ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸುವವರೆಗೂ ಕ್ರಮ ಕೈಗೊಳ್ಳದಿರುವುದು ಉತ್ತರ ಪ್ರದೇಶ ಸರ್ಕಾರದ ಚಾಳಿ: ಸುಪ್ರೀಂ ಕೋರ್ಟ್‌

ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಸಿಎಂಒ ಅಧಿಕಾರಿಗಳಿಗೆ ಸಮನ್ಸ್‌ ನೀಡಿದ್ದ ಅಲಾಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.
Uttar Pradesh and Supreme Court
Uttar Pradesh and Supreme Court
Published on

ನ್ಯಾಯಾಲಯದ ಆದೇಶಗಳ ಬಗ್ಗೆ ಗಂಭೀರವಾಗಿ ನಡೆದುಕೊಳ್ಳದ ಉತ್ತರ ಪ್ರದೇಶ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವವರೆವಿಗೂ ಕ್ರಮಕೈಗೊಳ್ಳದಿರುವುದು ಉತ್ತರ ಪ್ರದೇಶ ಸರ್ಕಾರಕ್ಕೆ ಚಾಳಿಯಾಗಿದೆ ಎಂದು ಹೇಳಿದೆ (ಉತ್ತರ ಪ್ರದೇಶ ಸರ್ಕಾರ ವರ್ಸಸ್‌ ರಾಹುಲ್‌ ಯಾದವ್).‌

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಸೇರಿದಂತೆ ಎಂಟು ಅಧಿಕಾರಿಗಳನ್ನು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಲು ಆದೇಶಿಸಿದ್ದ‌ ಅಲಾಹಾಬಾದ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿತು.

ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ರಮಣ ಅವರು “ಇದನ್ನು ಹೇಳಲು ವಿಷಾದಿಸುತ್ತೇನೆ. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸದ ಹೊರತು ಕ್ರಮ ಕೈಗೊಳ್ಳದಿರುವುದು ಈ ರಾಜ್ಯ ಸರ್ಕಾರದ ಚಾಳಿಯಾಗಿದೆ” ಎಂದರು.

ನಾಪತ್ತೆಯಾಗಿರುವ ವ್ಯಕ್ತಿಯ ತನಿಖೆ ಮತ್ತು ಕಾನೂನುಬಾಹಿರ ವಶದ ಕುರಿತು ಪರಿಶೀಲಿಸಲು ಎರಡು ವಿಶೇಷ ತನಿಖಾ ದಳಗಳನ್ನು ರಚಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಗರಿಮಾ ಪ್ರಸಾದ್‌ ಹೇಳಿದರು.

ಇದಕ್ಕೆ ನ್ಯಾಯಮೂರ್ತಿ ಕೊಹ್ಲಿ ಅವರು “ಒಂದು ವರ್ಷವಾಗಿದೆ. ಕಳೆದ ವರ್ಷದ ಮೇ 7ರಲ್ಲಿ ಘಟನೆಯಾಗಿದ್ದು, ಒಂದು ವರ್ಷವಾಗಿದೆ” ಎಂದರು. ನ್ಯಾಯಮೂರ್ತಿ ಮುರಾರಿ ಅವರು “ಅವರ ದೇಹ ಎಲ್ಲಿದೆ ಎಂದೇನಾದರೂ ಪತ್ತೆ ಮಾಡಿದಿರಾ?” ಎಂದರು.

ಇದಕ್ಕೆ ಎಎಜಿ ಪ್ರಸಾದ್‌ ಅವರು “ಪ್ರಯಾಗ್‌ರಾಜ್‌ನಲ್ಲಿನ ಎಲ್ಲಾ ಸ್ಮಶಾನಗಳಲ್ಲಿ ಪರಿಶೀಲಿಸಲಾಗಿದೆ. ನಾಪತ್ತೆಯಾಗಿರುವ ವ್ಯಕ್ತಿಯ ಕೊನೆಯ ವೈದ್ಯಕೀಯ ಪರೀಕ್ಷೆಯ ಪ್ರಕಾರ ಅವರು ಆರೋಗ್ಯದಿಂದಿದ್ದರು” ಎಂದರು.

ಇದಕ್ಕೆ ನ್ಯಾ. ಮುರಾರಿ ಅವರು “ಹಾಗಾದರೆ ಅವರು ಗಾಳಿಯಲ್ಲಿ ಅದೃಶ್ಯರಾದರು ಅಲ್ಲವೇ!” ಎಂದು ಉದ್ಗರಿಸಿದರು.

ಆಗ ಎಎಜಿ ಪ್ರಸಾದ್‌ ಅವರು “ಅಲಾಹಾಬಾದ್‌ ಹೈಕೋರ್ಟ್‌ ಮೃತದೇಹ ತರಲು ಹೇಳುತ್ತಿದೆ. ನಾಪತ್ತೆ ಪ್ರಕರಣದಲ್ಲಿ ಮೃತದೇಹ ಹೇಗೆ ತರುವುದು? ಇದು ಅಸಾಧ್ಯ… ಇದಕ್ಕಾಗಿ ನಾವು ಹೈಕೋರ್ಟ್‌ ಮುಂದೆ ಕ್ಷಮೆಯಾಚಿಸಿದ್ದೇವೆ. ಇಂದು ಸಿಎಂಒ, ಮುಖ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರನ್ನು ಪೀಠದ ಮುಂದೆ ಹಾಜರಾಗಲು ಸೂಚಿಸಲಾಗಿದೆ” ಎಂದರು.

Also Read
ಉತ್ತರ ಪ್ರದೇಶ ಸಿಎಂ 'ಯೋಗಿ' ಶೀರ್ಷಿಕೆ ಬಳಸಬಾರದೆಂದು ಕೋರಿದ್ದ ಪಿಐಎಲ್ ವಜಾಗೊಳಿಸಿದ ಅಲಾಹಾಬಾದ್ ಹೈಕೋರ್ಟ್‌

ಅಲಾಹಾಬಾದ್‌ ಹೈಕೋರ್ಟ್‌ನಲ್ಲಿನ ವಿಚಾರಣೆಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್‌, ನೋಟಿಸ್‌ ಜಾರಿ ಮಾಡಿದೆ. ಕಾನೂನು ವೆಚ್ಚಕ್ಕಾಗಿ ನಾಪತ್ತೆಯಾಗಿರುವ ವ್ಯಕ್ತಿಯ ಕುಟುಂಬಕ್ಕೆ ₹50,000 ಪಾವತಿಸಲು ಉತ್ತರ ಪ್ರದೇಶಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

ಕಳೆದ ವರ್ಷದ ಮೇನಲ್ಲಿ ಜೂನಿಯರ್‌ ಎಂಜಿನಿಯರ್‌ ಒಬ್ಬರು ನಾಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಮನವಿಯ ವಿಚಾರಣೆ ನಡೆಸಿದ್ದ ಅಲಾಹಾಬಾದ್‌ ಹೈಕೋರ್ಟ್‌ ಅಧಿಕಾರಿಗಳ ಹಾಜರಾತಿಗೆ ಆದೇಶಿಸಿತ್ತು.

Kannada Bar & Bench
kannada.barandbench.com