ಸುದ್ದಿಗಳು

ಮಹಿಳಾ ಕೆಲಸಗಾರರ ಒಪ್ಪಿಗೆ ಇಲ್ಲದೆ ಸಂಜೆ 7ರ ನಂತರ ಕೆಲಸ ಮಾಡಿಸುವಂತಿಲ್ಲ: ಉತ್ತರ ಪ್ರದೇಶ ಸರ್ಕಾರ

Bar & Bench

ಯಾವುದೇ ಮಹಿಳಾ ಉದ್ಯೋಗಿಯನ್ನು ಆಕೆಯ ಲಿಖಿತ ಒಪ್ಪಿಗೆ ಇಲ್ಲದೆ ಉದ್ಯೋಗದಾತರು ಬೆಳಗ್ಗೆ 6 ಗಂಟೆಯ ಮೊದಲು ಮತ್ತು ಸಂಜೆ 7ರ ನಂತರ ದುಡಿಸಿಕೊಳ್ಳುವಂತಿಲ್ಲ ಮತ್ತು ಈ ಅವಧಿಯಲ್ಲಿ ಅವರು ಕೆಲಸ ಮಾಡಲು ನಿರಾಕರಿಸಿದರೆ ಅವರನ್ನು ವಜಾಗೊಳಿಸುವಂತಿಲ್ಲ ಎಂದು ನಿಯಮ ವಿಧಿಸಿ ಉತ್ತರ ಪ್ರದೇಶ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕೆಲವು ಷರತ್ತುಗಳಿಗೆ ಒಳಪಟ್ಟು ಕಾರ್ಖಾನೆಗಳ ಕಾಯಿದೆಯ ಸೆಕ್ಷನ್ 66 ರ ಅಡಿಯಲ್ಲಿ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.

ಮಹಿಳಾ ಕಾರ್ಮಿಕರಿಗೆ ಸುರಕ್ಷಿತ ಕೆಲಸದ ವಾತಾವರಣ ಒದಗಿಸುವುದಕ್ಕಾಗಿ ರಾತ್ರಿ ವೇಳೆ ಅವರ ಮನೆಯಿಂದ ಕಚೇರಿಗೆ ಉಚಿತ ಸಾರಿಗೆ ವ್ಯವಸ್ಥೆ, ಆಹಾರ ಪೂರೈಕೆ ಇತ್ಯಾದಿ ಷರತ್ತುಗಳನ್ನು ಕೂಡ ಉದ್ಯೋಗದಾತರಿಗೆ ವಿಧಿಸಲಾಗಿದೆ.

ಅಲ್ಲದೆ ಶೌಚಗೃಹಗಳು, ಬಟ್ಟೆ ಬದಲಿಸುವ ಕೊಠಡಿ, ಕುಡಿಯುವ ನೀರಿನ ಸೌಲಭ್ಯ ಮತ್ತು ಕೆಲಸದ ಸ್ಥಳದ ಬಳಿ ಬೆಳಕಿನಂತಹ ಅನುಕೂಲಕರ ಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ಕಾರ್ಖಾನೆಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆಗಟ್ಟಲು ಪರಿಹಾರೋಪಾಯ ಕಂಡುಕೊಳ್ಳಬೇಕು ಮತ್ತು ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಉದ್ಯೋಗದಾತರಿಗೆ ನಿರ್ದೇಶಿಸಲಾಗಿದೆ.

ನಿಗದಿತ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಕಾರ್ಖಾನೆಗಳ ಪರವಾನಗಿ ತಂತಾನೇ ರದ್ದುಗೊಳ್ಳಲಿದೆ ಎಂದು ಅಧಿಸೂಚನೆ ಎಚ್ಚರಿಸಿದೆ.