ಲೈಂಗಿಕ ಅಪರಾಧಗಳ ವಿರುದ್ಧ ಲೈಂಗಿಕ ಅಲ್ಪಸಂಖ್ಯಾತರಿಗೆ ಸಮಾನ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಸುಪ್ರೀಂಕೋರ್ಟಿಗೆ ಪಿಐಎಲ್

ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಗಳಿಗೆ ಸೂಕ್ತ ಮಾರ್ಪಾಡು/ ಮರು ವ್ಯಾಖ್ಯಾನ ನೀಡಿ ಆ ವ್ಯಾಖ್ಯಾನಗಳಲ್ಲಿ ಲಿಂಗ ಪರಿವರ್ತಿತರು ಮತ್ತು ಮಂಗಳಮುಖಿಯರನ್ನು ಸೇರಿಸಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಲಿಂಗಪರಿವರ್ತಿತ ವ್ಯಕ್ತಿಗಳು
ಲಿಂಗಪರಿವರ್ತಿತ ವ್ಯಕ್ತಿಗಳು

ಭಾರತೀಯ ದಂಡ ಸಂಹಿತೆ (ಐಪಿಸಿ) ವ್ಯಾಪ್ತಿಯಲ್ಲಿ ಲಿಂಗಪರಿವರ್ತಿತ ಸಮುದಾಯಕ್ಕೆ ಲೈಂಗಿಕ ಅಪರಾಧಗಳಿಂದ ಸಮಾನ ರಕ್ಷಣೆ ನೀಡುವಂತೆ ಕೋರಿ ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ಯಾವುದೇ ಪುರುಷ, ಮಹಿಳೆ ಅಥವಾ ಮತ್ತೊಬ್ಬ ಲಿಂಗಪರಿವರ್ತಿತ ವ್ಯಕ್ತಿ ಈ ಲಿಂಗಪರಿವರ್ತಿತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದಾಗ ಅವರನ್ನು ರಕ್ಷಿಸುವಂತಹ ಯಾವುದೇ ಅವಕಾಶ ಐಪಿಸಿಯಲ್ಲಿ ಇಲ್ಲ ಎಂದು ಅರ್ಜಿಯಲ್ಲಿ ಗಮನ ಸೆಳೆಯಲಾಗಿದೆ.

ಐಪಿಸಿ ಸೆಕ್ಷನ್ 354 ಎ ಅಡಿಯಲ್ಲಿ ಬರುವ ಕೆಲ ಉಪ ಸೆಕ್ಷನ್ ಗಳಿಂದ ಲೈಂಗಿಕ ಕಿರುಕುಳಕ್ಕೆ ಬಲಿಯಾಗುವ ಲಿಂಗಪರಿವರ್ತಿತರನ್ನು ಹೊರಗಿಡಲಾಗಿದೆ. ಇದು ಸಂವಿಧಾನದ 14, 16 ಹಾಗೂ 21ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ವಕೀಲ ರಿಪಕ್ ಕನ್ಸಾಲ್ ಅವರು ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

Also Read
ಶಾಹೀನ್‌ಬಾಗ್ ಪ್ರತಿಭಟನೆ: ಸಾರ್ವಜನಿಕ ಹಕ್ಕು ಮತ್ತು ಪ್ರತಿಭಟನೆ ಹಕ್ಕಿನ ಸಮನ್ವಯ ಕುರಿತ ಆದೇಶ ಕಾಯ್ದಿರಿಸಿದ ನ್ಯಾಯಾಲಯ
Also Read
ನ್ಯಾಯಾಂಗ ನಿಂದನೆ: ಒಂದು ರೂಪಾಯಿ ದಂಡ ವಿಧಿಸಿ ಪ್ರಶಾಂತ್ ಭೂಷಣ್ ರನ್ನು ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್

ಈ ಸೆಕ್ಷನ್ ಗಳಿಗೆ ಸೂಕ್ತ ಮಾರ್ಪಾಡು/ವ್ಯಾಖ್ಯಾನ ನೀಡಿ ಆ ವ್ಯಾಖ್ಯಾನಗಳಲ್ಲಿ ಲಿಂಗ ಪರಿವರ್ತಿತರು ಮತ್ತು ಮಂಗಳಮುಖಿಯರನ್ನು ಉಲ್ಲೇಖಿಸುವಂತೆ ನಿರ್ದೇಶಿಸಬೇಕು ಎಂದು ರಿಪಕ್ ಕನ್ಸಾಲ್ ಕೋರಿದ್ದಾರೆ.

