Rakhi
Rakhi  Pixabay
ಸುದ್ದಿಗಳು

ಲೈಂಗಿಕ ದೌರ್ಜನ್ಯ ಎಸಗಿದವ ರಾಖಿ ಕಟ್ಟಿಸಿಕೊಂಡರೆ ಜಾಮೀನು: ಮಧ್ಯಪ್ರದೇಶ ಹೈಕೋರ್ಟ್ ಷರತ್ತನ್ನು ಪ್ರಶ್ನಿಸಿದ ವಕೀಲೆಯರು

Bar & Bench

ಲೈಂಗಿಕ ದೌರ್ಜನ್ಯ ಎಸಗಿದವ ರಾಖಿ ಕಟ್ಟಿಸಿಕೊಳ್ಳಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ ಕಳೆದ ಜುಲೈನಲ್ಲಿ ನೀಡಿದ್ದ ತೀರ್ಪನ್ನು ಅರ್ಪಣಾ ಭಟ್ ಸೇರಿದಂತೆ 9 ಮಂದಿ ವಕೀಲೆಯರು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ.

ಆದರೂ ಜಾಮೀನಿನ ಕುರಿತಂತೆ ಯಾವುದೇ ಪ್ರಶ್ನೆ ಎತ್ತುತ್ತಿಲ್ಲ ಬದಲಿಗೆ ರಾಖಿ ಕಟ್ಟುವ ಷರತ್ತನ್ನು ಮಾತ್ರ ಪ್ರಶ್ನಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಅಡ್ವೊಕೇಟ್ ಆನ್ ರೆಕಾರ್ಡ್, ಪೂಕ್ರಂಬಂ ರಮೇಶ್ ಕುಮಾರ್ ಅವರು ಸಲ್ಲಿಸಿದ ಅರ್ಜಿಯಲ್ಲಿ ಜುಲೈ 30ರಂದು ಕೆಲ ಷರತ್ತುಗಳ ಆಧಾರದಲ್ಲಿ ನೀಡಿದ ಜಾಮೀನಿಗೆ ತಡೆ ನೀಡುವಂತೆ ಕೋರಲಾಗಿದೆ.

ಆರೋಪಿ ಆಗಸ್ಟ್ 3ರಂದು ಬೆಳಿಗ್ಗೆ 11 ಗಂಟೆಗೆ ತನ್ನ ಹೆಂಡತಿ ಜೊತೆಗೆ ಸಂತ್ರಸ್ತೆಯ ಮನೆಗೆ ತೆರಳಿ ಸಿಹಿ ಹಂಚಬೇಕು. ಸಂತ್ರಸ್ತೆಯ ಕೈಯಲ್ಲಿ ರಾಖಿ ಕಟ್ಟಿಸಿಕೊಳ್ಳಬೇಕು. ಜೊತೆಗೆ ಯಾವತ್ತಿಗೂ ಆಕೆಗೆ ತನ್ನ ಕೈಲಾದಷ್ಟು ರಕ್ಷಣೆ ನೀಡುವುದಾಗಿ ಪ್ರಮಾಣ ಮಾಡಬೇಕು. ಅಲ್ಲದೆ ಅಣ್ಣಂದಿರು, ತಂಗಿಯರಿಗೆ ಸಾಂಪ್ರದಾಯಿಕವಾಗಿ ಕೊಡುವಂತೆ ರೂ 11,000 ಮೊತ್ತವನ್ನು ನೀಡಬೇಕು. ಜೊತೆಗೆ ಆಕೆಯ ಆಶೀರ್ವಾದವನ್ನೂ ಪಡೆಯಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.

ಆದರೆ ವಕೀಲೆಯರು ಸಲ್ಲಿಸಿರುವ ಅರ್ಜಿಯಲ್ಲಿ, 'ತೀರ್ಪನ್ನು ಹೈಕೋರ್ಟೊಂದು ನೀಡಿರುವುದರಿಂದ ಘೋರ ಅಪರಾಧವನ್ನು ಕ್ಷುಲ್ಲಕಗೊಳಿಸಿದಂತಾಗುತ್ತದೆ. ಅಲ್ಲದೆ ಅಂತಹ ಅವಲೋಕನಗಳು ಮತ್ತು ನಿರ್ದೇಶನಗಳು ಕಾನೂನಿನಿಂದ ಗುರುತಿಸಲಾದ ನಿಜವಾದ ಅಪರಾಧವನ್ನು ಸರಳೀಕರಿಸಲು ಮುಂದಾಗಬಹುದು' ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಲೈಂಗಿಕ ದೌರ್ಜನ್ಯದಂತಹ ಸಂದರ್ಭಗಳಲ್ಲಿ ಸಂತ್ರಸ್ತರು ಎಫ್ಐಆರ್ ದಾಖಲಿಸುವುದು ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡುವುದು ಬಹಳ ಕಷ್ಟಕರ ಎಂಬ ವಾಸ್ತವ ಸಂಗತಿ ಬಗ್ಗೆ ಜಾಗರೂಕವಾಗಿ ಮತ್ತು ಸೂಕ್ಷ್ಮವಾಗಿ ಇರಬೇಕಾಗುತ್ತದೆ.
ಅರ್ಜಿದಾರರು

ಪ್ರಸ್ತುತ ಪ್ರಕರಣ ಭಾರಿ ಕಳವಳಕ್ಕೆ ಕಾರಣವಾಗಿದ್ದು ಮದುವೆ ಅಥವಾ ರಾಜಿ ಸಂಧಾನ ಏರ್ಪಡಿಸಿ ಆಗುವ ಹಾನಿ ತಪ್ಪಿಸಲು ಕೋರ್ಟುಗಳು ವರ್ಷಗಳನ್ನೇ ತೆಗೆದುಕೊಂಡಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಹೈಕೋರ್ಟ್ ನಿರ್ದೇಶನ ಸಂತ್ರಸ್ತೆಯ ಮನೆಯಲ್ಲಿಯೇ ಆಕೆಯ ಮೇಲೆ ದೌರ್ಜನ್ಯ ಎಸಗಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೆ ಸಂತ್ರಸ್ತೆಯ ಮನೆಗೆ ಆರೋಪಿ ಬಲವಂತವಾಗಿ ಪ್ರವೇಶಿಸಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ಅರ್ಜಿ ತಿಳಿಸುತ್ತದೆ.

ಕೋರ್ಟ್ ಸಂತ್ರಸ್ತೆಗೆ ನೀಡುವ ಪರಿಹಾರಕ್ಕೆ ವ್ಯತಿರಿಕ್ತವಾಗಿ ಅಣ್ಣ ತಂಗಿಗೆ ಸಾಂಪ್ರದಾಯಿಕವಾಗಿ ನೀಡುವಂತೆ 11 ಸಾವಿರ ರೂಪಾಯಿ ಕೊಡಬೇಕೆಂದು ಹೇಳಿರುವುದಕ್ಕೆ ಕೂಡ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಸುಪ್ರೀಂಕೋರ್ಟ್ ಅಕ್ಟೋಬರ್ 16ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದೆ.