School children 
ಸುದ್ದಿಗಳು

ರೋಹಿಂಗ್ಯಾ ಮಕ್ಕಳಿಗೆ ಶಿಕ್ಷಣ: ತಾರತಮ್ಯ ಮಾಡುವಂತಿಲ್ಲ ಎಂದ ಸುಪ್ರೀಂ ಕೋರ್ಟ್

"ಶಿಕ್ಷಣದ ವಿಷಯದಲ್ಲಿ ಯಾವುದೇ ತಾರತಮ್ಯ ಇರುವಂತಿಲ್ಲ" ಎಂದು ನ್ಯಾಯಾಲಯ ಇಂದು ಪ್ರಕರಣದ ವಿಚಾರಣೆ ನಡೆಸುವಾಗ ಅಭಿಪ್ರಾಯಪಟ್ಟಿತು.

Bar & Bench

ಮಕ್ಕಳಿಗೆ ಶಿಕ್ಷಣ ನೀಡುವ ವಿಷಯದಲ್ಲಿ ಯಾವುದೇ ತಾರತಮ್ಯ ಇರಬಾರದು. ಶಾಲೆಗಳಿಗೆ ಪ್ರವೇಶ ಪಡೆಯಲು ಕಷ್ಟಪಡುತ್ತಿರುವ ರೋಹಿಂಗ್ಯಾ ವಲಸಿಗರ ಮಕ್ಕಳಿಗೆ ಕೂಡ ಇದು ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ತಿಳಿಸಿದೆ [ ರೋಹಿಂಗ್ಯಾ ಹ್ಯೂಮನ್‌ ರೈಟ್ಸ್‌ ಇನಿಷಿಯೇಟೀವ್‌ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಆಧಾರ್‌ ಕಾರ್ಡ್‌ ಇರಬೇಕು ಎಂದು ಒತ್ತಾಯಿಸದೆ ಮತ್ತು ಮಕ್ಕಳ ಪೌರತ್ವ ಲೆಕ್ಕಿಸದೆ ಲೆಕ್ಕಿಸದೆ ರೋಹಿಂಗ್ಯಾ ನಿರಾಶ್ರಿತರಿಗೆ ಶಾಲಾ ಪ್ರವೇಶ ಮತ್ತು ಸರ್ಕಾರಿ ಸೌಲಭ್ಯಗಳನ್ನು ನೀಡುವಂತೆ ಕೋರಿ ಸರ್ಕಾರೇತರ ಸಂಸ್ಥೆ ರೋಹಿಂಗ್ಯಾ ಹ್ಯೂಮನ್‌ ರೈಟ್ಸ್‌ ಇನಿಷಿಯೇಟೀವ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೆ ಸಿಂಗ್ ಅವರಿದ್ದ ಪೀಠ ಈ ವಿಚಾರ ತಿಳಿಸಿದೆ.

ಇಂದು ಪ್ರಕರಣವನ್ನು ಸಂಕ್ಷಿಪ್ತವಾಗಿ ಆಲಿಸಿದ ನ್ಯಾಯಾಲಯ ಶಿಕ್ಷಣದ ವಿಚಾರವಾಗಿ ಯಾವುದೇ ತಾರತಮ್ಯ ಇರುವಂತಿಲ್ಲ ಎಂದು ಸ್ಪಷ್ಟಪಡಿಸಿತು.

ಸರ್ಕಾರೇತರ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ , ರೋಹಿಂಗ್ಯಾ ನಿರಾಶ್ರಿತರು ಹತಾಶ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದರು.

ಈ ಮಧ್ಯೆ ಮಕ್ಕಳಿಗೆ ಯಾವ ರೀತಿಯ ಪರಿಹಾರ ದೊರಕಿಸಿಕೊಡಬಹುದು ಎಂಬುದನ್ನು ಪರಿಶೀಲಿಸುವುದಕ್ಕಾಗಿ ಅವರು ಪ್ರಸ್ತುತ ಎಲ್ಲಿ ವಾಸಿಸುತ್ತಿದ್ದಾರೆ ಎಂಬುದರ ದಾಖಲೆಗಳನ್ನು ಒದಗಿಸುವಂತೆ ಕೋರಿತು. ಇದೇ ವೇಳೆ ಅಪ್ರಾಪ್ತ ಮಕ್ಕಳ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸದಿರುವುದು ಉತ್ತಮ ಎಂದು ಅದು ನುಡಿಯಿತು.

ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (ಯುಎನ್‌ಎಚ್‌ಸಿಆರ್‌) ನೀಡಿದ ನಿರಾಶ್ರಿತರನ್ನು ಗುರುತಿಸುವ ಕಾರ್ಡ್‌ಗಳು ರೋಹಿಂಗ್ಯಾಗಳ ಬಳಿ ಇವೆ ಎಂದು ಗೊನ್ಸಾಲ್ವೆಸ್ ಉತ್ತರಿಸಿದರು. ಆಗ ನ್ಯಾಯಾಲಯ ನಿರಾಶ್ರಿತರ ವಾಸಸ್ಥಳವನ್ನು ದೃಢೀಕರಿಸುವ ವಿವರಗಳನ್ನು ಸಲ್ಲಿಸಿದ ನಂತರ ಪರಿಹಾರ ಹೇಗೆ ಕೈಗೊಳ್ಳಬಹುದು ಎಂಬುದನ್ನು ಪರಿಶೀಲಿಸುವುದಾಗಿ ಸೂಚಿಸಿತು.

"ಶಿಕ್ಷಣದ ವಿಷಯದಲ್ಲಿ ಯಾವುದೇ ತಾರತಮ್ಯ ಇರುವಂತಿಲ್ಲ. ಅವರು ಎಲ್ಲಿದ್ದಾರೆಂದು ನಾವು ತಿಳಿದುಕೊಂಡು ಪರಿಹಾರಕ್ಕೆ ವ್ಯವಸ್ಥೆ ಮಾಡಬೇಕಿದೆ. ಅವರು ಎಲ್ಲಿ ಮತ್ತು ಹೇಗೆ ವಾಸಿಸುತ್ತಿದ್ದಾರೆ ಎಂಬುದರ ಬಗ್ಗೆ ನಮಗೆ ತಿಳಿಯಬೇಕಿದೆ " ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ವಿಚಾರಣೆ ಫೆಬ್ರವರಿ 28 ರಂದು ಮತ್ತೆ ನಡೆಯಲಿದೆ.

ಮ್ಯಾನ್ಮಾರ್‌ನಿಂದ ಭಾರತಕ್ಕೆ ಬಂದಿರುವ ರೋಹಿಂಗ್ಯಾ ನಿರಾಶ್ರಿತರ ಮಕ್ಕಳಿಗೆ ಶಿಕ್ಷಣ ಸೌಲಭ್ಯ ನೀಡುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಇದೇ ರೀತಿಯ ಅರ್ಜಿಯನ್ನು ದೆಹಲಿ ಹೈಕೋರ್ಟ್ ಈ ಹಿಂದೆ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ [ನಾಗರಿಕ ಹಕ್ಕುಗಳ  ಗುಂಪಾದ ಸೋಷಿಯಲ್‌ ಜ್ಯೂರಿಸ್ಟ್‌ ಮತ್ತು ದೆಹಲಿ ಮಹಾನಗರ ಪಾಲಿಕೆ ಇನ್ನಿತರರ ನಡುವಣ ಪ್ರಕರಣ] ಫೆಬ್ರವರಿ 17 ರಂದು ವಿಚಾರಣೆಗೆ ಬರಲಿದೆ.