"ಗೌರವಾನ್ವಿತ ನ್ಯಾಯಾಲಯ ಲಿಂಗಪರಿವರ್ತಿತರನ್ನು ತೃತೀಯ ಲಿಂಗಿಗಳು ಎಂದು ಘೋಷಿಸಿದ್ದರೂ ಕೂಡ, ಪುರುಷ / ಸ್ತ್ರೀ ಅಥವಾ ಬೇರೊಬ್ಬ ಲಿಂಗಪರಿವರ್ತಿತ ವ್ಯಕ್ತಿ ಲೈಂಗಿಕ ದೌರ್ಜನ್ಯ ನಡೆಸಿದಾಗ ಅವರನ್ನು ರಕ್ಷಿಸುವ ಯಾವುದೇ ನಿಬಂಧನೆ/ಸೆಕ್ಷನ್ ಭಾರತೀಯ ದಂಡ ಸಂಹಿತೆಯಲ್ಲಿ ಇಲ್ಲ”.
ಸುಪ್ರೀಂಕೋರ್ಟಿಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಅರ್ಜಿಯ ಪ್ರಮುಖಾಂಶಗಳು:

  • ಪ್ರತಿ ಇಬ್ಬರು ಲಿಂಗಪರಿವರ್ತಿತ ವ್ಯಕ್ತಿಗಳಲ್ಲಿ ಒಬ್ಬರ ಮೇಲೆ ಅವರ ಜೀವಿತಾವಧಿಯ ಯಾವುದಾದರೂ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ಅಥವಾ ಹಲ್ಲೆ ನಡೆದಿರುತ್ತದೆ ಎಂಬ ಆಘಾತಕಾರಿ ಅಂಶವನ್ನು ಅಂಕಿ- ಅಂಶಗಳು ಬಹಿರಂಗಪಡಿಸಿವೆ.

  • ಯಾವುದೇ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಬಹುದು. ಅದರಲ್ಲಿಯೂ ಸಹಾಯ ಮಾಡುವ ಪಾತ್ರಗಳಲ್ಲಿರುವ ವೃತ್ತಿಪರರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮಗೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ.

  • ಶೇ 15ರಷ್ಟು ಲಿಂಗಪರಿವರ್ತಿತರು ಜೈಲು ಅಥವಾ ಪೊಲೀಸ್ ವಶದಲ್ಲಿದ್ದಾಗ ಲೈಂಗಿಕ ದಾಳಿಗೆ ತುತ್ತಾಗುತ್ತಾರೆ. ಭದ್ರತೆ ಇಲ್ಲದಿರುವುದು ಮತ್ತು ಪುರುಷ ಖೈದಿಗಳೊಂದಿಗೆ ಸೆರೆವಾಸ ಅನುಭವಿಸುವಂತೆ ಮಾಡುವುದು ಇದಕ್ಕೆ ಕಾರಣ. ಲಿಂಗಪರಿವರ್ತಿತರಿಗೆ ಪ್ರತ್ಯೇಕ ಜೈಲು, ವಾರ್ಡ್ ಅಥವಾ ಭದ್ರತೆ ಇಲ್ಲ.

  • ಲಿಂಗಪರಿವರ್ತಿತರ ವಿರುದ್ಧದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಈಗ ಮಹಿಳೆಯರ ವಿರುದ್ಧ ಹಲ್ಲೆ ಅಥವಾ ಕ್ರಿಮಿನಲ್ ದೌರ್ಜನ್ಯ ನಡೆದಾಗ ರಕ್ಷಣೆ ನೀಡುವ ಸೆಕ್ಷನ್ 354ಎ ಅಡಿ ದಾಖಲಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ದೆಹಲಿ ಹೈಕೋರ್ಟಿಗೆ ತಿಳಿಸಿದ್ದಾರೆ. ಆದರೆ ಸೂಕ್ತ ಕಾನೂನಿನ ಕೊರತೆಯಿಂದಾಗಿ ಇದು ಪರಿಣಾಮ ಬೀರುತ್ತಿಲ್ಲ.

  • ಸಂವಿಧಾನದ 21ನೇ ವಿಧಿಯನ್ನು ಅನುಲಕ್ಷಿಸಿ, ಲೈಂಗಿಕ ದೌರ್ಜನ್ಯವನ್ನು ನಿರ್ವಹಿಸುವ ಐಪಿಸಿಯ ವಿಭಾಗಗಳು / ನಿಬಂಧನೆಗಳ ವ್ಯಾಖ್ಯಾನಗಳಲ್ಲಿ ಲಿಂಗಪರಿವರ್ತಿತರು /ಭಿನ್ನಲಿಂಗಾಸಕ್ತರು/ ಕಿನ್ನರ್ ಮತ್ತು ಮಂಗಳಮುಖಿಯರನ್ನು ಸೇರಿಸಲು ಸೂಕ್ತ ಮಾರ್ಪಾಡು / ವ್ಯಾಖ್ಯಾನಗಳನ್ನು ರೂಪಿಸಬೇಕು.

  • ಲೈಂಗಿಕ ಕಿರುಕುಳ ಕಾರ್ಯವಿಧಾನಗಳೊಂದಿಗೆ ವ್ಯವಹರಿಸುವಾಗ ಲಿಂಗ-ತಟಸ್ಥ ಕಾನೂನುಗಳನ್ನು ರೂಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು.

  • ಲಿಂಗದ ಆಧಾರದ ಮೇಲೆ ತಾರತಮ್ಯ ಮತ್ತು ಕಿರುಕುಳಕ್ಕೆ ದಂಡ ವಿಧಿಸುವ ತಾರತಮ್ಯ ವಿರೋಧಿ ಮಸೂದೆಯನ್ನು ಶಾಸಕಾಂಗವು ಅಂಗೀಕರಿಸಬೇಕು.

Related Stories

No stories found.
Kannada Bar & Bench
kannada.barandbench.com