಿ ನಡೆಸಿ ಸಂತ್ರಸ್ತೆಯನ್ನು ಅಪಹರಿಸಿದೆ. ಸಂತ್ರಸ್ತರ ಬದುಕು ಅಪಾಯದಲ್ಲಿದೆ” ಎಂದರು.

ಇದಕ್ಕೆ ಆಕ್ಷೇಪಿಸಿದ ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ “ಸಂತ್ರಸ್ತೆ ಮಹಿಳೆಯು ಕಳೆದ ಹತ್ತು ವರ್ಷಗಳಿಂದ ರೇವಣ್ಣ ಮನೆಯಲ್ಲಿ ಮನೆ ಕೆಲಸದವರಾಗಿದ್ದಾರೆ. ಸಂತ್ರಸ್ತೆಯು ರೇವಣ್ಣ ಸಂಬಂಧಿಯಾಗಿದ್ದಾರೆ. ರಿಮ್ಯಾಂಡ್‌ ಅರ್ಜಿಯಲ್ಲಿನ ಎಲ್ಲಾ ಅಂಶಗಳು ತಪ್ಪಿನಿಂದ ಕೂಡಿವೆ. ಯಾವುದೇ ರೀತಿಯಲ್ಲಿಯೂ ಐಪಿಸಿ ಸೆಕ್ಷನ್‌ 364ಎ ಇಲ್ಲಿ ಅನ್ವಯವಾಗುವುದಿಲ್ಲ” ಎಂದು ಆಕ್ಷೇಪಿಸಿದರು.

ಇದಕ್ಕೂ ಮುನ್ನ, ಪ್ರಾಸಿಕ್ಯೂಷನ್‌ ಪರವಾಗಿ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಇದಕ್ಕೆ ಸಿ ವಿ ನಾಗೇಶ್‌ ಅವರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಅದರ ಒಂದು ಪ್ರತಿಯನ್ನೂ ಅವರಿಗೆ ನೀಡಲಾಯಿತು.